ಮೈಸೂರು: ಲೋಕಸಭೆ ಚುನಾವಣೆ ಗೆಲ್ಲಲು ಕರ್ನಾಟಕದಿಂದ 100 ಕೋಟಿ ಹಣ ಸಂಗ್ರಹಿಸಿ ದೇಶದ ಇತರ ಕಡೆ ಸಾಗಣೆ ಮಾಡಿ ಕರ್ನಾಟಕ ಇತರ ರಾಜ್ಯಗಳಿಗೆ ಎಟಿಎಂ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ವಿಜಯಸಂಕಲ್ಪ ಸಮಾವೇಶದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ದೇಶದ ಇತರ ರಾಜ್ಯಗಳಿಗೆ ಕರ್ನಾಟಕ ಎಟಿಎಂ ಆಗಿದೆ. ಲೋಕಸಭೆ ಚುನಾವಣೆ ಗೆಲ್ಲಲು ಕರ್ನಾಟಕದಿಂದ ಸಂಗ್ರಹ ಮಾಡಿರುವ 100 ಕೋಟಿ ಅಕ್ರಮ ಹಣವನ್ನು ದೇಶದ ಇತರ ಕಡೆಗೆ ಅಕ್ರಮವಾಗಿ ಸಾಗಣೆ ಮಾಡಲಾಗಿದೆ ಎಂದು ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ದೂರಿದರು.
ಮುಂದುವರೆದು ಮಾತನಾಡಿದ ಅವರು, ಕಳೆದ 10 ವರ್ಷಗಳ ಹಿಂದೆ ಭಾರತ ತಂತ್ರಜ್ಞಾನಕ್ಕಾಗಿ ಇತರ ದೇಶಗಳ ಕಡೆಗೆ ನೋಡಬೇಕಿತ್ತು. ಆದರೆ ನಾವೀಗ ಯಶಸ್ವಿಯಾಗಿ ಚಂದ್ರಯಾನ ಮುಗಿಸಿದ್ದೇವೆ, ಎಲ್ಲಾ ಕ್ಷೇತ್ರದಲ್ಲೂ ಅಭಿವೃದ್ಧಿ ಸಾಧಿಸಿದ್ದೇವೆ. ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳ ಉಳಿವಿಗೆ ಆದ್ಯತೆ ನೀಡಿದ್ದೇವೆ. ಕನ್ನಡ ಭಾಷೆ ಎಲ್ಲಾ ಕಡೆ ಪಸರಿಸುವಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಕರ್ನಾಟಕದಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ಕೊಡುತ್ತೇವೆ, ಜೊತೆಗೆ ಉದ್ಯೋಗ ಸೃಷ್ಟಿಗೂ ಆದ್ಯತೆ ನೀಡಲಾಗಿದೆ ಎಂದು ಇದೆ ಸಂದರ್ಭದಲ್ಲಿ ತಿಳಿಸಿದರು. ಭಾರತೀಯರ 500 ವರ್ಷಗಳ ಕನಸಾದ ರಾಮಮಂದಿರ ನಿರ್ಮಾಣ ಮಾಡಲಾಗಿದೆ. ಈ ಬಾರಿ ನೀವು ನೀಡುವ ಒಂದೊಂದು ಮತವು ಮೋದಿ ಶಕ್ತಿಯನ್ನ ಹೆಚ್ಚಿಸಲಿದೆ. ಈ ಬಾರಿ ಕರ್ನಾಟಕದಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ಮತ್ತಷ್ಟು ಬಲ ಹೆಚ್ಚಿಸಲಿದೆ ಎಂದರು. ರಾಜ್ಯಕ್ಕೆ ಸುತ್ತೂರು ಮಠದ ಪರಂಪರೆ, ರಾಷ್ಟ್ರ ಕವಿ ಕುವೆಂಪು, ಫೀಲ್ಡ್ ಮಾರ್ಷಲ್ ಕಾರಿಯಪ್ಪ ಹಾಗೂ ಮೈಸೂರು ರಾಜರ ಕೊಡುಗೆಗಳನ್ನು ಪ್ರಧಾನಿ ಸ್ಮರಿಸಿದರು.