ಕರ್ನಾಟಕ

karnataka

ETV Bharat / state

ದೇವಾಲಯಗಳನ್ನು ಮಾಹಿತಿ ಹಕ್ಕು ಕಾಯಿದೆಯಿಂದ ಹೊರಗಿಡಲು ಹೈಕೋರ್ಟ್‌ಗೆ ಅರ್ಜಿ - Plea To Exempt Temples From RTI

ಮಾಹಿತಿ ಹಕ್ಕು ಕಾಯ್ದೆಯಿಂದ ದೇವಾಲಯಗಳನ್ನು ಹೊರಗಿಡುವಂತೆ ಕೋರಿ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಪೂಜಾರಿಗಳು, ಆಗಮಿಕರು ಮತ್ತು ಅರ್ಚಕರ ಸಂಘ ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಿದೆ.

high-court
ಹೈಕೋರ್ಟ್‌ (ETV Bharat)

By ETV Bharat Karnataka Team

Published : Jun 3, 2024, 6:38 PM IST

ಬೆಂಗಳೂರು:ದೇವಾಲಯಗಳಲ್ಲಿ ಸಿದ್ಧಪಡಿಸುವ ಪ್ರಸಾದಕ್ಕೆ ಎಷ್ಟು ಪ್ರಮಾಣದ ಸಕ್ಕರೆ, ಅಕ್ಕಿ ಬಳಸಲಾಗುತ್ತಿದೆ ಎಂಬಂತಹ ಪ್ರಶ್ನೆಗಳನ್ನು ಕೇಳುವ ಮೂಲಕ ಅರ್ಚಕರಿಗೆ ಹಿಂಸೆ ನೀಡಲಾಗುತ್ತಿದೆ. ಹೀಗಾಗಿ ಮಾಹಿತಿ ಹಕ್ಕು ಕಾಯಿದೆಯಿಂದ ದೇವಾಲಯಗಳನ್ನು ಹೊರಗಿಡಬೇಕು ಎಂದು ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಪೂಜಾರಿಗಳು, ಆಗಮಿಕರು ಮತ್ತು ಅರ್ಚಕರ ಸಂಘ ಸಲ್ಲಿಸಿರುವ ಈ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾ.ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ಪೀಠ ಜೂನ್ 11ಕ್ಕೆ ಮುಂದೂಡಿದೆ.

ಅರ್ಜಿದಾರರ ಪರ ವಕೀಲರ ವಾದ: ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರಸಾದ ಸಿದ್ಧಪಡಿಸುವ ಸಂದರ್ಭದಲ್ಲಿ ಎಷ್ಟು ಪ್ರಮಾಣದ ಸಕ್ಕರೆ, ಅಕ್ಕಿ ಬಳಸಲಾಗುತ್ತಿದೆ?, ದಿನಕ್ಕೆಷ್ಟು ಅರ್ಚನೆಗಳನ್ನು ಮಾಡಲಾಗುತ್ತಿದೆ ಎಂಬಂತಹ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಈ ಮೂಲಕ ಕೆಲವರು ಕಾಯಿದೆಯನ್ನು ದುರ್ಬಳಕೆ ಮಾಡಿಕೊಂಡು ಅರ್ಚಕರಿಗೆ ಪ್ರಾಯೋಗಿಕ ಹಿಂಸೆ ನೀಡುತ್ತಿದ್ದಾರೆ ಎಂದು ಪೀಠಕ್ಕೆ ವಿವರಿಸಿದರು.

ಅಲ್ಲದೇ, ದೇವಾಲಯಗಳಿಗೆ ಎಲ್ಲವನ್ನೂ ಭಕ್ತಾದಿಗಳೇ ದಾನ ಮಾಡಿರುತ್ತಾರೆ. ಸರ್ಕಾರ ಒಂದು ರೂ.ವನ್ನೂ ಪಾವತಿಸುತ್ತಿಲ್ಲ. ಆದರೂ ಮಾಹಿತಿ ಕೇಳುವ ಮೂಲಕ ಹಿಂಸೆ ನೀಡಲಾಗುತ್ತಿದೆ. ಆದ್ದರಿಂದ ದೇವಾಲಯಗಳನ್ನು ಮಾಹಿತಿ ಹಕ್ಕು ಕಾಯಿದೆಯಿಂದ ಹೊರಗಿಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಸರ್ಕಾರಿ ವಕೀಲರ ವಾದವೇನು?: ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ವಕೀಲ ನೀಲೋಫರ್ ಅಕ್ಬರ್, ಈ ರೀತಿಯ ಅರ್ಜಿ ಸಲ್ಲಿಕೆಗೆ ಕಾರಣವೇ ಇಲ್ಲ. ಆದರೂ ಅರ್ಜಿ ಸಲ್ಲಿಕೆಯಾಗಿದೆ. ಆದರೆ, ಮಾಹಿತಿ ಹಕ್ಕು ಕಾಯಿದೆಯಡಿ ಮಾಹಿತಿ ಕೇಳುವುದು ತಪ್ಪೆಂದರೆ ಹೇಗೆ? ಎಂದರು.

ಹೈಕೋರ್ಟ್‌ ಹೇಳಿದ್ದೇನು?: ಈ ವೇಳೆ ಪ್ರತಿಕ್ರಿಯಿಸಿದ ಪೀಠ, ಇದು ಸಾರ್ವಜನಿಕ ಹಿತಾಸಕ್ತಿ ಅಡಿಯಲ್ಲಿ ಬರುವುದಿಲ್ಲ. ಸಾಮಾನ್ಯವಾಗಿ ಈ ರೀತಿಯಲ್ಲಿ ಆದೇಶಿಸುವುದಕ್ಕೂ ಅವಕಾಶವಿಲ್ಲ. ಯಾವ ದೇವಾಲಯ ಸಾರ್ವಜನಿಕ ಪ್ರಾಧಿಕಾರ, ಯಾವ ದೇವಾಲಯ ಸಾರ್ವಜನಿಕ ಪ್ರಾಧಿಕಾರವಲ್ಲ ಎಂಬುದು ನಮಗೆ ಗೊತ್ತಾಗುವುದಿಲ್ಲ. ಪ್ರತೀ ಪ್ರಕರಣವನ್ನು ಪರಿಶೀಲಿಸಲಾಗುವುದಿಲ್ಲ ಎಂದು ತಿಳಿಸಿ ವಿಚಾರಣೆಯನ್ನು ಮುಂದೂಡಿತು.

ಅರ್ಜಿಯ ವಿವರ: ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ ಅರ್ಚಕರು, ವೇದ ವಿದ್ವಾಂಸರು, ಪುರೋಹಿತರಿಗೆ ಮಾಹಿತಿ ಹಕ್ಕು ಕಾಯಿದೆಯಡಿ ವೈಯಕ್ತಿಕ ಮಾಹಿತಿ ಕೇಳುವ ಮೂಲಕ ಅವರಿಗೆ ಕಿರುಕುಳ ನೀಡಲಾಗುತ್ತಿದೆ. ಅಲ್ಲದೆ, ಹಣ ಮತ್ತು ಬೆಲೆ ಬಾಳುವ ವಸ್ತುಗಳಿಗೆ ಬೇಡಿಕೆ ಇಡುತ್ತಾರೆ. ನೀಡದೇ ಇದ್ದಲ್ಲಿ ದೇವರಿಗೆ ಮಾಡುವ ಹೋಮ, ಅಭಿಷೇಕಗಳನ್ನು ಮಾಡಿಕೊಡುವಂತೆ ಕೋರುತ್ತಾರೆ. ಭಕ್ತರು ದೇವರಿಗೆ ನೀಡುವ ದಾನಗಳಲ್ಲಿ ತಮಗೂ ಪಾಲು ನೀಡಬೇಕು ಎಂದು ಬೇಡಿಕೆ ಇಡುತ್ತಾರೆ. ಇದರಿಂದ ಅರ್ಚಕರ ಕಾರ್ಯನಿರ್ವಹಣೆಗೆ ತೊಂದರೆಯಾಗುತ್ತಿದೆ. ಹೀಗಾಗಿ ದೇವಾಲಯಗಳನ್ನು ಮಾಹಿತಿ ಹಕ್ಕು ಕಾಯಿದೆಯಿಂದ ಹೊರಗಿಡಬೇಕು. ದೇವಾಲಯಗಳು ಸಾರ್ವಜನಿಕ ಪ್ರಾಧಿಕಾರಗಳಲ್ಲ ಎಂದು ಘೋಷಿಸಬೇಕು. ಮಾಹಿತಿ ಹಕ್ಕು ಕಾಯಿದೆಯಡಿ ಸಾರ್ವಜನಿಕರು ಕೇಳುವ ಮಾಹಿತಿಯನ್ನು ಒದಗಿಸುವ ಸಲುವಾಗಿ ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕ ಮಾಹಿತಿ ಅಧಿಕಾರಿ, ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಮೇಲ್ಮನವಿ ಪ್ರಾಧಿಕಾರಗಳನ್ನು ನೇಮಿಸುವ ಸಂಬಂಧ ರಾಜ್ಯ ಸರ್ಕಾರ 2007ರ ಜೂನ್ 16ರಂದು ಮತ್ತು 2017ರ ಫೆಬ್ರವರಿ 3ರಂದು ಹೊರಡಿಸಿರುವ ಎರಡು ಅಧಿಸೂಚನೆಗಳನ್ನು ರದ್ದುಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಇದನ್ನೂ ಓದಿ:10 ವರ್ಷದ ಹಿಂದೆ ಮಹಿಳೆ ಮೇಲೆ ಹಲ್ಲೆ; ಪ್ರಕರಣದ ಮರು ತನಿಖೆಗೆ ಹೈಕೋರ್ಟ್ ಅಸ್ತು - High Court

ABOUT THE AUTHOR

...view details