ಬರದ ನಾಡಲ್ಲಿ ಡ್ರ್ಯಾಗನ್‌ಫ್ರೂಟ್ ಬೆಳೆದ ಫಾರ್ಮಾಸಿಸ್ಟ್ (ETV Bharat) ವಿಜಯಪುರ:ಬರದ ಜಿಲ್ಲೆ ಬಸವನಾಡಿನಲ್ಲಿ ಅತಿವೃಷ್ಟಿ ಇಲ್ಲವೇ ಅನಾವೃಷ್ಟಿಯಿಂದ ರೈತರು ಬಾಧಿತರಾಗಿದ್ದಾರೆ. ಇಂತಹ ಹವಾಮಾನ ವೈಪರೀತ್ಯಗಳ ನಡುವೆಯೂ ಡ್ರ್ಯಾಗನ್ ಫ್ರೂಟ್ ಬೆಳೆದು ರೈತನೋರ್ವ ಯಶಸ್ವಿಯಾಗಿದ್ದಾರೆ. ಬಬಲೇಶ್ವರ ಮತಕ್ಷೇತ್ರದ ವ್ಯಾಪ್ತಿಯ ಇಟ್ಟಂಗಿಹಾಳ ಗ್ರಾಮದ ಔಷಧ ಉದ್ಯಮಿಯಾಗಿರುವ ರೈತ ಸಿ. ಎಂ. ಮಾಲಿಪಾಟೀಲ ಅವರು ಎರಡು ಎಕರೆಯಲ್ಲಿ ವಿದೇಶಿ ಮೂಲದ ಡ್ರ್ಯಾಗನ್ ಹಣ್ಣು ಬೆಳೆದು ಕೈತುಂಬಾ ಆದಾಯ ಗಳಿಸುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ; ಹೌದು, ರೈತ ಮಾಲಿಪಾಟೀಲ ಮೊದಲ ಹಂತದಲ್ಲಿ 2.5 ಲಕ್ಷ ರೂಪಾಯಿ ಮೌಲ್ಯದ ಡ್ರ್ಯಾಗನ್ ಮಾತ್ರ ಮಾರಾಟ ಮಾಡಿದ್ದರು. ಈವರೆಗೆ 3 ಲಕ್ಷ ರೂಪಾಯಿ ಮೌಲ್ಯದ ಡ್ರ್ಯಾಗನ್ ಹಣ್ಣು ಮಾರಾಟವಾಗಿದೆ. ಇದೀಗ ಮೂರನೇ ಸೀಸನ್ ಹಣ್ಣು ಕಟಾವು ಮಾಡುತ್ತಿದ್ದಾರೆ. ಡಿಸೆಂಬರ್ ತಿಂಗಳವರೆಗೆ ಹಣ್ಣುಗಳು ಸಿಗುತ್ತವೆ. ಕಾಯಿ ಬಿಟ್ಟ 25 ದಿನಗಳ ನಂತರ ಡ್ರ್ಯಾಗನ್‌ಫ್ರೂಟ್ ಕಿತ್ತು ಪ್ರತಿ ಕೆಜಿಗೆ 180 ರಿಂದ 200 ರೂಪಾಯಿಯಂತೆ ಮಾರಾಟ ಆಗುತ್ತಿದೆ. ಡೆಂಗ್ಯೂ ಜ್ವರಕ್ಕೆ ಡ್ರ್ಯಾಗನ್ ಹಣ್ಣು ರಾಮಬಾಣ ಎನ್ನಲಾಗ್ತಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದೆ. ಒಮ್ಮೆ ಹೂಡಿಕೆ ಮಾಡಿದರೆ 25 ವರ್ಷಗಳವರೆಗೆ ಹಣ ಬರುತ್ತಲೇ ಇರುತ್ತದೆ. ಅಲ್ಲದೇ ವಿಜಯಪುರ ಜಿಲ್ಲೆಯಲ್ಲಿ ಸಚಿವ ಎಂ. ಬಿ. ಪಾಟೀಲ ಅವರಿಂದ ಆಗಿರುವ ಜಲಕ್ರಾಂತಿಯಿಂದ ಹೊಸ ಹೊಸ ಪ್ರಯೋಗಗಳನ್ನು ಮಾಡುವತ್ತ ಪ್ರೇರೇಪಣೆ ಸಿಗುತ್ತಿದೆ ಎನ್ನುತ್ತಾರೆ ಇಲ್ಲಿನ ರೈತರು.
ಮೊದಲು ಸಜ್ಜೆ ಬೆಳೆದು ಆದಾಯ ಬರುತ್ತಿರಲಿಲ್ಲ. ಇದೀಗ ಕಾಲುವೆ ಜೊತೆಗೆ ಕೃಷಿ ಹೊಂಡ ಬೋರ್ವೆಲ್ ಮೂಲಕ ನೀರು ಬಳಸಿಕೊಂಡು ಡ್ರ್ಯಾಗನ್ ಹಣ್ಣು ಬೆಳೆಯಲಾಗುತ್ತಿದೆ. ಇವರ ಜಮೀನಿನ ಸುತ್ತಲೂ ರೈತರು ಸಾಂಪ್ರದಾಯಿಕ ಬೆಳೆ ಬೆಳೆಯುತ್ತಿದ್ದಾರೆ. ಈಗ ಮಾಲಿಪಾಟೀಲ ಅವರ ಡ್ರ್ಯಾಗನ್ ಕೃಷಿ ಕಂಡು ತಾವು ಡ್ರ್ಯಾಗನ್ ಬೆಳೆಯಲು ಮುಂದಾಗಿದ್ದಾರೆ. ಸರ್ಕಾರ ಡ್ರ್ಯಾಗನ್ ಬೆಳೆಯಲು ಕೇವಲ ಹನಿ ನೀರಾವರಿಗೆ ಪ್ರೋತ್ಸಾಹ ಧನ ಕೊಡುತ್ತಿದೆ. ಕೇವಲ ಇದಲ್ಲದೇ ಬೇರೆ ರಾಜ್ಯಗಳಂತೆ ಡ್ರ್ಯಾಗನ್ ಬೆಳೆಗಾರರಿಗೆ ಸರ್ಕಾರ ಪ್ರೋತ್ಸಾಹ ಕೊಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಫಾರ್ಮಾಸಿಸ್ಟ್ ಮಾಹಿತಿ: ಕೃಷಿ ನಮ್ಮ ಮನೆತನದಿಂದ ಬಂದಿರೋದು. ಇಟ್ಟಂಗಿಹಾಳದಲ್ಲಿ 2 ಎಕರೆ ಡ್ರ್ಯಾಗನ್ ಹಣ್ಣಿನ ಸಸಿ ಬೆಳೆಸಿದ್ದೇನೆ. ಒಂದು ಕಂಬಕ್ಕೆ 4 ಸಸಿಗಳಿವೆ. ಈಗಾಗಲೇ 2 ಎಕರೆಯಲ್ಲಿ 4 ಸಾವಿರ ಸಸಿಗಳಿವೆ. ಇದೀಗ ಮೂರನೇ ಸೀಸನ್ ಹಣ್ಣುಗಳನ್ನು ಕಟಾವು ಮಾಡುತ್ತಿದ್ದೇನೆ. 1 ಮತ್ತು 2ನೇ ಕಟಾವಿನಲ್ಲಿ ಎರಡೆರಡು ಟನ್ ಬಂದಿವೆ. ಇದರಲ್ಲಿ 3 ವಿಧ ಬರುತ್ತದೆ. ಡ್ರ್ಯಾಗನ್ ಹಣ್ಣಿನಲ್ಲಿ ಪಿಂಕ್, ಬಿಳಿ, ಹಳದಿ ಬಣ್ಣದ ವಿಧಗಳಿವೆ. ಇವುಗಳಲ್ಲಿ ಪಿಂಕ್ ಬಣ್ಣದ ಹಣ್ಣು ಹೆಚ್ಚು ರುಚಿ. ಮಾರುಕಟ್ಟೆಯಲ್ಲಿ ಅಧಿಕ ಬೇಡಿಕೆ ಇದೆ. ಹೀಗಾಗಿ ನಾನು 4 ಸಾವಿರ ಪಿಂಕ್ ಬಣ್ಣದ ಡ್ರ್ಯಾಗನ್ ಸಸಿ ಬೆಳೆಸಿದ್ದೇನೆ. ಕಂಬ, ರಿಂಗ್ ಮತ್ತು ಸಸಿ ಖರೀದಿಗೆ ಮೊದಲು ಬಂಡವಾಳ ಹಾಕಿದರೆ ಮತ್ತೆ ಅಂಥ ಹೂಡಿಕೆ ಮಾಡುವ ಅಗತ್ಯವಿಲ್ಲ. ಮುಖ್ಯವಾಗಿ ಇದಕ್ಕೆ ಗೊಬ್ಬರ ಪ್ರಮುಖ ಅಂಶ. ರಾಸಾಯನಿಕ ಬಳಕೆಗಿಂತ ಸಾವಯವ ಗೊಬ್ಬರ ಬಳಸಿದರೆ ಹಣ್ಣು ಚೆನ್ನಾಗಿ ಬರುತ್ತದೆ ಎಂದು ರೈತ ಸಿ. ಎಂ. ಮಾಲಿಪಾಟೀಲ ಮಾಹಿತಿ ನೀಡಿದರು.
ಇದನ್ನೂ ಓದಿ:ಚಿಕ್ಕಬಳ್ಳಾಪುರ: ಕಸ ಸಂಗ್ರಹಿಸುವ ಮಹಿಳೆಗೆ ಒಲಿಯಿತು ನಗರಸಭೆ ಉಪಾಧ್ಯಕ್ಷೆ ಸ್ಥಾನ - Garbage collector woman now VP