ಕರ್ನಾಟಕ

karnataka

ETV Bharat / state

ಪೆಟ್ರೋಲ್, ಡೀಸೆಲ್ ದರ ಏರಿಕೆ ಹಿಂಪಡೆಯದಿದ್ದರೆ ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆ: ವಿಜಯೇಂದ್ರ ಎಚ್ಚರಿಕೆ - Petrol Diesel rate Hike - PETROL DIESEL RATE HIKE

ರಾಜ್ಯದಲ್ಲಿ ಇಂದು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ತೈಲ ದರ ಏರಿಕೆಯನ್ನು ಖಂಡಿಸಿ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ವಿಜಯೇಂದ್ರ
ವಿಜಯೇಂದ್ರ (ETV Bharat)

By ETV Bharat Karnataka Team

Published : Jun 15, 2024, 8:22 PM IST

ವಿಜಯೇಂದ್ರ (ETV Bharat)

ಬೆಂಗಳೂರು:ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಸಿದ್ದಕ್ಕಾಗಿ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ಗ್ಯಾರಂಟಿಗಳನ್ನು ಈಡೇರಿಸಲು ಆಗದೆ ಸಂದಿಗ್ಧ ಪರಿಸ್ಥಿತಿಯಲ್ಲಿರುವ ರಾಜ್ಯದ ಕಾಂಗ್ರೆಸ್ ಸರ್ಕಾರವು, ಪೆಟ್ರೋಲ್ ದರ ಪ್ರತಿ ಲೀಟರ್​​ಗೆ 3 ರೂ., ಡೀಸೆಲ್ ದರ 3.50 ರೂ. ಏರಿಸಿದೆ. ಈ ಮೂಲಕ ರಾಜ್ಯದ ಜನರ ಮೇಲೆ ಬರೆ ಹಾಕಲು ಹೊರಟಿದ್ದಾರೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಆಕ್ಷೇಪ ವ್ಯಕ್ತಪಡಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸಂಜೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬರಗಾಲದಂಥ ಸಂಕಷ್ಟದ ಸಂದರ್ಭದಲ್ಲಿ ರಾಜ್ಯದ ಜನರ ಮೇಲೆ ಹೊರೆ ಹಾಕಿರುವುದು ಅಕ್ಷಮ್ಯ ಅಪರಾಧ. ಮುಖ್ಯಮಂತ್ರಿಗಳು ತಮ್ಮ ಭಂಡತನವನ್ನು ಬಿಟ್ಟು ಪೆಟ್ರೋಲ್, ಡೀಸೆಲ್ ದರ ಏರಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಇಲ್ಲವಾದಲ್ಲಿ ಮುಂದಿನ ಸೋಮವಾರ ಬಿಜೆಪಿ, ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ, ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.

ಒಂದೆಡೆ ಸೋಲಿನ ಹತಾಶೆ ಇದ್ದರೆ, ಇನ್ನೊಂದೆಡೆ ರಾಜ್ಯದ ಹಣಕಾಸು ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ರಾಜ್ಯ ಸರ್ಕಾರವು ಅಧಿಕಾರಿಗಳು, ಸಿಬ್ಬಂದಿಗೆ ಸಂಬಳ ಕೊಡಲಾಗದ ಕೆಟ್ಟ ಸ್ಥಿತಿಯಲ್ಲಿದೆ. ಪರಿಣಾಮವಾಗಿ ತೈಲ ದರ ಏರಿಸಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ 18-20 ಸಂಸದ ಸ್ಥಾನಗಳನ್ನು ಗೆಲ್ಲುವ ಭ್ರಮೆಯಲ್ಲಿ ಕಾಂಗ್ರೆಸ್ ಇತ್ತು. ಆದರೆ ಹಿನ್ನಡೆ ಆಗಿದೆ. ಈ ಸಿಟ್ಟನ್ನು ರಾಜ್ಯದ ಜನರ ಮೇಲೆ ತೋರಿಸುತ್ತಿದ್ದಾರೆ. ಹಿಂದೆ ಸ್ಟ್ಯಾಂಪ್ ಡ್ಯೂಟಿ ಹೆಚ್ಚಿಸಿದ್ದರು. ಇದರ ಬಗ್ಗೆ ನಾವು ವಿಧಾನಸಭೆ ಒಳಗೆ ಮತ್ತು ಹೊರಗಡೆ ಚರ್ಚೆ ಮಾಡಿದ್ದೇವೆ. ವಿದ್ಯುತ್ ದರವನ್ನೂ ಏರಿಸಿದ್ದರು ಎಂದು ತಿಳಿಸಿದರು.

ಕಾನೂನು ಪ್ರಕೋಷ್ಠ ಗಟ್ಟಿಗೊಳಿಸುತ್ತೇವೆ: ನಮ್ಮ ಕಾರ್ಯಕರ್ತರಿಗೆ ಈ ಭಂಡ ಕಾಂಗ್ರೆಸ್ ಸರ್ಕಾರದ ಕಿರುಕುಳ, ದೌರ್ಜನ್ಯವನ್ನು ಧೈರ್ಯದಿಂದ ಎದುರಿಸಲಿದ್ದೇವೆ. ಪ್ರತಿಯೊಂದು ಜಿಲ್ಲೆ, ತಾಲೂಕು ಮತ್ತು ಮಂಡಲ ಮಟ್ಟದಲ್ಲಿ ನಮ್ಮ ಕಾನೂನು ಪ್ರಕೋಷ್ಠವನ್ನು ಗಟ್ಟಿಗೊಳಿಸಲಿದ್ದೇವೆ ಎಂದು ತಿಳಿಸಿದರು.

ದರ ಏರಿಕೆ ಹಿಂಪಡೆಯದಿದ್ದರೆ ಉಗ್ರ ಹೋರಾಟ:ಕಾಂಗ್ರೆಸ್ಸಿಗರೇ ರಾಜ್ಯದ ಜನತೆ ನಿಮ್ಮ ಬಳಿ ಯಾವ ಭಾಗ್ಯವನ್ನು ಬೇಡಿರಲಿಲ್ಲ. ನೀವು ಯಾವ ಭಾಗ್ಯವನ್ನೂ ಕೊಡದಿದ್ದರೂ ಪರವಾಗಿಲ್ಲ, ಬೆಲೆ ಏರಿಕೆಯ ದೌರ್ಭಾಗ್ಯವನ್ನು ಮಾತ್ರ ನಮ್ಮ ಮೇಲೆ ಹೇರಬೇಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪೋಸ್ಟ್ ಮಾಡಿದ್ದಾರೆ.

'ಅಧಿಕಾರಕ್ಕೇರುವ ಒಂದೇ ಕಾರಣಕ್ಕಾಗಿ ಪಂಚ ಭಾಗ್ಯದ ಮೋಡಿ ಮಾಡಿ ನೀವು ರಾಜ್ಯದ ಮತದಾರರನ್ನು ದಿಕ್ಕು ತಪ್ಪಿಸಿದ್ದು ನಾಡಿನ ದೌರ್ಭಾಗ್ಯವಲ್ಲದೇ ಬೇರೇನೂ ಅಲ್ಲ. ದಿನ ಬಳಕೆ ಹಾಗೂ ಅಗತ್ಯ ವಸ್ತುಗಳ ಬೆಲೆಗಳನ್ನು ಸರಣಿ ರೂಪದಲ್ಲಿ ಏರಿಸುತ್ತಲೇ ಇದ್ದೀರಿ, ಇದೀಗ ಪೆಟ್ರೋಲ್ 3 ರೂ ಹಾಗೂ ಡೀಸೆಲ್ ಮೇಲೆ 3.50 ರೂ. ಏರಿಸಿ ಜನಸಾಮಾನ್ಯರ ಕೈ ಸುಟ್ಟಿದ್ದೀರಿ. ಈ ಬೆಲೆ ಏರಿಕೆಯ ಪ್ರತಿಕೂಲ ಪರಿಣಾಮ ಸಹಜವಾಗಿಯೇ ಸರಕು ಸಾಗಾಣಿಕೆ ಹಾಗೂ ಸಾರಿಗೆ ದರಗಳು ವಿಪರೀತ ಹೆಚ್ಚಳ ಕಂಡು ದಿನಬಳಕೆಯ ಅಗತ್ಯ ವಸ್ತುಗಳ ಬೆಲೆಯೂ ಏರಲಿದೆ' ಎಂದು ಹೇಳಿದ್ದಾರೆ.

'ಬರಿದಾಗಿರುವ ನಿಮ್ಮ ಖಜಾನೆ ತುಂಬಿಸಲು ಜನಸಾಮಾನ್ಯರು ಹಾಗೂ ಕಡು ಬಡವರ ಜೇಬು ಖಾಲಿ ಮಾಡಲು ಹೊರಟಿರುವ ನಿಮ್ಮ ಜನ ವಿರೋಧಿ ನೀತಿ ನಿರ್ಧಾರಗಳನ್ನು ಬಿಜೆಪಿ ಪ್ರಬಲವಾಗಿ ಖಂಡಿಸಿ ಪ್ರತಿಭಟಿಸುತ್ತದೆ. ಈ ಕೂಡಲೇ ಪೆಟ್ರೋಲ್ ಡೀಸೆಲ್ ದರ ಏರಿಕೆ ನಿರ್ಧಾರವನ್ನು ಸರ್ಕಾರ ಹಿಂತೆಗೆದುಕೊಳ್ಳದಿದ್ದರೆ ರಾಜ್ಯ ಬಿಜೆಪಿ ಬೀದಿಗಿಳಿದು ಹೋರಾಡಲಿದೆ' ಎಂದು ಎಚ್ಚರಿಕೆ ನೀಡಿದ್ದಾರೆ.

ಅಭಿವೃದ್ಧಿ ಕೇಳ್ಬೇಡಿ ಎಂದ ಕ್ರೇಂದ್ರ ಸಚಿವರು:ಈ ಸಂಬಂಧ ಎಕ್ಸ್ ಪೋಸ್ಟ್ ಮೂಲಕ ಆಕ್ರೋಶ ಹೊರ ಹಾಕಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, 'ಅಭಿವೃದ್ಧಿ ಕೇಳ್ಬೇಡಿ. ತೊಗೊಳ್ರಪ್ಪ ಕೊಟ್ರು ಚೊಂಬು. ಬೆಲೆ ಏರಿಕೆಯ ಬಗ್ಗೆ ಉದ್ದುದ್ದ ಭಾಷಣ ಬಿಗಿದು, ಕೇಂದ್ರ ಸರ್ಕಾರದ ಮೇಲೆ ಬೊಟ್ಟು ತೋರಿಸಿ ಜನರ ದಿಕ್ಕು ತಪ್ಪಿಸುವ ರಾಜ್ಯ ಕಾಂಗ್ರೆಸ್ ಸರ್ಕಾರ, ಕೇಂದ್ರ ಇಂಧನದ ಬೆಲೆ ಕಡಿಮೆ ಮಾಡಿದ್ದರೂ, ರಾಜ್ಯದಲ್ಲಿ ಏಕಾಏಕಿ ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ಏರಿಸಿ ಜನರಿಗೆ ಹೊರೆ ಮಾಡಿದೆ' ಎಂದು ಕಿಡಿಕಾರಿದ್ದಾರೆ.

'ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ, ದುರಾಡಳಿತ, ರೈತರ ಆತ್ಮಹತ್ಯೆ, ಹಗರಣಗಳ ಭಾಗ್ಯವನ್ನು ರಾಜ್ಯಕ್ಕೆ ನೀಡಿದ್ದು, ಅಧಿಕಾರ ವಹಿಸಿಕೊಂಡ ಕಳೆದ 1.5 ವರ್ಷಗಳಿಂದ ರಾಜ್ಯದಲ್ಲಿ ಅಭಿವೃದ್ಧಿಯಂತೂ ಇಲ್ಲವೇ ಇಲ್ಲ. ಈಗ ನೇರವಾಗಿ ಜನರ ಜೇಬಿಗೆ ಕತ್ತರಿ ಹಾಕುವ ಕೆಲಸಕ್ಕೆ ಕೈ ಹಾಕಿದೆ' ಕಾಂಗ್ರೆಸ್ ಎಂದು ಟೀಕಿಸಿದ್ದಾರೆ.

ಜೇಬಿಗೆ ಕತ್ತರಿ: ಇದೇ ವೇಳೆ ಎಕ್ಸ್ ಪೋಸ್ಟ್ ಮೂಲಕ ವಾಗ್ದಾಳಿ ನಡೆಸಿರುವ ಪ್ರತಿಪಕ್ಷ ನಾಯಕ ಆರ್.ಅಶೋಕ್, ಲೋಕಸಭೆ ಚುನಾವಣೆಯಲ್ಲಿ ಕನ್ನಡಿಗರು ಬಿಜೆಪಿಗೆ ಮತ ಹಾಕಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಹೊರಟಿದೆ ಈ ಜನವಿರೋಧಿ ಕಾಂಗ್ರೆಸ್ ಸರ್ಕಾರ. ಅವೈಜ್ಞಾನಿಕ ಗ್ಯಾರೆಂಟಿಗಳಿಂದ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿರುವ @INCKarnataka ಸರ್ಕಾರ ಕನ್ನಡಿಗರ ಮೇಲೆ ತೆರಿಗೆ ಹೊರೆ ಹೊರಿಸಿ ಖಜಾನೆ ತುಂಬಿಸಲು ಹೊರಟಿದೆ. ಪೆಟ್ರೋಲ್, ಡೀಸೆಲ್‌ ಮೇಲಿನ ತೆರಿಗೆ ಹೆಚ್ಚಳ ಮಾಡಿ ಆದೇಶ ಹೊರಡಿಸಿರುವ ಸಿಎಂ @siddaramaiah ಸರ್ಕಾರ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 3 ರೂ. ಮತ್ತು ಡೀಸೆಲ್‌ ಬೆಲೆ 3.50 ರೂ. ಹೆಚ್ಚಳ ಮಾಡಿ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕಿದೆ ಎಂದು ದೂರಿದ್ದಾರೆ.

ಪೆಟ್ರೋಲ್, ಡೀಸೆಲ್ ಮೇಲೆ ಸೆಸ್ ವಿಧಿಸಿದ ಜನ ವಿರೋಧಿ, ಬಡವರ ವಿರೋಧಿ ಸರ್ಕಾರ. ಉಚಿತ ಉಚಿತ ಉಚಿತ ಎಂದು ರಾಜ್ಯದ ಜನರ ಮುಂಗೈಗೆ ತುಪ್ಪ ಹಚ್ಚುತ್ತಾ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಕಳೆದ ಒಂದು ವರ್ಷದ ಅಧಿಕಾರಾವಧಿಯಲ್ಲಿ ಎರಡಕ್ಕೂ ಹೆಚ್ಚು ಬಾರಿ ಪೆಟ್ರೋಲ್ ಮೇಲಿನ ಸೆಸ್ ಜಾಸ್ತಿ ಮಾಡಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಟೀಕಿಸಿದ್ದಾರೆ.

ಇದನ್ನೂ ಓದಿ:ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಎಲ್ಲಿ ಎಷ್ಟು ಹೆಚ್ಚಳ? ನೂತನ ದರ ತಿಳಿಯಲು ಕ್ಲಿಕ್ ಮಾಡಿ - Petrol Diesel Rate Hike


ABOUT THE AUTHOR

...view details