ಬೆಂಗಳೂರು:ರಾಜ್ಯದಲ್ಲಿ ಇದೇ ತಿಂಗಳ 16 ರಂದು ನಡೆಯಲಿರುವ ವಿಧಾನಪರಿಷತ್ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆಯ ಮತದಾನಕ್ಕೂ ಮುನ್ನ 48 ಗಂಟೆಗಳ ಅವಧಿಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಿರುವ ಜಿಲ್ಲಾಧಿಕಾರಿ ಕ್ರಮ ಮೇಲ್ನೋಟಕ್ಕೆ ಸಮರ್ಪಕವಾಗಿಲ್ಲ ಎಂದು ಹೈಕೋರ್ಟ್ ಮೌಖಿಕವಾಗಿ ಅಭಿಪ್ರಾಯಪಟ್ಟಿದೆ.
ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧಿಕಾರಿ ಇದೇ 1ರಂದು ಹೊರಡಿಸಿರುವ ಆದೇಶ ಪ್ರಶ್ನಿಸಿ ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘಟನೆಯ ಕಾರ್ಯದರ್ಶಿ ವೀರೇಂದ್ರ ಎನ್.ಕಾಮತ್ ಸೇರಿದಂತೆ ಒಟ್ಟು ನಾಲ್ವರು ಅರ್ಜಿ ಸಲ್ಲಿಸಿದ್ದರು. ಅದನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣ ಕುಮಾರ್ ಅವರಿದ್ದ ಪೀಠ ಈ ಅಭಿಪ್ರಾಯ ತಿಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ಹಾಜರಾಗಿದ್ದ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್, ಇದು ಸಾರ್ವತ್ರಿಕ ಚುನಾವಣೆಯಲ್ಲ. ಇದರಲ್ಲಿ ಕೇವಲ 16 ಸಾವಿರ ಮತದಾರರು ಮಾತ್ರ ಮತ ಚಲಾಯಿಸಲು ಅರ್ಹತೆ ಹೊಂದಿದ್ದಾರೆ. ಹೀಗಾಗಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧಿಸಿದರೆ ವರ್ತಕರು, ಉದ್ದಿಮೆದಾರರು ಸಾಕಷ್ಟು ತೊಂದರೆ ಅನುಭವಿಸಲಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಪರಿಷತ್ತಿನ ಚುನಾವಣೆಯಲ್ಲಿ ಬಾಂಬೆ ಹೈಕೋರ್ಟ್ ಇಂತಹ ನಿಷೇಧದ ಅವಧಿಯನ್ನು ಒಂದು ದಿನಕ್ಕೆ ಸೀಮಿತಗೊಳಿಸಿರುವ ಉದಾಹರಣೆಯಿದೆ. ಹಾಗಾಗಿ, ಈ ಪ್ರಕರಣದಲ್ಲೂ ಕೇವಲ ಮತದಾನದ ದಿನದಂದು ಮಾತ್ರವೇ ನಿಷೇಧ ಅನ್ವಯಿಸಲು ನಿರ್ದೇಶಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.