ಬೆಂಗಳೂರು:ಜನರಲ್ ನರ್ಸಿಂಗ್ ಹಾಗೂ ಮಿಡ್ ವೈಫರಿ (ಪ್ರಸೂತಿ ಶಾಸ್ತ್ರ) ಪರೀಕ್ಷೆಗಳನ್ನು ನಡೆಸುವ ಅಧಿಕಾರವನ್ನು ಕರ್ನಾಟಕ ರಾಜ್ಯ ಶುಶ್ರೂಷಾ ಪರೀಕ್ಷಾ ಮಂಡಳಿ ಬದಲಿಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ನೀಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಇಂದು ಅರ್ಜಿ ಸಲ್ಲಿಸಲಾಗಿದೆ.
ದಿ ಕರ್ನಾಟಕ ಸ್ಟೇಟ್ ಅಸೋಸಿಯೇಷನ್ ಆಫ್ ದಿ ಮ್ಯಾನೇಜ್‌ಮೆಂಟ್ ಆಫ್ ನರ್ಸಿಂಗ್ ಆ್ಯಂಡ್ ಆಲೈಡ್ ಹೆಲ್ತ್ ಸೈನ್ಸ್ ಇನ್ಸ್ಟಿಟ್ಯೂಟ್ ಸಲ್ಲಿಸಿರುವ ಅರ್ಜಿ ನ್ಯಾಯಮೂರ್ತಿ ಕೆ.ಎಸ್.ಹೇಮಲೇಖಾ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ಬುಧವಾರ ವಿಚಾರಣೆಗೆ ಬಂದಿತ್ತು.
ಈ ವೇಳೆ ಪೀಠವು, ರಾಜ್ಯ ಸರ್ಕಾರ, ಕರ್ನಾಟಕ ರಾಜ್ಯ ನರ್ಸಿಂಗ್ ಪರೀಕ್ಷಾ ಮಂಡಳಿ, ರಾಜೀವಗಾಂಧಿ ಆರೋಗ್ಯ ವಿವಿ, ಇಂಡಿಯನ್ ನರ್ಸಿಂಗ್ ಕೌನ್ಸಿಲ್‌ಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಫೆಬ್ರವರಿ 14ಕ್ಕೆ ಮುಂದೂಡಿತು.
ಡಿಪ್ಲೋಮಾ ನರ್ಸಿಂಗ್ ಕೋರ್ಸ್‌ಗಳ ಪರೀಕ್ಷೆಗಳನ್ನು ನಡೆಸಲು ಕರ್ನಾಟಕ ರಾಜ್ಯ ಶೂಶ್ರೂಷಾ ಪರೀಕ್ಷಾ ಮಂಡಳಿಯನ್ನು 1991ರಲ್ಲಿ ಸ್ಥಾಪಿಸಲಾಗಿದೆ. ಪಿಯುಸಿ ನಂತರದ ನರ್ಸಿಂಗ್ ಕೋರ್ಸ್‌ಗಳ ಪರೀಕ್ಷೆಗಳನ್ನು ನಡೆಸುವ ಅಧಿಕಾರವನ್ನು ರಾಜೀವಗಾಂಧಿ ಆರೋಗ್ಯ ವಿವಿ ಹೊಂದಿದೆ. ಆದರೆ, ಜನರಲ್ ನರ್ಸಿಂಗ್ ಆ್ಯಂಡ್ ಮಿಡ್‌ವೈಫರಿ(ಜಿಎನ್‌ಎಂ) ಕೋರ್ಸ್‌ನ ಪರೀಕ್ಷೆಗಳನ್ನು ಶುಶ್ರೂಷಾ ಪರೀಕ್ಷಾ ಮಂಡಳಿ ಬದಲಿಗೆ ರಾಜೀವಗಾಂಧಿ ಆರೋಗ್ಯ ವಿವಿ ನಡೆಸಬೇಕು ಎಂದು 2023ರ ಏಪ್ರಿಲ್ 21ರಂದು ಆದೇಶ ಹೊರಡಿಸಿದೆ. ಇದು ನರ್ಸಿಂಗ್ ಕಾಲೇಜುಗಳ ಹಿತ ಹಾಗೂ ಶುಶ್ರೂಷಾ ಪರೀಕ್ಷಾ ಮಂಡಳಿ ರಚನೆಯ ಉದ್ದೇಶಕ್ಕೆ ವಿರುದ್ಧವಾಗಿದೆ ಎಂದು ಆರ್ಜಿಯಲ್ಲಿ ದೂರಲಾಗಿದೆ.
ಇದನ್ನೂ ಓದಿ:ಮಾಹಿತಿ ಆಯುಕ್ತರ ನೇಮಕಕ್ಕೆ ಶೋಧನಾ ಸಮಿತಿ ರಚಿಸಿರುವ ಬಗ್ಗೆ ಸೂಕ್ತ ವಿವರಣೆ ನೀಡಿ: ಹೈಕೋರ್ಟ್
ಇದೇ ಫೆಬ್ರವರಿ 17ರಂದು ಜಿಎನ್‌ಎಂ ಪರೀಕ್ಷೆಗಳು ನಿಗದಿಯಾಗಿದ್ದು, ರಾಜೀವಗಾಂಧಿ ಆರೋಗ್ಯ ವಿವಿ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಹಾಜರಾಗಲು ವಿದ್ಯಾರ್ಥಿಗಳು ದೂರದ ಪ್ರಯಾಣ ಮಾಡಬೇಕಾಗುತ್ತದೆ. ಪರೀಕ್ಷಾ ಕೇಂದ್ರಗಳು ವಿದ್ಯಾರ್ಥಿಗಳು ಕಲಿಯುತ್ತಿರುವ ನರ್ಸಿಂಗ್ ಸಂಸ್ಥೆಗಳಿಂದ ತುಂಬಾ ದೂರ ಇವೆ. ಆದ್ದರಿಂದ ಪರೀಕ್ಷೆಗಳನ್ನು ಶುಶ್ರೂಷಾ ಪರೀಕ್ಷಾ ಮಂಡಳಿಯ ಬದಲಿಗೆ ರಾಜೀವಗಾಂಧಿ ಆರೋಗ್ಯ ವಿವಿಗೆ ಅಧಿಕಾರ ನೀಡಿ 2023ರ ಏಪ್ರಿಲ್ 21ರಂದು ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸಬೇಕು. ಇದೇ ಫೆ.17ರಿಂದ ಪರೀಕ್ಷೆಗಳು ಆರಂಭವಾಗಲಿರುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಇದನ್ನೂ ಓದಿ:'ದೇಶದ ಕಾನೂನು ಒಬ್ಬ ವ್ಯಕ್ತಿ ಇಂತಹದ್ದೇ ರಾಜ್ಯಕ್ಕೆ ಮಾತ್ರ ಸೀಮಿತ ಎಂದು ನಿರ್ಬಂಧಿಸಲಾಗದು'