ಕರ್ನಾಟಕ

karnataka

ETV Bharat / state

ಪೋಕ್ಸೋ ಪ್ರಕರಣ: ಬಿಎಸ್​ವೈ ಬಂಧಿಸಿ ವಿಚಾರಣೆಗೊಳಪಡಿಸಲು ಹೈಕೋರ್ಟ್​ಗೆ ಅರ್ಜಿ - BSY POCSO Case

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ಪೋಕ್ಸೋ ಪ್ರಕರಣದ ದೂರುದಾರೆಯ ಪುತ್ರ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

High Court
ಹೈಕೋರ್ಟ್ (IANS)

By ETV Bharat Karnataka Team

Published : Jun 12, 2024, 9:50 PM IST

ಬೆಂಗಳೂರು: ಪೋಕ್ಸೋ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ಪ್ರಕರಣದ ದೂರುದಾರೆಯ ಪುತ್ರ ಇಂದು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಲೈಂಗಿಕ ಕಿರುಕುಳ ಆರೋಪದಲ್ಲಿ ಬಿಎಸ್​ವೈ ವಿರುದ್ಧ ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ಮಾರ್ಚ್​​ 14ರಂದು ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿತ್ತು. ಇದೀಗ ದೂರುದಾರೆಯ ಪುತ್ರ ಹೈಕೊರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ ರಾಜ್ಯ ಗೃಹ ಇಲಾಖೆಯ ಕಾರ್ಯದರ್ಶಿ, ನಗರ ಪೊಲೀಸ್‌ ಆಯುಕ್ತರು, ಸಿಐಡಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಮತ್ತು ಪ್ರಕರಣದಲ್ಲಿ ಆರೋಪಿಯೂ ಆಗಿರುವ ಯಡಿಯೂರಪ್ಪರನ್ನು ಪ್ರತಿವಾದಿ ಮಾಡಿದ್ದಾರೆ. ಈ ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

ಅರ್ಜಿದಾರರ ಮನವಿ ಏನು?:ಪ್ರಕರಣದಲ್ಲಿ 17 ವರ್ಷದ ಸಂತ್ರಸ್ತೆ ನನ್ನ ಸಹೋದರಿಯಾಗಿದ್ದು, ದೂರುದಾರೆ ತಾಯಿಯಾಗಿದ್ದಾರೆ. ಸಂತ್ರಸ್ತೆಯು ತನ್ನ ತಾಯಿ ಜೊತೆಗೆ 2024ರ ಫೆ.2ರಂದು ಸಹಾಯ ಕೇಳಿಕೊಂಡು ಬೆಂಗಳೂರಿನ ಆರ್‌ಎಂವಿ ಎರಡನೇ ಹಂತದಲ್ಲಿರುವ ಯಡಿಯೂರಪ್ಪನವರ ಮನೆಗೆ ಹೋಗಿದ್ದರು. ಈ ವೇಳೆ ಯಡಿಯೂರಪ್ಪ ಸಂತ್ರಸ್ತೆಯನ್ನು ಕೈ ಹಿಡಿದು ಕೊಠಡಿಯೊಂದಕ್ಕೆ ಕರೆದೊಯ್ದು, ವಿಚಾರಿಸುವ ನೆಪದಲ್ಲಿ ಖಾಸಗಿ ಅಂಗಗಳನ್ನು ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.

ನಂತರ ಯಡಿಯೂರಪ್ಪನವರನ್ನು ದೂರಕ್ಕೆ ನೂಕಿ ಸಂತ್ರಸ್ಥೆ ಕೊಠಡಿ ಬಾಗಿಲು ತೆರೆದು ಕಿರುಚಾಡಿಕೊಂಡು ಹೊರಬಂದಿದ್ದಾರೆ. ನಂತರ ಘಟನೆಯನ್ನು ತಾಯಿಗೆ ವಿವರಿಸಿದ್ದಾರೆ. ತಾಯಿ ಪ್ರಶ್ನಿಸಿದ್ದಕ್ಕೆ ಅವರಿಗೆ ಹಣ ನೀಡಲು ಯಡಿಯೂರಪ್ಪ ಮುಂದಾಗಿದ್ದರು. ಈ ಹಣವನ್ನು ಅವರು ಸ್ವೀಕರಿಸಲು ನಿರಾಕರಿಸಿದ್ದರು. 2024ರ ಮಾರ್ಚ್​ 14ರಂದು ಸದಾಶಿವನಗರ ಪೊಲೀಸ್‌ ಠಾಣೆಗೆ ತಾಯಿ ದೂರು ನೀಡಿದ್ದರು. ಪೊಲೀಸರು ಪೋಕ್ಸೋ ಕಾಯ್ದೆ ಸೆಕ್ಷನ್ 8 ಮತ್ತು ಐಪಿಸಿ ಸೆಕ್ಷನ್‌ 354(ಎ) ಅಡಿಯಲ್ಲಿ ಅಪ್ರಾಪ್ತೆ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಎಫ್‌ಐಆರ್‌ ದಾಖಲಿಸಿದ್ದರು.

ಪ್ರಕರಣವನ್ನು ಸಿಬಿಐಗೆ ವಹಿಸಲು ಕೋರಿ ಏ.2ರಂದು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೂ ಮನವಿ ಪತ್ರ ಸಲ್ಲಿಸಿದ್ದರು. ಏ.29ರಂದು ರಾಜ್ಯ ಮಹಿಳಾ ಆಯೋಗದ ಡಾ.ನಾಗಲಕ್ಷ್ಮಿ ಅವರಿಗೆ ಪತ್ರ ನೀಡಿ ಯಡಿಯೂರಪ್ಪರನ್ನು ಬಂಧಿಸಲು ಕೋರಿದ್ದರು. ಮೇ 20ರಂದು ಸಿಐಡಿ ಎಡಿಜಿಪಿ ಬಿ.ಕೆ.ಸಿಂಗ್‌ ಅವರಿಗೆ ಪತ್ರ ನೀಡಿದ್ದಾರೆ. ನನಗೆ ತಿಳಿದಿರುವಂತೆ ಮಾ.26ರಂದು 25ನೇ ಎಸಿಎಂಎಂ ನ್ಯಾಯಾಲಯವು ಸಂತ್ರಸ್ತೆಯ ಸ್ವಯಂಕೃತ ಹೇಳಿಕೆ ದಾಖಲಿಸಿಕೊಂಡಿದೆ.

ತನಿಖಾಧಿಕಾರಿ ಧ್ವನಿ ದಾಖಲೆಗೊಂಡಿದ್ದ ಮೊಬೈಲ್‌ ಜಪ್ತಿ ಮಾಡಿದ್ದಾರೆ. ಬಳಿಕ ಯಡಿಯೂರಪ್ಪನವರಿಗೆ ನೋಟಿಸ್‌ ನೀಡಿದ್ದು, ಅವರ ಧ್ವನಿ ಮಾದರಿಯನ್ನೂ ಸಹ ಸಂಗ್ರಹಿಸಿದ್ದಾರೆ. ಈ ದೂರು ದಾಖಲಾಗಿ ಎರಡು ತಿಂಗಳು ಕಳೆದರೂ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿಲ್ಲ. ಕೊನೆ ಪಕ್ಷ ವಿಚಾರಣೆಗೆ ಹಾಜರಾಗಲು ಸೂಚಿಸಿ, ಪೋಕ್ಸೋ ಕಾಯ್ದೆ ಸೆಕ್ಷನ್‌ 41(ಎ) ಅಡಿಯಲ್ಲಿ ನೋಟಿಸ್‌ ಸಹ ನೀಡಿಲ್ಲ. ಆದ್ದರಿಂದ ಯಡಿಯೂರಪ್ಪರನ್ನು ಬಂಧಿಸಿ, ವಿಚಾರಣೆ ನಡೆಸಿ ಸತ್ಯಾಂಶ ತಿಳಿಸಿಕೊಡಬೇಕು ಎಂದು ಕೋರಿದ್ದಾರೆ.

ಇದನ್ನೂ ಓದಿ:ಬಿಎಸ್​ವೈ ಪೋಕ್ಸೋ ಪ್ರಕರಣ: ಸಿಐಡಿ ಪರ ವಾದಿಸಲು ವಕೀಲರ ನೇಮಕ

ABOUT THE AUTHOR

...view details