ಕರ್ನಾಟಕ

karnataka

ETV Bharat / state

ರಾಜ್ಯ ಮಾಹಿತಿ ಆಯುಕ್ತರ ನೇಮಕ ಪ್ರಶ್ನಿಸಿ ಹೈಕೋರ್ಟ್​ಗೆ​​ ಅರ್ಜಿ - KARNATAKA INFORMATION COMMISSIONER

ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಅಧ್ಯಕ್ಷರ ನೇಮಕಾತಿ ಆದೇಶ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ. ಸರ್ಕಾರದ ಆದೇಶವನ್ನು ರದ್ದುಪಡಿಸುವಂತೆ ಕೋರಲಾಗಿದೆ.

STATE INFORMATION COMMISSIONER appointment
ಹೈಕೋರ್ಟ್ (ETV Bharat)

By ETV Bharat Karnataka Team

Published : Feb 3, 2025, 6:33 PM IST

ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶ ಪಾಲಿಸದೆ, ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಅಧ್ಯಕ್ಷರನ್ನು ನೇಮಿಸಿ ರಾಜ್ಯ ಸರ್ಕಾರ 2025ರ ಜನವರಿ 30ರಂದು ಹೊರಡಿಸಿರುವ ಆದೇಶ ಪ್ರಶ್ನಿಸಿ ಹೈಕೋರ್ಟ್​ಗೆ ಇಂದು ಅರ್ಜಿ ಸಲ್ಲಿಕೆಯಾಗಿದೆ.

ರಾಜ್ಯ ಮಾಹಿತಿ ಆಯುಕ್ತರ ಹುದ್ದೆಯ ಆಕಾಂಕ್ಷಿಯಾಗಿದ್ದ ಜೆ.ಪಿ.ನಗರದ ನಿವಾಸಿ ಕೆ.ಮಲ್ಲಿಕಾರ್ಜುನ ರಾಜು ಎಂಬವರು ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯಲ್ಲಿ ರಾಜ್ಯ ಸರ್ಕಾರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಮಾಹಿತಿ ಆಯುಕ್ತರಾಗಿ ಆಯ್ಕೆಯಾಗಿರುವ ಎ.ಎಂ.ಪ್ರಸಾದ್​, ಕೆ.ರಮಣ, ಡಾ.ಹರೀಶ್​ ಕುಮಾರ್​, ರುದ್ರಣ್ಣ ಹರ್ತಿಕೋಟೆ, ನಾರಾಯಣ ಜಿ.ಚನ್ನಾಲ್, ಎಸ್.ರಾಜಶೇಖರ್​, ಬದ್ರುದ್ದೀನ್​ ಕೆ., ಡಾ.ಮಮತಾ ಬಿ.ಆರ್​ ಅವರನ್ನು ಪ್ರತಿವಾದಿಗಳನ್ನಾಗಿ ಸೇರಿಸಲಾಗಿದೆ.

ಅರ್ಜಿಯ ವಿವರ:ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತರು ಹಾಗೂ ಮಾಹಿತಿ ಆಯುಕ್ತರ ನೇಮಕ ಪ್ರಕ್ರಿಯೆಯಲ್ಲಿ ಸಲ್ಲಿಕೆಯಾಗುವ ಅರ್ಜಿಗಳ ಪರಿಶೀಲನೆಗೆ ಶೋಧನಾ ಸಮಿತಿ ರಚನೆ ಮಾಡಬೇಕು. ಬಳಿಕ ಆಯ್ಕೆಯಾದವರ ಪಟ್ಟಿಯನ್ನು ಆಯ್ಕೆ ಸಮಿತಿಯ ಮುಂದೆ ಮಂಡಿಸಬೇಕು ಎಂಬುದಾಗಿ ಅಂಜಲಿ ಭಾರಧ್ವಾಜ್​ ವಿರುದ್ಧದ ಕೇಂದ್ರ ಸರ್ಕಾರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ.

ಆದರೆ, ರಾಜ್ಯ ಸರ್ಕಾರ ಶೋಧನಾ ಸಮಿತಿ ರಚನೆ ಮಾಡದೆಯೇ 2024ರ ಜೂನ್​ 11ರಂದು ಅರ್ಜಿಗಳನ್ನು ಆಹ್ವಾನ ಮಾಡಿದೆ. ಜೊತೆಗೆ, ಸಲ್ಲಿಕೆಯಾಗಿದ್ದ 184 ಅರ್ಜಿಗಳ ಯಾವುದೇ ರೀತಿಯ ಪರಿಶೀಲನೆ ನಡೆಸದೆ, ಅವುಗಳ ಪೈಕಿ ಏಳು ಮಂದಿಯನ್ನು ನೇಮಕ ಮಾಡಿ 2025ರ ಜನವರಿ 30ರಂದು ಆದೇಶ ಹೊರಡಿಸಿದೆ. ಇದು ಸುಪ್ರೀಂ ಕೋರ್ಟ್​​ನ ಆದೇಶವನ್ನು ಉಲ್ಲಂಘಿಸಿದಂತಾಗಲಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ರಾಜ್ಯ ಮುಖ್ಯ ಮಾಹಿತಿ ಆಯುಕ್ತರ ಹುದ್ದೆಗೆ ಆಯ್ಕೆಯಾಗಿರುವ ಎ.ಎಂ.ಪ್ರಸಾದ್ ಅವರು ಆ ಹುದ್ದೆಗಾಗಿ ಅರ್ಜಿಯನ್ನು ಸಲ್ಲಿಸಿಯೇ ಇಲ್ಲ. ಆದರೆ, ರಾಜ್ಯ ಮಾಹಿತಿ ಆಯುಕ್ತರ ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಯಾವುದೇ ವಿವರಣೆ ಇಲ್ಲದೆ ಅವರನ್ನು ಮುಖ್ಯ ಮಾಹಿತಿ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ:ವಾಹನ ಚಲಾಯಿಸಿದ ಅಪ್ರಾಪ್ತ ಬಾಲಕ: ಮಾಲೀಕರಿಗೆ 25 ಸಾವಿರ ದಂಡ ವಿಧಿಸಿದ ಕೋರ್ಟ್​

ಅಲ್ಲದೆ, ಎ.ಎಂ.ಪ್ರಸಾದ್ ಜನ್ಮ ಪ್ರಮಾಣ ಪತ್ರದ ಪ್ರಕಾರ 2025ರ ಅಕ್ಟೋಬರ್​ 29ಕ್ಕೆ 65 ವರ್ಷ ತಲುಪಲಿದ್ದಾರೆ. ಹೀಗಿರುವಾಗ, ಮುಖ್ಯ ಆಯುಕ್ತರ ಹುದ್ದೆಯನ್ನು ಕೇವಲ 9 ತಿಂಗಳು ಮಾತ್ರ ಕಾರ್ಯನಿರ್ವಹಣೆ ಮಾಡಲಿದ್ದಾರೆ. ಅಲ್ಲದೆ, ಅವರು ಅರ್ಜಿ ಸಲ್ಲಿಸದ ಹುದ್ದೆಗೆ ನೇಮಕ ಮಾಡಲಾಗಿದ್ದು ವಿಶೇಷ ಸೌಲಭ್ಯವನ್ನು ನೀಡಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

ಆದರೆ, ಈವರೆಗೂ ರಾಜ್ಯ ಮಾಹಿತಿ ಆಯುಕ್ತರ ಹುದ್ದೆಗೆ ಮೂರು ಬಾರಿ ಅರ್ಜಿ ಸಲ್ಲಿಸಲಾಗಿದೆ. ಆದರೆ, ನಮ್ಮ ಅರ್ಜಿ ಪರಿಗಣಿಸಿಲ್ಲ. ಆದ್ದರಿಂದ ಸರ್ಕಾರ ನೇಮಕಾತಿ ಆದೇಶವನ್ನು ರದ್ದುಪಡಿಸಿ ಆದೇಶಿಸಬೇಕು. ಶೋಧನಾ ಸಮಿತಿ ರಚನೆ ಮಾಡಿ ಸುಪ್ರೀಂ ಕೋರ್ಟ್ ಆದೇಶದಂತೆ ನೇಮಕ ಪ್ರಕ್ರಿಯೆ ನಡೆಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಇದನ್ನೂ ಓದಿ:ಕೊಲೆ ಯತ್ನ ಪ್ರಕರಣಕ್ಕೆ ಪ್ರತಿಯಾಗಿ ಎಸ್ಸಿ - ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದೂರು: ಎಫ್​ಐಆರ್ ರದ್ದು

ABOUT THE AUTHOR

...view details