ಮಂಗಳೂರು:''ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ರಾಜ್ಯಕ್ಕೆ ಬಾಂಬ್ ಕೊಟ್ಟ ಕಾಂಗ್ರೆಸ್ ಪಕ್ಷದ ಕೈಗೆ ಜನತೆ ಚೊಂಬು ಕೊಡುತ್ತಾರೆ'' ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತೀವ್ರ ವಾಗ್ದಾಳಿ ನಡೆಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ''ಸಿದ್ದರಾಮಯ್ಯ ಸರಕಾರ ಬಂದ ಬಳಿಕ ರಾಜ್ಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್, ಹಿಂದೂಗಳ ಹತ್ಯೆ, ಹಲ್ಲೆಗಳು ನಡೆಯುತ್ತಿದೆ. ಡಿಜೆ ಹಳ್ಳಿ, ಕೆಜಿ ಹಳ್ಳಿ, ರಾಮೇಶ್ವರಂ ಕೆಫೆ ಬ್ಲಾಸ್ಟ್ ಆದಾಗ ಪ್ರಕರಣವನ್ನು ಕಾಂಗ್ರೆಸ್ ತಿರುಚುವ ಕೆಲಸ ಮಾಡಿತ್ತು. ಅಖಂಡ ಶ್ರೀನಿವಾಸ್ ಮೂರ್ತಿ ಮನೆ ಮೇಲೆ ದಾಳಿಯಾದಾಗ ಅವರ ಮನೆಗೆ ಯಾವುದೇ ಕಾಂಗ್ರೆಸ್ ಮುಖಂಡ ಹೋಗಿಲ್ಲ. ಇದೀಗ ನೇಹಾ ಹತ್ಯೆಯಾಗಿದೆ ಅವರದ್ದೇ ಪಕ್ಷದ ಕಾರ್ಪೋರೇಟರ್ ಪುತ್ರಿ. ಆದರೆ, ಅವರ ಮನೆಗೆ ಹೋಗಿ ಸಾಂತ್ವನವನ್ನು ಹೇಳುವ ಕಾರ್ಯವನ್ನು ಮಾಡಿಲ್ಲ. ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ನಾವು ಆಗ್ರಹಿಸುತ್ತೇವೆ'' ಎಂದರು.
''ಕಾಂಗ್ರೆಸ್ನೊಂದಿಗೆ ಎಸ್ಡಿಪಿಐ ಒಳಸಂಬಂಧ ಇರಿಸಿಕೊಂಡಿದೆ. ಪಿಎಫ್ಐ ನಿಷೇಧದ ಬಳಿಕ ಹಿಂದೂಗಳ ಹತ್ಯೆಗಳು ನಿಯಂತ್ರಣಕ್ಕೆ ಬಂದಿತ್ತು. ಇದೀಗ ಸಿದ್ದರಾಮಯ್ಯ ಸರ್ಕಾರದ ತುಷ್ಟೀಕರಣದಿಂದ ಮತ್ತೆ ಇಂತಹ ಹತ್ಯೆಗಳು ಹೆಚ್ಚಾಗುತ್ತಿದೆ. ಇದರಿಂದಾಗಿ ಇಂದು ಬಹುಸಂಖ್ಯಾತ ಹಿಂದೂಗಳಿಗೆ ಬದುಕುವುದು ಕಷ್ಟವಾಗಿದೆ. ಹತ್ಯೆಗಳಾದಲ್ಲಿ ಹತ್ಯೆಯ ತನಿಖೆಯನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿಲ್ಲ. ಎನ್ಐಎ ಸಕ್ರಿಯವಾಗಿರುವುದರಿಂದ ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ತನಿಖೆಯಾಗಿದೆ. ಅಂದು ಕಾಂಗ್ರೆಸ್ ಇದ್ದಿದ್ದರೆ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ ಹಳ್ಳ ಹಿಡಿಯುತ್ತಿತ್ತು'' ಎಂದು ನಳಿನ್ ಕುಮಾರ್ ಕಿಡಿಕಾರಿದರು.