ಬೆಂಗಳೂರು:ಹಾಸನದಮಾಜಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿದ್ದ ಮೂರನೇ ಪ್ರಕರಣದ ವಿಚಾರಣೆ ನಡೆಸಿದ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆರೋಪಿಯನ್ನು ಜೂನ್ 24ರವರೆಗೆ ಎಸ್‌ಐಟಿ ವಶಕ್ಕೆ ನೀಡಿ ಆದೇಶಿಸಿದೆ. ಈ ಪ್ರಕರಣದ ತನಿಖೆ ಕೋರಿ ಎಸ್‌ಐಟಿ ಸಲ್ಲಿಸಿದ್ದ ಮನವಿ ಪರಿಗಣಿಸಿದ ನ್ಯಾಯಾಲಯ ಸ್ಥಳ ಮಹಜರು, ಹೇಳಿಕೆ ದಾಖಲು, ಧ್ವನಿ ಮಾದರಿ, ವೈದ್ಯಕೀಯ ಪರೀಕ್ಷೆಯ ಮಾಹಿತಿ ಪಡೆದುಕೊಳ್ಳಲು ಪೊಲೀಸರಿಗೆ ಅವಕಾಶ ನೀಡಿದೆ.
ವಿಚಾರಣೆ ವೇಳೆ ಪ್ರಕರಣದ ಎಸ್‌ಪಿಪಿ ಅಶೋಕ್ ನಾಯಕ್ ವಾದ ಮಂಡಿಸಿ, ಅತ್ಯಾಚಾರ ಪ್ರಕರಣಗಳಲ್ಲಿ ಬೇರೆ ಪ್ರಕರಣದ ಮಹಜರು ಮತ್ತು ಸ್ಯಾಂಪಲ್ ಬಳಕೆ ಅಸಾಧ್ಯ. ಸಂತ್ರಸ್ತೆಯರು ಬೇರೆ ಬೇರೆ. ಎಂಟು ವಿಡಿಯೋ ಕ್ಲಿಪ್‌ಗಳಿವೆ. ದೇಹದ ಬೇರೆ ಬೇರೆ ಭಾಗಗಳು ಕಂಡಿವೆ. ಅದಕ್ಕಾಗಿ ವೈದ್ಯಕೀಯ ಪರೀಕ್ಷೆ ಅಗತ್ಯವಿದೆ. ಧ್ವನಿ ಮಾದರಿ ನೀಡುವಾಗ ಬದಲಾಯಿಸಿ ಮಾತನಾಡುವ ಸಾಧ್ಯತೆ ಇದೆ. ಹೀಗಾಗಿ ಧ್ವನಿ ಮಾದರಿ ಸಂಗ್ರಹಿಸಬೇಕಿದೆ ಎಂದು ಪೀಠಕ್ಕೆ ವಿವರಿಸಿದರು.
ಆರೋಪಿಗೆ ಹಿಂಸೆ ನೀಡಲಾಗುತ್ತಿದೆ ಎನ್ನುತ್ತಿದ್ದಾರೆ. ಈ ಪ್ರಕ್ರಿಯೆಯಲ್ಲಿ ಹಿಂಸೆ ಹೇಗೆ ಸಾಧ್ಯ? ಎಂಬ ಅಂಶವನ್ನು ಸಾಬೀತುಪಡಿಸಬೇಕು. ಈ ವಿಚಾರಣೆ ಸಂಬಂಧ ನಿನ್ನೆ ಮಜುಗರವಾಗುತ್ತಿದೆ ಎಂಬುದಾಗಿ ಹೇಳಿದ್ದರು. ಆದರೂ ತನಿಖಾ ಪ್ರಕ್ರಿಯೆಗಳನ್ನು ನಡೆಸಬೇಕಾದ ಅಗತ್ಯವಿದೆ. ಪಂಚನಾಮೆ ಮಾಡಬೇಕಿದೆ. ಸಂಸದರ ಸರ್ಕಾರಿ ಮನೆಯಲ್ಲಿ ನಡೆದ ಕೃತ್ಯದ ಕುರಿತು ವಿಚಾರಣೆ ಮಾಡಬೇಕಿ ಎಂದು ವಾದ ಮಂಡಿಸಿದರು.