ಉತ್ತರ ಕನ್ನಡದಲ್ಲಿ ಮುಂಗಾರು ಅಬ್ಬರ (ETV Bharat) ಕಾರವಾರ: ಉತ್ತರ ಕನ್ನಡದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಅಬ್ಬರಿಸುತ್ತಿರುವ ಮುಂಗಾರು ಮಳೆಯಿಂದಾಗಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಇನ್ನೂ ಕೆಲವೆಡೆ ಮರ ಬಿದ್ದು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಅದರಲ್ಲೂ ಕರಾವಳಿ ಭಾಗವಾದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕುಗಳಲ್ಲಿ ಗಾಳಿಸಹಿತ ಭಾರೀ ಮಳೆಯಾಗುತ್ತಿದೆ. ಕಾರವಾರದ ಬಿಣಗಾ ಮಾಳಸಾವಾಡದಲ್ಲಿ ಕಳೆದೆರಡು ದಿನಗಳ ಹಿಂದೆ ಗಾಳಿ ಮಳೆಗೆ ಮರವೊಂದು ವಿದ್ಯುತ್ ತಂತಿ ಮೇಲೆ ಉರುಳಿಬಿದ್ದು ಟ್ರಾನ್ಸ್‌ಫಾರ್ಮರ್ ಸೇರಿದಂತೆ 7 ವಿದ್ಯುತ್ ಕಂಬಗಳು ಸಾಲಾಗಿ ನೆಲಕ್ಕುರುಳಿವೆ.
ಮಳೆ ಹೆಚ್ಚಿದ್ದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ವಿದ್ಯುತ್ ಕಂಬ ಸರಿಪಡಿಸಲು ಅಡ್ಡಿಯಾಗಿದೆ. ಟ್ರಾನ್ಸ್‌ಫಾರ್ಮರ್ ಬಿದ್ದು ಎರಡು ದಿನಗಳ ಬಳಿಕ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ದುರಸ್ಥಿ ಕಾರ್ಯಕ್ಕೆ ಕೆಇಬಿ ಸಿಬ್ಬಂದಿ ಮುಂದಾಗಿದ್ದಾರೆ. ಮುರಿದುಬಿದ್ದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಹೊಸ ಕಂಬಗಳನ್ನು ಅಳವಡಿಸುತ್ತಿದ್ದಾರೆ.
ಬಿಣಗಾದಲ್ಲಿ ಸುಮಾರು 1,600ಕ್ಕೂ ಅಧಿಕ ಕುಟುಂಬಗಳು ಜೀವನ ಸಾಗಿಸುತ್ತಿದ್ದು, ಮಳೆಗಾಲದಲ್ಲಿ ಸುತ್ತಲಿನ ಪ್ರದೇಶಗಳಿಂದ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದುಬರುತ್ತದೆ. ಆದರೆ ಗ್ರಾಮದ ನೀರು ಹರಿದುಹೋಗುವ ಕಾಲುವೆಗೆ ನೌಕಾನೆಲೆಯಿಂದಲೂ ಮಳೆ ನೀರು ಹರಿದು ಬರುತ್ತಿದ್ದು, ಮಳೆ ಹೆಚ್ಚಾದಾಗ ನೀರು ಸರಾಗವಾಗಿ ಹರಿದುಹೋಗದೇ ನೆರೆ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿ ನೀರು ಹರಿದುಹೋಗುವ ಕಾಲುವೆಯನ್ನು ಸರಿಪಡಿಸಿ, ನೌಕಾನೆಲೆ ನೀರು ಒಳಗಿನಿಂದಲೇ ಸಮುದ್ರ ಸೇರುವಂತೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟ: ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ - KARNATAKA RAIN FORECASTING