ಚಾಮರಾಜನಗರ: ಏಕ ಬಳಕೆ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಬಾಟಲಿ, ತಟ್ಟೆ, ಚಮಚ ಇತ್ಯಾದಿ ತ್ಯಾಜ್ಯ ಅರಣ್ಯ ಪ್ರವೇಶಿಸದಂತೆ ತಡೆಯಲು ಅರಣ್ಯದೊಳಗೆ ಸಾಗುವ ಮಾರ್ಗದಲ್ಲಿ 2 ಹಂತದ ತಪಾಸಣೆ ವ್ಯವಸ್ಥೆಯನ್ನು ಶೀಘ್ರ ಜಾರಿಗೊಳಿಸುವಂತೆ ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬಂಡೀಪುರದಲ್ಲಿಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕೇರಳ ಮತ್ತು ತಮಿಳುನಾಡು ಸಂಪರ್ಕ ಕಲ್ಪಿಸುವ ಕೆಕ್ಕನಹಳ್ಳ, ಮೂಲೆಹೊಳೆ, ಮದ್ದೂರು ಗೇಟ್, ಮೇಲುಕಾಮನಹಳ್ಳಿ ಗೇಟ್ ಬಳಿ ಪ್ರತಿ ನಿತ್ಯ 30-35 ಕೆ.ಜಿ. ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಆಗುತ್ತಿದೆ. ಪ್ರತಿ ವರ್ಷ ಈ ನಾಲ್ಕು ತಪಾಸಣಾ ಕೇಂದ್ರಗಳಲ್ಲಿ ಸುಮಾರು 11 ರಿಂದ 12 ಟನ್ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗುತ್ತಿದೆ ಎಂಬ ಮಾಹಿತಿ ಇದೆ. ಅರಣ್ಯ ಸಿಬ್ಬಂದಿ ಕಾಡಿನಲ್ಲಿ ಇಳಿದು ಪ್ಲಾಸ್ಟಿಕ್ ಸಂಗ್ರಹಿಸುವಾಗ ವನ್ಯಜೀವಿ ದಾಳಿ ಮಾಡುವ, ಹಾವು ಕಚ್ಚುವ ಅಪಾಯ ಇರುತ್ತದೆ. ಹೀಗಾಗಿ ಪ್ಲಾಸ್ಟಿಕ್ ತ್ಯಾಜ್ಯ ಅರಣ್ಯ ಪ್ರವೇಶಿಸದಂತೆ ದ್ವಾರದಲ್ಲೇ ತಡೆಯುವ ವ್ಯವಸ್ಥೆ ಮಾಡಿ ಎಂದರು.
ಅರಣ್ಯದೊಳಗೆ ಹಾದು ಹೋಗುವ ಹೆದ್ದಾರಿಗಳಲ್ಲಿ, ರಸ್ತೆಗಳಲ್ಲಿ ಸಂಚರಿಸುವ ವಾಹನಗಳಿಗೆ 2 ಹಂತದ ತಪಾಸಣೆ ವ್ಯವಸ್ಥೆ ಜಾರಿ ಮಾಡಿ, ಮೊದಲ ಹಂತದಲ್ಲಿ ಒಂದು ದೊಡ್ಡ ಬುಟ್ಟಿ ಇಟ್ಟು ಏಕ ಬಳಕೆ ಪ್ಲಾಸ್ಟಿಕ್ ಬಾಟಲಿ, ಲೋಟ, ತಟ್ಟೆ, ಕ್ಯಾರಿ ಬ್ಯಾಗ್ ಅನ್ನು ಅದರಲ್ಲಿ ಸ್ವಯಂ ಪ್ರೇರಿತವಾಗಿ ಹಾಕಲು ವಾಹನದಲ್ಲಿರುವವರಿಗೆ ತಿಳಿಸಿ. ನಂತರ ಎರಡನೇ ಹಂತದಲ್ಲಿ ವಾಹನ ತಪಾಸಣೆ ಮಾಡಿ, ವಾಹನಗಳಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಇದ್ದರೆ ದಂಡ ವಿಧಿಸಿ ಎಂದು ಸೂಚಿಸಿದರು.