ಕರ್ನಾಟಕ

karnataka

ETV Bharat / state

10 ಲಕ್ಷ ವಿಮೆ ಪಾವತಿಗೆ ವಿಳಂಬ: ಅರ್ಜಿದಾರನಿಗೆ ಪರಿಹಾರ ನೀಡಲು ಬ್ಯಾಂಕ್, ವಿಮಾ ಕಂಪನಿಗೆ ಆದೇಶ

ಜೀವ ವಿಮೆ ಮೊತ್ತ ಪಾವತಿಸಲು ವಿಳಂಬ ಮಾಡಿದ ಬ್ಯಾಂಕ್ ಮತ್ತು ವಿಮಾ ಕಂಪನಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿ ಆದೇಶಿಸಿದೆ.

penalty-on-bank-and-insurance-company-for-delay-in-payment-of-insurance-amount
10 ಲಕ್ಷ ಜೀವ ವಿಮೆ ಮೊತ್ತ ಪಾವತಿಗೆ ವಿಳಂಬ: ಅರ್ಜಿದಾರನಿಗೆ ಪರಿಹಾರ ನೀಡಲು ಬ್ಯಾಂಕ್, ವಿಮಾ ಕಂಪನಿಗೆ ಆದೇಶ

By ETV Bharat Karnataka Team

Published : Mar 19, 2024, 8:30 PM IST

ಶಿವಮೊಗ್ಗ: ಜೀವ ವಿಮೆ ಮೊತ್ತ ಪಾವತಿಸಲು ವಿಳಂಬ ಮಾಡಿದ ಶಿವಮೊಗ್ಗದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಯೂನಿವರ್ಸಲ್ ಸೊಂಪೊ ಜನರಲ್ ಇನ್ಶೂರೆನ್ಸ್ ಕಂಪನಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿ ಆದೇಶಿಸಿದೆ. ವಿಮಾ ಮೊತ್ತಕ್ಕೆ ಶೇ.10 ಬಡ್ಡಿ ಮತ್ತು ಅರ್ಜಿದಾರರಿಗೆ ಮಾನಸಿಕ ಪರಿಹಾರ ಹಾಗೂ ಕೋರ್ಟ್​ ವೆಚ್ಚವನ್ನು ನೀಡಲು ಸೂಚಿಸಿದೆ.

ಗೋವಿಂದನಾಯ್ಕ ಎಂಬುವವರು ಆಯನೂರಿನ ಕರ್ನಾಟಕ ಗ್ರಾಮೀಣ ಬ್ಯಾಂಕ್‍ನಲ್ಲಿ 2014ರಲ್ಲಿ ಉಳಿತಾದ ಖಾತೆ ತೆರೆದಿದ್ದರು. ಈ ಖಾತೆಗೆ ಯೂನಿವರ್ಸಲ್ ಸೊಂಪೊ ಜನರಲ್ ಇನ್ಶೂರೆನ್ಸ್ ಕಂಪನಿಯಿಂದ ಕೆಬಿಎಲ್ ಸುರಕ್ಷಾ ಪಾಲಿಸಿ ಹೊಂದಿದ್ದರು. ಇದರ ನಡುವೆ 2020ರ ಜೂನ್ 2 ರಂದು ವಿದ್ಯುತ್​ ಶಾಕ್‍ನಿಂದ ಗೋವಿಂದನಾಯ್ಕ ಮೃತಪಟ್ಟಿದ್ದರು. ಬಳಿಕ ಮೃತರ ತಂದೆ ಬ್ಯಾಂಕ್ ಮತ್ತು ವಿಮಾ ಕಂಪನಿಯನ್ನು ಸಂಪರ್ಕಿಸಿ ವಿಮಾ ಪರಿಹಾರ ಮೊತ್ತ ಸಂದಾಯ ಮಾಡುವಂತೆ ಮನವಿ ಮಾಡಿದ್ದರು.

ಆದರೆ, ಬ್ಯಾಂಕ್‍ನವರು ಮೃತರ ಖಾತೆ ಮುಕ್ತಾಯಗೊಳಿಸಿರುವುದರಿಂದ ಕೆಬಿಎಲ್ ಸುರಕ್ಷಾ ಪ್ರಮಾಣಪತ್ರ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಮತ್ತೊಂದೆಡೆ, ವಿಮಾ ಕಂಪನಿಯವರು ಪರಿಹಾರ ಕೋರಿಕೆ ಅರ್ಜಿ ತಡವಾಗಿ ಸಲ್ಲಿಸಿದ್ದಾರೆ ಎಂದು ಹೇಳಿ ಪರಿಹಾರ ಮೊತ್ತ ನೀಡಲು ನಿರಾಕರಿಸಿದ್ದರು. ಹೀಗಾಗಿ ಮೃತ ಗೋವಿಂದನಾಯ್ಕ ತಂದೆ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದರು.

ಆಯೋಗವು ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ, ಬ್ಯಾಂಕ್‍ನವರು ಖಾತೆ ಮುಕ್ತಾಯಗೊಳಿಸುವ ಪೂರ್ವದಲ್ಲಿ ಸದರಿ ಖಾತೆಗೆ ಯಾವುದಾದರೂ ವಿಮೆ ಮಾಡಿಸಲಾಗಿದೆಯೇ ಎಂಬುದನ್ನು ತಪಾಸಣೆ ಮಾಡಿರುವುದಿಲ್ಲ. ಇದರ ಬಗ್ಗೆ ಮೃತರ ಸಂಬಂಧಿಗಳಿಗೂ ಯಾವುದೇ ಮಾಹಿತಿ ನೀಡಿರುವುದಿಲ್ಲ. ಖಾತೆದಾರ ಮೃತಪಟ್ಟ ಸಂದರ್ಭದಲ್ಲಿ ಕೋವಿಡ್ ಲಾಕ್‍ಡೌನ್ ಸಹ ಇರುತ್ತದೆ. ಈ ಎಲ್ಲ ಕಾರಣದಿಂದ ಅರ್ಜಿದಾರರು ವಿಮಾ ಕಂಪನಿಗೆ ಅರ್ಜಿ ಸಲ್ಲಿಸಲು ತಡವಾಗಿರುತ್ತದೆ ಎಂದು ಗಮನಿಸಿದೆ.

ಆದ್ದರಿಂದ ಆಯೋಗವು 1ನೇ ಪ್ರತಿವಾದಿಯಾದ ಬ್ಯಾಂಕ್ ಮತ್ತು 2ನೇ ಪ್ರತಿವಾದಿಯಾದ ವಿಮಾ ಕಂಪನಿಯವರ ನಿರ್ಲಕ್ಷ್ಯದಿಂದ ಕೂಡಿದ ನಿರಾಕರಣೆ ಕಾರ್ಯವು ಸೇವಾನ್ಯೂನ್ಯತೆ ಎಂದು ಪರಿಗಣಿಸಿ ಪ್ರಕರಣವನ್ನು ಭಾಗಶಃ ಪುರಸ್ಕರಿಸಿರುತ್ತದೆ. ಜೊತೆಗೆ ಪ್ರತಿವಾದಿಗಳಿಗೆ ನೋಟಿಸ್‍ಗಳನ್ನು ಜಾರಿಗೊಳಿಸಿತ್ತು. ಈ ಸಂದರ್ಭದಲ್ಲಿ ವಿಮಾ ಕಂಪನಿ ಅರ್ಜಿದಾರರ ಖಾತೆಗೆ ವಿಮಾ ಮೊತ್ತ 10 ಲಕ್ಷ ರೂ ಗಳನ್ನು ಜಮೆ ಮಾಡಿತ್ತು.

ಇದೀಗ ಈ ವಿಮಾ ಮೊತ್ತಕ್ಕೆ ಸಂಬಂಧಿಸಿದಂತೆ ಶೇ.10 ರಷ್ಟು ಬಡ್ಡಿಯನ್ನು 2ನೇ ಪ್ರತಿವಾದಿ ತುಂಬಬೇಕು. ಅಲ್ಲದೇ 10 ಸಾವಿರ ರೂ ಮಾನಸಿಕ ಪರಿಹಾರ ಹಾಗೂ 15 ಸಾವಿರ ರೂ ಗಳನ್ನು ನ್ಯಾಯಾಲಯದ ಖರ್ಚುವೆಚ್ಚಗಳ ಬಾಬ್ತು ಎಂದು 1 ಮತ್ತು 2ನೇ ಪ್ರತಿವಾದಿಗಳು ಪಾವತಿಸಬೇಕೆಂದು ಆಯೋಗ ಆದೇಶಿಸಿದೆ.

ಇದನ್ನೂ ಓದಿ:ಪ್ರತ್ಯೇಕ ಘಟನೆ: ಸಮರ್ಪಕ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ ಕೋಟ್ಯಂತರ ರೂಪಾಯಿ ವಶ

ABOUT THE AUTHOR

...view details