ಬಿಆರ್ಟಿಎಸ್ ಬಸ್ ಡಿಕ್ಕಿ ಹೊಡೆದು ಪಾದಚಾರಿ ಸ್ಥಳದಲ್ಲೇ ಸಾವು: ಸಾರ್ವಜನಿಕರ ಪ್ರತಿಭಟನೆ (ETV Bharat) ಹುಬ್ಬಳ್ಳಿ:ಬಿಆರ್ಟಿಎಸ್ (ಚಿಗರಿ) ಬಸ್ವೊಂದು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಗರದ ವಿದ್ಯಾನಗರದ ಗುರುದತ್ ಭವನದ ಬಳಿ ನಡೆದಿದೆ. ನಗರದ ಗೋಕುಲ್ ರಸ್ತೆಯ ಮಂಜುನಾಥ ನಗರದ ವೃದ್ಧ ಗಂಗಾಧರ್ ಬಸವಂತಪ್ಪ ಮಮ್ಮಿಗಟ್ಟಿ (84) ಎಂಬುವರು ಸಾವನ್ನಪ್ಪಿದ್ದಾರೆ.
ಒಂದು ರಸ್ತೆಯಿಂದ ಇನ್ನೊಂದು ರಸ್ತೆಗೆ ದಾಟುತ್ತಿದ್ದ ಹುಬ್ಬಳ್ಳಿಯಿಂದ ಧಾರವಾಡದ ಕಡೆಗೆ ಹೋಗುತ್ತಿದ್ದ ಚಿಗರಿ ಬಸ್ನಿಂದ ಈ ಅವಘಡ ಸಂಭವಿಸಿದೆ. ವೃದ್ಧನ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಕುರಿತಂತೆ ಉತ್ತರ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಾಗಿದೆ.
ಪಾದಚಾರಿ ಸಾವು ಖಂಡಿಸಿ ಸಾರ್ವಜನಿಕರ ಪ್ರತಿಭಟನೆ: ಚಿಗರಿ ಬಸ್ನ ಅತೀ ವೇಗವೇ ಈ ಅನಾಹುತಕ್ಕೆ ಕಾರಣವೆಂದು ಸಾರ್ವಜನಿಕರು ಆರೋಪಿಸಿದರು. ಅಲ್ಲದೆ, ಘಟನಾ ಸ್ಥಳದಲ್ಲಿಯೇ ವೃದ್ಧನ ಸಾವು ಖಂಡಿಸಿದ ಪ್ರತಿಭಟನಾಕಾರರು, ಬಿಆರ್ಟಿಎಸ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪದೇ ಪದೇ ಚಿಗರಿ ಬಸ್ನಿಂದಾಗಿ ಒಂದಿಲ್ಲ ಒಂದು ಅವಘಡಗಳು ಸಂಭವಿಸುತ್ತಿದ್ದು, ಬಿಆರ್ಟಿಎಸ್ನಿಂದಾಗುವ ಅವಘಡಕ್ಕೆ ಬ್ರೇಕ್ ಹಾಕಬೇಕು. ಪಾದಚಾರಿಗಳ ಜೀವಕ್ಕೆ ಕುತ್ತು ಬಾರದ ರೀತಿಯಲ್ಲಿ ಬಿಆರ್ಟಿಎಸ್ ನೋಡಿಕೊಳ್ಳಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ರವಾನಿಸಿದರು.
ಇದನ್ನೂ ಓದಿ:ಬೈಕ್ನಲ್ಲಿ ಹೋಗ್ತಿದ್ದ ವೇಳೆ ತುಂಡರಿಸಿ ಬಿದ್ದ ವಿದ್ಯುತ್ ತಂತಿ: ಸ್ಥಳದಲ್ಲೇ ಯುವ ರೈತ ಸಾವು