ಕರ್ನಾಟಕ

karnataka

ETV Bharat / state

ಶಿಗ್ಗಾಂವಿ‌ ಕ್ಷೇತ್ರದಾದ್ಯಂತ ಶಾಂತಿಯುತ ಮತದಾನ: ಅಮೆರಿಕದಿಂದ ಬಂದು ವೋಟ್​ ಮಾಡಿದ ಯುವತಿ! - SHIGGAON BY ELECTION

ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಶಾಂತಿಯುತವಾಗಿ ಮತದಾನ ನಡೆದಿದ್ದು, ಸಂಜೆ 5 ಗಂಟೆ ವೇಳೆಗೆ ಶೇ.75 ಮತದಾನ ದಾಖಲಾಗಿದೆ.

ಉಪಚುನಾವಣೆ ಮತದಾನ
ಉಪಚುನಾವಣೆ ಮತದಾನ (ETV Bharat)

By ETV Bharat Karnataka Team

Published : Nov 13, 2024, 9:56 PM IST

ಹಾವೇರಿ:ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದಲ್ಲಿಂದು ಮತದಾನ ಬಹುತೇಕ ಶಾಂತಿಯುತವಾಗಿ ಜರುಗಿದ್ದು, ಸಂಜೆ 5 ಗಂಟೆ ವೇಳೆಗೆ ಶೇ.75.07ರಷ್ಟು ಮತದಾನವಾಗಿದೆ. ಕ್ಷೇತ್ರದ ಜನರು ಮತಗಟ್ಟೆಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಹಕ್ಕನ್ನು ಚಲಾಯಿಸಿದ್ದಾರೆ. ಪುತ್ರ ಹಾಗೂ ಶಿಗ್ಗಾಂವಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರೊಂದಿಗೆ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ಕಾರಿ ಮಾದರಿ ಗಂಡು ಮಕ್ಕಳ ಶಾಲೆಯಲ್ಲಿ ಮತದಾನ ಮಾಡಿದರು. ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಹುಲಗೂರಿನಲ್ಲಿ ಮತ ಚಲಾಯಿಸಿದರು.

ಮತದಾನ ಮಾಡಿದ ಅನಿವಾಸಿ ಭಾರತೀಯ ಯುವತಿ: ಅಮೆರಿಕದಲ್ಲಿ ನೆಲೆಸಿರುವ ಅನುಷಾ ಅವರು ಶಿಗ್ಗಾಂವಿ ಪಟ್ಟಣದ ಮಾಮಾಲೇದೇಸಾಯಿ ಕಾಲೇಜು ಮತಗಟ್ಟೆಯಲ್ಲಿ ಮತದಾನ ಮಾಡಿ ಗಮನ ಸೆಳೆದರು.

ರೌಡಿಶೀಟರ್ ವಶಕ್ಕೆ:ಮತದಾನದ ವೇಳೆ ಪೊಲೀಸ್ ಸಿಬ್ಬಂದಿ ಜೊತೆ ಅನುಚಿತ ವರ್ತನೆ ತೋರಿದ ರೌಡಿಶೀಟರ್​ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ಮಾಮಾಲೇದೇಸಾಯಿ ಕಾಲೇಜು ಮುಂಭಾಗ ನಡೆದಿದೆ. ರೌಡಿಶೀಟರ್ ಸುನೀಲ್​ನನ್ನು ಪೊಲೀಸರು ವಶಕ್ಕೆ ಪಡೆದರು.

ವಿಶೇಷ ಮತಗಟ್ಟೆಗಳು: ಶಿಗ್ಗಾಂವಿ ಕ್ಷೇತ್ರದಲ್ಲಿ 8 ವಿಶೇಷ ಮತಗಟ್ಟೆಗಳು, 5 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಸಖಿ ಮತಗಟ್ಟೆಗಳಲ್ಲಿ ಮಹಿಳಾ ಸಿಬ್ಬಂದಿಗಳೇ ಇದ್ದರು. 8 ವಿಶೇಷ ಮತಗಟ್ಟೆ ಪೈಕಿ ಒಂದು ಯುವ ಮತಗಟ್ಟೆ, ಒಂದು ವಿಶೇಷಚೇತನರ ಮತಗಟ್ಟೆ, ಒಂದು ಜನಪದ ಕಲೆ ಬಿಂಬಿಸುವ ಮತಗಟ್ಟೆ ಇತ್ತು. ಯುವ ಮತಗಟ್ಟೆಯಲ್ಲಿ ಯುವಕರು, ವಿಶೇಷಚೇತನರ ಮತಗಟ್ಟೆಯಲ್ಲಿ ವಿಶೇಷಚೇತನರು ಚುನಾವಣಾ ಸಿಬ್ಬಂದಿಗಳಾಗಿ ಕರ್ತವ್ಯ ನಿರ್ವಹಿಸಿದರು.

ಮತದಾನ ಬಹಿಷ್ಕಾರ:ಸವಣೂರಿನ ವಡ್ಡರ ಓಣಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿ, ಮತದಾನ ಬಹಿಷ್ಕರಿಸಿದರು. ಮತ್ತೊಂದೆಡೆ ಸವಣೂರು ಪಟ್ಟಣದ ದಂಡಿನಪೇಟೆಯಲ್ಲಿ ಹಕ್ಕುಪತ್ರ ನೀಡಿಲ್ಲ ಎಂಬ ಕಾರಣಕ್ಕೆ ಜನರು ಮತದಾನ ಬಹಿಷ್ಕರಿಸಿದರು.

ಇದನ್ನೂ ಓದಿ:ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಉಪಚುನಾವಣೆ: ಸಂಜೆ 5ಗಂಟೆ ವೇಳೆಗೆ ಚನ್ನಪಟ್ಟಣದಲ್ಲಿ ಅತಿ ಹೆಚ್ಚು 84 ರಷ್ಟು ಮತದಾನ

ABOUT THE AUTHOR

...view details