ನೆಲಮಂಗಲ(ಬೆಂಗಳೂರು ಗ್ರಾಮಾಂತರ): ರಾತ್ರಿ ಗಸ್ತಿನಲ್ಲಿದ್ದ ದಾಬಸ್‌ಪೇಟೆ ಪೊಲೀಸರು ಎರಡು ಬಾರಿ ಕಳ್ಳತನಕ್ಕೆ ಪ್ರಯತ್ನಿಸಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ರಂಗನಾಥ್ ಅಲಿಯಾಸ್ ವಿರಾಟ್ ಬಂಧಿತ ಆರೋಪಿ.
ಈತ ಕಳೆದ ಮಂಗಳವಾರ ರಾತ್ರಿ ಸುಮಾರು 1 ಗಂಟೆ ಸಮಯದಲ್ಲಿ ತಾಲೂಕಿನ ಟಿ.ಬೇಗೂರು ಗ್ರಾಮದಲ್ಲಿನ ಎಟಿಎಂನಲ್ಲಿ ಕಳ್ಳತನಕ್ಕೆ ಯತ್ನಿಸಿದಾಗ ಸೈರನ್ ಕೂಗಿಕೊಂಡಿತ್ತು. ಇದರಿಂದ ಭಯಗೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ನಂತರ ಎಟಿಎಂನಿಂದ ಪೊಲೀಸರಿಗೆ ಸಂದೇಶ ರವಾನೆಯಾಗಿತ್ತು. ಕೂಡಲೇ ಸ್ಥಳಕ್ಕಾಗಮಿಸಿದ ನೆಲಮಂಗಲ ಗ್ರಾಮಾಂತರ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ, ಅದರಲ್ಲಿ ದಾಖಲಾಗಿದ್ದ ಆರೋಪಿಯ ಫೋಟೋವನ್ನು ಬೇರೆ ಠಾಣೆಗಳ ವಾಟ್ಸ್ಆ್ಯಪ್ ಗ್ರೂಪ್‌ಗಳಿಗೆ ಕಳುಹಿಸಿ ನಿಗಾವಹಿಸಲು ಸೂಚಿಸಿದ್ದರು.