ಬೆಂಗಳೂರು: "ನಮ್ಮ ಪಕ್ಷದ ವರಿಷ್ಠರು ಸಂಸದೆ ಸುಮಲತಾ ಮೇಲೆ ಅಪಾರ ಗೌರವ ಇಟ್ಟುಕೊಂಡಿದ್ದಾರೆ. ನಾನು ಮೈಸೂರು, ಮಂಡ್ಯ ಲೋಕಸಭಾ ಕ್ಷೇತ್ರಗಳ ಪ್ರವಾಸದ ಬಳಿಕ ಸುಮಲತಾ ಅವರನ್ನು ಭೇಟಿ ಮಾಡಿ, ಮಾತನಾಡುತ್ತೇನೆ. ಅವರನ್ನು ಪಕ್ಷ ಗೌರವಯುತವಾಗಿ ನಡೆಸಿಕೊಳ್ಳುತ್ತದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಈ ಬಾರಿಯ ಲೋಕಸಭಾ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆ ಬಿ.ವೈ. ವಿಜಯೇಂದ್ರ ಅವರು ಇಂದು ಮಧ್ಯಾಹ್ನ ಮಂಡ್ಯದ ಬಿಜೆಪಿ ನಾಯಕರ ಜೊತೆಗೆ ನಭೆ ನಡೆಸಿದರು. ಸಭೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, "ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಗ್ಗಟ್ಟಿನಲ್ಲಿ ಚುನಾವಣೆ ಎದುರಿಸಿ, ಎಲ್ಲ ಕ್ಷೇತ್ರಗಳಲ್ಲೂ ವಿಜಯ ಪತಾಕೆ ಹಾರಿಸಲು ಹೊರಟಿದ್ದೇವೆ" ಎಂದು ಹೇಳಿದರು.
"ನಾರಾಯಣ ಗೌಡರು ಬಿಜೆಪಿಗೆ ಬಂದು ಸಚಿವರಾಗಿ ಕೆಲಸ ಮಾಡಿದ್ದಾರೆ. ನಮ್ಮ ಪಕ್ಷದ ಎಲ್ಲ ಮುಖಂಡರೂ ಜೊತೆ ಸೇರಿ ಸಭೆ ಮಾಡಿದ್ದೇವೆ. ಮಂಡ್ಯದಲ್ಲಿ ನಾವು ಗೆಲ್ಲಬೇಕು, ಆ ಮೂಲಕ ಮೋದಿ ಅವರ ಕೈ ಬಲಪಡಿಸಬೇಕು ಎನ್ನುವುದು ನಮ್ಮ ಗುರಿ. ನಾರಾಯಣ ಗೌಡರು ಸೇರಿದಂತೆ ಎಲ್ಲರೂ ಒಗ್ಗಟ್ಟಾಗಿ ಹೋಗುವ ತೀರ್ಮಾನ ಮಾಡಿದ್ದೇವೆ. ನಾರಾಯಣ ಗೌಡರು ಪಕ್ಷವನ್ನು ಬಿಡಲ್ಲ. ಅವರು ಬಿಜೆಪಿಯಲ್ಲೇ ಇರುತ್ತಾರೆ." ಎಂದು ಸ್ಪಷ್ಟನೆ ನೀಡಿದರು.
ಮಾಜಿ ಸಚಿವ ನಾರಾಯಣಗೌಡ ಮಾತನಾಡಿ, "ನನ್ನನ್ನು ಕಾಂಗ್ರೆಸ್ನವರು ಕರೆಯುತ್ತಿದ್ದಾರೆ. ಆದರೆ, ನಾನು ಪಕ್ಷಕ್ಕೆ ಬರುತ್ತೇನೆ ಎಂದು ಹೇಳಿಲ್ಲ. ಬಿಜೆಪಿಯಲ್ಲೇ ಇದ್ದು ಬಿ. ವೈ. ವಿಜಯೇಂದ್ರ ಹಾಗೂ ಬಿ.ಎಸ್. ಯಡಿಯೂರಪ್ಪ ಅವರ ಕೈ ಬಲಪಡಿಸುತ್ತೇನೆ" ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ:ದಾವಣಗೆರೆ ಬಿಜೆಪಿ ಅತೃಪ್ತರೊಂದಿಗೆ ಬಿಎಸ್ವೈ ಸಭೆ: ರೇಣುಕಾಚಾರ್ಯ ಸೇರಿ ಹಲವರು ಭಾಗಿ - meeting with davanagere bjp leaders