ಬೆಂಗಳೂರು: ನನ್ನ ಅನುಪಸ್ಥಿತಿಯಲ್ಲಿ ಪಕ್ಷಕ್ಕೆ ಬಲ ತುಂಬಬೇಕಿದೆ. ಸಾಮೂಹಿಕ ಜವಾಬ್ದಾರಿ ತೆಗೆದುಕೊಂಡು ಸಂಘಟನೆಗೆ ಹೆಚ್ಚು ಶಕ್ತಿ ಕೊಡಲು ನಿರ್ಧಾರ ಮಾಡಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ನಡೆದ ಕೋರ್ ಕಮಿಟಿ ಸಭೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿಯೊಂದು ಕಾರ್ಯಕರ್ತರ ಶ್ರಮಕ್ಕೂ ತಕ್ಕ ಪ್ರತಿಫಲ ಕೊಡಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಕೇಂದ್ರದಲ್ಲಿ ಜವಾಬ್ದಾರಿ ಕೊಟ್ಟಿದ್ದಾರೆ. ಎರಡು ಜವಾಬ್ದಾರಿಯುತ ಇಲಾಖೆ ನಡೆಸುವ ಜವಾಬ್ದಾರಿ ಇದೆ. ಹಾಗಾಗಿ, ನನ್ನ ಅನುಪಸ್ಥಿತಿಯಲ್ಲಿ ಪಕ್ಷಕ್ಕೆ ಬಲ ತುಂಬಬೇಕಿದೆ. ಎಲ್ಲರ ಸಲಹೆ ಏನೆಂದರೆ ಸಂಘಟನೆಗೆ ನಿಖಿಲ್ ಕುಮಾರಸ್ವಾಮಿ ಅವರು ಹೆಚ್ಚಿನ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು. ನಮ್ಮ ಸಲಹೆಗಳನ್ನು ಕಾರ್ಯರೂಪಕ್ಕೆ ತರಲು ಅವರು ಎಲ್ಲರ ಜೊತೆಯಲ್ಲಿ ವಿಶ್ವಾಸದಿಂದ ಸಂಘಟನೆಯಲ್ಲಿ ತೊಡಗಿಕೊಳ್ಳುವಂತೆ ಸಲಹೆ ನೀಡಿದ್ದಾರೆ ಎಂದು ಹೇಳಿದರು.
ಪಕ್ಷದ ನಾಯಕರುಗಳ ಸಲಹೆಗಳು ಪಡೆದು ವಿಶ್ವಾಸದ ಮೂಲಕ ಪಕ್ಷ ಸಂಘಟನೆ ಬಗ್ಗೆ ತೀರ್ಮಾನ ಮಾಡಲಾಗಿದೆ. ಶಾಸಕರು ಮತ್ತು ಕೋರ್ ಕಮಿಟಿ ಸದಸ್ಯರು ಸೇರಿದಂತೆ ಹಲವರು ಪಕ್ಷದ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಸಂಪೂರ್ಣವಾಗಿ ಜವಾಬ್ದಾರಿ ನೀಡಿದ್ದಾರೆ. ಕಳೆದ ಲೋಕಸಭಾ ಚುನಾವಣೆ ನಂತರ, ಶಾಸಕಾಂಗ ಪಕ್ಷದ ಸ್ಥಾನಕ್ಕೆ ನಾನು ರಾಜೀನಾಮೆ ನೀಡಿದ್ದೇನೆ. ಹೊಸ ಶಾಸಕಾಂಗ ಪಕ್ಷದ ಸ್ಥಾನದ ಆಯ್ಕೆ ಮಾಡಲು ಸರ್ವಾನುಮತದಿಂದ ಜವಾಬ್ದಾರಿ ಕೊಟ್ಟಿದ್ದಾರೆ. ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಜೊತೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುವುದು ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಯ ಬಗ್ಗೆ ಪದಾಧಿಕಾರಿಗಳು, ಪಕ್ಷದ ಸಾರ್ವತ್ರಿಕ ಚುನಾವಣೆ ಮೂಲಕ ಪದಾಧಿಕಾರಿಗಳ ಆಯ್ಕೆ ಮಾಡುವ ದೃಷ್ಟಿಯಿಂದ ಮುಂದಿನ ಎರಡ್ಮೂರು ತಿಂಗಳಲ್ಲಿ ಪಕ್ಷದ ಸದಸ್ಯತ್ವ ನೋಂದಣಿ ಬಗ್ಗೆ ತೀರ್ಮಾನ ಮಾಡಲಾಗಿದೆ. ರಾಜ್ಯದ 31 ಜಿಲ್ಲೆಗಳಲ್ಲಿ ವಿಧಾನಸಭೆ ಕ್ಷೇತ್ರಗಳಿಗೆ ಉಸ್ತುವಾರಿ ಕೊಡೋದು, ಕೋರ್ ಕಮಿಟಿ ಸದಸ್ಯರಿಗೂ ಉಸ್ತುವಾರಿ ನೀಡಿ ಆ ಎಲ್ಲ ಜಿಲ್ಲೆಗಳಲ್ಲಿ ಪಕ್ಷದ ಸದಸ್ಯತ್ವ ನೋಂದಣಿ ಮಾಡಲು
ಕೇಡರ್ ಬೇಸ್ ಪಕ್ಷದ ರೀತಿಯಲ್ಲಿ ಪರಿವರ್ತನೆ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.