ದಾವಣಗೆರೆ:ಅವರದ್ದು ಪುಟ್ಟ ಕುಟುಂಬ, ಮನೆಯ ಯಜಮಾನ ಲಾರಿ ಓಡಿಸಿದರೆ ಮಾತ್ರ ಕುಟುಂಬದ ಬದುಕಿನ ಬಂಡಿ ಸಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮನೆಯ ಇಬ್ಬರು ಪುಟ್ಟ ಕಂದಮ್ಮಗಳು ಥಲಸ್ಸೆಮಿಯಾ ಎಂಬ ಕಾಯಿಲೆಗೆ ತುತ್ತಾಗಿದ್ದಾರೆ. ಈಗಾಗಲೇ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವ ಪೋಷಕರು ಮಕ್ಕಳನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.
ದಾವಣಗೆರೆ ತಾಲೂಕಿನ ಬಾತಿ ಗ್ರಾಮದ ನಿವಾಸಿಯಾದ ಗಿರೀಶ್ ಹಾಗೂ ಅನ್ನಪೂರ್ಣ ದಂಪತಿಯ ಇಬ್ಬರು ಪುಟ್ಟ ಪುತ್ರಿಯರು ಥಲಸ್ಸೆಮಿಯಾ ರೋಗಕ್ಕೆ ತುತ್ತಾಗಿದ್ದಾರೆ. ಇಲ್ಲಿಯವರೆಗೆ ಕಂದಮ್ಮಗಳಿಗೆ ಚಿಕಿತ್ಸೆ ಕೊಡಿಸಿ ತಂದೆ ಗಿರೀಶ್ ಹೈರಾಣಾಗಿದ್ದಾರೆ. ಆಸ್ತಿ ಮಾರಿ, ಸಾಲ ಮಾಡಿ ಇಲ್ಲಿತನಕ 50 ಲಕ್ಷ ರೂಪಾಯಿಗೂ ಹೆಚ್ಚು ಖರ್ಚು ಮಾಡಿದ್ದಾರೆ.
ಚಿಕಿತ್ಸೆ ಕೊಡಿಸದಿದ್ದಲ್ಲಿ ಜೀವಕ್ಕೆ ಅಪಾಯ; ಜತೆಗೆ ತಿಂಗಳಿಗೆ ಎರಡು ಬಾರಿ ರಕ್ತ ಹಾಕಿಸುತ್ತಿದ್ದಾರೆ. ಮಕ್ಕಳಿಗೆ ಒಂದು ಬಾರಿ ರಕ್ತ ನೀಡಲು 30 ಸಾವಿರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಇದೀಗ ಹಣ ಇಲ್ಲದೆ ದಿಕ್ಕು ತೋಚದೆ ದಾನಿಗಳ ಬಳಿ ಗಿರೀಶ್ ಸಹಾಯಕ್ಕಾಗಿ ಮೊರೆ ಇಟ್ಟಿದ್ದಾರೆ. ಸರಿಯಾಗಿ ಚಿಕಿತ್ಸೆ ನೀಡದೇ ಇದ್ದಲ್ಲಿ ಪ್ರಾಣಾಪಾಯ ಕಟ್ಟಿಟ್ಟ ಬುತ್ತಿ ಎಂದು ಪೋಷಕರು ಅಳಲು ಆತಂಕ ವ್ಯಕ್ತಪಡಿಸಿದ್ದಾರೆ.