ಕರ್ನಾಟಕ

karnataka

ETV Bharat / state

ಉಡುಪಿ: ಭತ್ತದ ಕಟಾವು ಚುರುಕು-ದ್ವಿದಳ ಧಾನ್ಯ, ಕಲ್ಲಂಗಡಿ, ತರಕಾರಿ ಬಿತ್ತನೆಗೆ ಸಿದ್ಧತೆ - PADDY HARVESTING

ಉಡುಪಿಯಾದ್ಯಂತ ಭತ್ತದ ಕಟಾವು ಚುರುಕುಗೊಂಡಿದ್ದು, 36 ಸಾವಿರ ಹೆಕ್ಟೇರ್​ ಪ್ರದೇಶದಲ್ಲಿ ಮುಂಗಾರು ಭತ್ತ ಬಿತ್ತನೆ ಮಾಡಲಾಗಿದೆ.

ಉಡುಪಿ: ಭತ್ತದ ಕಟಾವು ಚುರುಕು-ದ್ವಿದಳ ಧಾನ್ಯ, ಕಲ್ಲಂಗಡಿ, ತರಕಾರಿ ಬಿತ್ತನೆಗೆ ಸಿದ್ಧತೆ
ಉಡುಪಿ: ಭತ್ತದ ಕಟಾವು ಚುರುಕು-ದ್ವಿದಳ ಧಾನ್ಯ, ಕಲ್ಲಂಗಡಿ, ತರಕಾರಿ ಬಿತ್ತನೆಗೆ ಸಿದ್ಧತೆ (ETV Bharat)

By ETV Bharat Karnataka Team

Published : Nov 9, 2024, 9:26 AM IST

ಉಡುಪಿ: ದೀಪಾವಳಿ ಹಬ್ಬದ ಬಳಿಕ ಮಳೆ ಕಡಿಮೆ ಆಗಿರುವುದರಿಂದ ಜಿಲ್ಲೆಯಾದ್ಯಂತ ಭತ್ತದ ಕಟಾವು ಚುರುಕುಗೊಂಡಿದೆ. ಜಿಲ್ಲೆಯ ಕೆಲವು ಕಡೆಗಳಲ್ಲಿ ಕಟಾವು ಆರಂಭವಾಗತೊಡಗಿದ್ದು, ಭತ್ತ ಮಾರಾಟ ಪ್ರಕ್ರಿಯೆಯೂ ಕೂಡ ನಡೆಯುತ್ತಿದೆ. ಜಿಲ್ಲೆಯಲ್ಲಿ 36 ಸಾವಿರ ಹೆಕ್ಟೇರ್​ ಪ್ರದೇಶದಲ್ಲಿ ಮುಂಗಾರು ಭತ್ತ ಬಿತ್ತನೆ ಮಾಡಲಾಗಿತ್ತು.

ಯಾಂತ್ರಿಕೃತ ವ್ಯವಸ್ಥೆಗೆ ಮೊರೆಹೋದ ಕೃಷಿಕರು:ಯಾಂತ್ರಿಕೃತ ವ್ಯವಸ್ಥೆ ಬರುವ ಮೊದಲು ಊರಿನವರು ಸೇರಿ ಕಟಾವು ಮಾಡುವ ಪ್ರಕ್ರಿಯೆ ಇತ್ತು. ಅನಂತರ ಅದನ್ನು ಮನೆಗೆ ಅಂಗಳಕ್ಕೆ ತಂದು ಭತ್ತ ಮತ್ತು ಹುಲ್ಲನ್ನು ಬೇರ್ಪಡಿಸಲಾಗುತ್ತಿತ್ತು. ಈ ಪ್ರಕ್ರಿಯೆ ಒಂದು ತಿಂಗಳ ಕಾಲ ಊರಲ್ಲಿ ನಡೆಯುತ್ತಿತ್ತು. ಇದೀಗ ಕೃಷಿಕರ ಸಂಖ್ಯೆ ಅಧಿಕವಿದ್ದರೂ ಕೆಲಸಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇವಾಗ ನೇಜಿ ಹಾಗೂ ಕಟಾವು ಯಂತ್ರ ಬಂದಿರುವುದರಿಂದ ಒಂದೇ ದಿನದಲ್ಲಿ ಕೃಷಿಯ ಪ್ರಕ್ರಿಯೆ ಮುಗಿಯುತ್ತಿದೆ.

ಕೃಷಿಕ ರವೀಂದ್ರ ಗುಜ್ಜರಬೆಟ್ಟು ಮಾಹಿತಿ (ETV Bharat)

ಕಟಾವು ಮುಗಿದ ಬಳಿಕವೇ ಮಿಲ್​ಗೆ ಕೊಂಡೊಯ್ಯುವುದು: ಭತ್ತ ಕಟಾವು ಆದ ದಿನ ಅಥವಾ ಮಾರನೇ ದಿನವೇ ಭತ್ತವನ್ನು ಮಿಲ್​ಗೆ ಕೊಂಡೊಯ್ಯಲಾಗುತ್ತದೆ. ಎಲ್ಲಿಯೂ ಕೂಡ ಶೇಖರಿಸಿಟ್ಟುಕೊಳ್ಳುವ ಪದ್ಧತಿ ಇಲ್ಲ. ಕೆಲವೇ ಕೆಲವರು ಮಾತ್ರ ಒಣಗಿಸಿ ಅದನ್ನು ಕರ್ನಾಟಕ ಬೀಜ ನಿಗಮಕ್ಕೆ ನೀಡುತ್ತಾರೆ. ಕರ್ನಾಟಕ ಬೀಜ ನಿಗಮದಿಂದ ಪಡೆದ ಸುಧಾರಿತ ತಳಿ ಭತ್ತದ ಬೇಸಾಯ ಮಾಡಲಾಗಿದ್ದು, ಎಕರೆಗೆ ಸುಮಾರು 24 ಕ್ವಿಂಟಾಲ್​ ಇಳುವರಿ ಪಡೆಯಲಾಗಿದೆ. ಖಾಸಗಿ ಮಿಲ್​ಗಳಿಗೆ ಇದನ್ನು ಮಾರಾಟ ಮಾಡುವುದಿಲ್ಲ. ಒಣಗಿಸಿ ಇಡಲಾಗುವುದು. ನಿಗಮದಿಂದ ಕೆ.ಜಿ.ಗೆ 37.5 ರೂ.ಗಳಂತೆ ಖರೀದಿಸಲಿದ್ದಾರೆ. ರೈತರು ಇದೇ ರೀತಿ ಬೀಜ ನಿಗಮದಿಂದ ಸುಧಾರಿತ ತಳಿಯ ಬೀಜದಿಂದ ಬೇಸಾಯ ಮಾಡಿ, ನಿಗಮಕ್ಕೆ ಬೀಜ ಮಾರಾಟ ಮಾಡುವ ಮೂಲಕ ಉತ್ತಮ ಧಾರಣೆ ಪಡೆಯಬಹುದು.

ದ್ವಿದಳ ಧಾನ್ಯ ಬೆಳವಣಿಗೆ: ಭತ್ತವನ್ನು ಮುಂಗಾರು ಮತ್ತು ಹಿಂಗಾರಿನಲ್ಲಿ ಸಮ ಪ್ರಮಾಣದಲ್ಲಿ ಬೆಳೆಯುವುದಿಲ್ಲ. ಬಹುತೇಕರು ಹಿಂಗಾರಿನಲ್ಲಿ ಭತ್ತದ ಬದಲಿಗೆ ದ್ವಿದಳ ಧಾನ್ಯಗಳನ್ನು ಬೆಳೆಯುತ್ತಾರೆ. ಜಿಲ್ಲೆಯಲ್ಲಿ ಕಟಾವು ಆದ ಬಳಿಕ ನೆಲಕಡಲೆ, ಉದ್ದು, ಹೆಸರುಬೇಳೆ ಇತ್ಯಾದಿಗಳನ್ನು ಬೆಳೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕುಂದಾಪುರ, ಬೈಂದೂರು, ಕೋಟ ಈ ಭಾಗದಲ್ಲಿ ನೆಲಕಡಲೆ, ಉದ್ದು, ಹೆಸರು, ಹೀಗೆ ಧಾನ್ಯವನ್ನು ಹೆಚ್ಚು ಬೆಳೆಯಲಾಗುತ್ತದೆ. ಇನ್ನೂ ಕೆಲವು ಕಡೆ ಈ ಅವಧಿಯಲ್ಲಿ ಕೆಲವು ರೈತರು ಕಲ್ಲಂಗಡಿ ಅಥವಾ ತರಕಾರಿಗಳನ್ನು ಬೆಳೆಯುತ್ತಾರೆ.

ಉಡುಪಿಯಾದ್ಯಂತ ಭತ್ತದ ಕಟಾವು ಚುರುಕು (ETV Bharat)

ಸಂಜೆಯೊಳಗೆ ಕಟಾವು ಪೂರ್ಣ: ಬೆಳಗ್ಗೆಯಿಂದ ಸಂಜೆಯೊಳಗೆ ಎಕರೆಗಟ್ಟಲೆ ಗದ್ದೆಯ ಕಟಾವನ್ನು ಯಂತ್ರದ ಮೂಲಕ ಪೂರೈಸಿ, ಭತ್ತ ಮತ್ತು ಹುಲ್ಲನ್ನು ಯಂತ್ರವೇ ಬೇರ್ಪಡಿಸಲಿದೆ. ಕೃಷಿಕರು ಬೆಳೆದ ಭತ್ತವನ್ನು ಅದೇ ದಿನ ಮಿಲ್​ಗಳಿಗೆ ಕೊಂಡೊಯ್ಯಲಾಗುತ್ತದೆ. ಜಿಲ್ಲೆಯ ಉಡುಪಿ, ಕುಂದಾಪುರ, ಕಾರ್ಕಳ, ಬ್ರಹ್ಮಾವರ, ಹೆಬ್ರಿ, ಬೈಂದೂರು ಹಾಗೂ ಕಾಪು ತಾಲೂಕಿನಾದ್ಯಂತ ಕಟಾವು ನಡೆಯುತ್ತಿದೆ. ಹಿಂದೆಲ್ಲ ಅನೇಕರು ಸೇರಿ ಮಾಡುತ್ತಿದ್ದ ಕಾರ್ಯವನ್ನು ಈಗ ಒಂದು ಯಂತ್ರ ಮಾಡುತ್ತಿದೆ. ಕಾರ್ಮಿಕರು ಸಿಗುತ್ತಿಲ್ಲ ಮತ್ತು ಸ್ಥಳೀಯರು ಪೂರ್ಣ ಪ್ರಮಾಣದಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳುವುದು ಕಡಿಮೆಯಾಗಿದೆ.

ಈ ಬಗ್ಗೆ ಈಟಿವಿ ಭಾರತ ಕನ್ನಡ ಪ್ರತಿನಿಧಿಯವರೊಂದಿಗೆ ಮಾತನಾಡಿದ ಕೃಷಿಕರಾದ ರವೀಂದ್ರ ಗುಜ್ಜರಬೆಟ್ಟು ಅವರು "ಯಂತ್ರದವರಿಗೆ ಗಂಟೆಗೆ 2,400 ರಿಂದ 2,800 ರೂ. ನೀಡಿ ಕಟಾವು ಮಾಡಿಸಲಾಗುತ್ತಿದೆ. ಹೋಬಳಿಗೆ ಕನಿಷ್ಠ ಎರಡು ಯಂತ್ರಗಳಿದ್ದರೆ ಉತ್ತಮವಾಗಿ ಕಟಾವು ಮಾಡಲು ಸಾಧ್ಯ, ಕಟಾವು ಯಂತ್ರಗಳು ಸಮಯಕ್ಕೆ ಸರಿಯಾಗಿ ಸಿಗುವಂತೆ ಇರಬೇಕು. ರೈತ ಉತ್ಪಾದಕ ಕೇಂದ್ರಕ್ಕೆ ಕಟಾವು ಅವಶ್ಯಕತೆಗಳಿದೆ. ಹುಲ್ಲು ಸುತ್ತುವ ಯಂತ್ರವೂ ಬಂದಿರುವುದರಿಂದ ಕಟಾವಾದ ತಕ್ಷಣವೇ ಹುಲ್ಲನ್ನು ಸುತ್ತಿ ಅದನ್ನು ಮಾರಾಟ ಮಾಡಲಾಗುತ್ತದೆ. ಕರಾವಳಿಯ ಈ ಭಾಗದಲ್ಲಿ ಮಿಶ್ರ ಬೆಳೆಯನ್ನು ಬೇಗ ಬೆಳೆಯಲು ಸುಲಭವಾಗುತ್ತದೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ: ಜಗಳೂರು ಕೆರೆಗಳಿಗೆ ಹರಿದ ತುಂಗಭದ್ರೆ, ರೈತರ ಮೊಗದಲ್ಲಿ ಸಂತಸವೋ ಸಂತಸ

ABOUT THE AUTHOR

...view details