ಮೈಸೂರು: ಶ್ರವಣ ದೋಷ ಇರುವ ಮಕ್ಕಳನ್ನು ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಿ ಶಸ್ತ್ರ ಚಿಕಿತ್ಸೆ ಹಾಗೂ ಶ್ರವಣ ಸಾಧನಗಳ ಅಳವಡಿಕೆ ಮೂಲಕ ಗುಣಪಡಿಸಿ ಶ್ರವಣ ದೋಷ ಮುಕ್ತ ಕರ್ನಾಟಕ ಮಾಡುವುದು ನಮ್ಮ ಗುರಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಇಂದು ಹಮ್ಮಿಕೊಂಡಿದ್ದ ಶ್ರವಣ ಸಂಜೀವಿನಿ, ಕ್ಲಾಕಿಯರ್ ಇಂಪ್ಲಾಕ್ಟ್ ಯೋಜನೆಯ ಮರು ನಾಮಕರಣ ಹಾಗೂ ಫಲಾನುಭವಿಗಳಿಗೆ ವಾಕ್ ಮತ್ತು ಶ್ರವಣ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಿವಿ ಕೇಳಿಸದೇ ಇರುವ ಕಿವುಡುತನ ಹುಟ್ಟುವಾಗಲೇ ಕೆಲವರಿಗೆ ಬರುತ್ತದೆ. ಇಂತಹ ಮಕ್ಕಳಿಗೆ ಶ್ರವಣ ಸಾಧನಗಳನ್ನು ಅಳವಡಿಸುವ ಮೂಲಕ ಅಲ್ಪ ಸ್ವಲ್ಪ ಕೇಳಿಸುವಂತೆ ಮಾಡಬಹುದಾಗಿದೆ. ಕಿವುಡುತನಕ್ಕೆ ಚಿಕಿತ್ಸೆ ಪಡೆಯಲು ಲಕ್ಷಾಂತರ ರೂಪಾಯಿ ಭರಿಸಬೇಕಾಗಿತ್ತು. ಇದು ಬಡವರಿಗೆ ಅಸಾದ್ಯ. ಇದರಿಂದ ಸರ್ಕಾರದ ವತಿಯಿಂದ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ. ನಾವು ಒಂದು ವರ್ಷದಲ್ಲಿ ಶ್ರವಣ ದೋಷಕ್ಕೆ 353 ಶಸ್ತ್ರ ಚಿಕಿತ್ಸೆ ಮಾಡಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿ ಇದ್ದೇವೆ. ರಾಜ್ಯದಲ್ಲಿ 27 ಆಸ್ಪತ್ರೆಗಳಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ. ವಾಕ್ ಮತ್ತು ಶ್ರವಣ ಸಂಸ್ಥೆ ಈ ನಿಟ್ಟಿನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಶಸ್ತ್ರ ಚಿಕಿತ್ಸೆಗೆ ಮಗುವನ್ನು ಒಳಪಡಿಸಿ ಶ್ರವಣ ಸಾಧನ ಅಳವಡಿಸಿದ ನಂತರ ಅದನ್ನು ಒಂದೆರಡು ವರ್ಷ ವೀಕ್ಷಣೆ ಮಾಡಬೇಕು. ಕಿವಿ ಕೇಳಿಸದ ಮಗುವಿನ ಬೆಳವಣಿಗೆ ಕುಂಠಿತವಾಗುತ್ತದೆ. ಇಂತಹ ಮಗುವನ್ನು ವಿಶೇಷ ಶಾಲೆಗೆ ಸೇರಿಸಿ ಶಿಕ್ಷಣ ನೀಡಬೇಕು. ಇಂತಹ ಮಗುವಿಗೆ ಶಸ್ತ್ರ ಚಿಕಿತ್ಸೆ ಮೂಲಕ ಕಿವಿ ಕೇಳಿಸುವಂತೆ ಮಾಡಿದರೆ ಆ ಮಗುವು ಸಾಮಾನ್ಯ ಮಕ್ಕಳ ಜೊತೆ ಬೆರೆತು ಉತ್ತಮ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಶ್ರವಣ ದೋಷ ನಿವಾರಣೆಗೆ ವಿಶೇಷ ತಜ್ಞರನ್ನು ನೇಮಕ ಮಾಡಿಕೊಳ್ಳಲಾಗಿದೆ. ಶ್ರವಣ ದೋಷ ಹೊಂದಿರುವ ಮಕ್ಕಳ ಪೋಷಕರು ಯಾರೂ ಆತಂಕಪಡಬಾರದು. ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆ ನಮ್ಮ ಇಲಾಖೆಯ ಮೊದಲ ಆದ್ಯತೆಯಾಗಿದೆ ಎಂದರು.