ಮಂಗಳೂರು:ಮಂಗಳೂರನ್ನು ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿರುವ ಡ್ರೀಮ್ ಡೀಲ್ ಕಂಪನಿಯ ತಿಂಗಳ ಬಹುಮಾನದ ಡ್ರಾದಲ್ಲಿ ಸಿಬ್ಬಂದಿ ವಂಚನೆಯೆಸಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಡ್ರೀಮ್ ಡೀಲ್ ಸಂಸ್ಥೆಯು ತನ್ನ ಗ್ರಾಹಕರಿಗೆ ಪ್ರತಿ ತಿಂಗಳು ಬಹುಮಾನವನ್ನು ನೀಡುತ್ತಿದೆ. ಈ ಬಾರಿ ಮಹೀಂದ್ರಾ ಥಾರ್ ಬಹುಮಾನವಾಗಿ ಘೋಷಿಸಲಾಗಿತ್ತು. ಪ್ರತಿ ಬಾರಿಯಂತೆ ಡ್ರಾ ಮಾಡುವುದನ್ನು ನೇರ ಪ್ರಸಾರ ಮಾಡಲಾಗಿತ್ತು. ಆದರೆ ಈ ಬಾರಿ ನಡೆದ ಡ್ರಾ ವೇಳೆ ಸಿಬ್ಬಂದಿ ವಂಚನೆ ಮಾಡಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
'ಡ್ರೀಮ್ ಡೀಲ್ ಡ್ರಾ'ದಲ್ಲಿ ಸಿಬ್ಬಂದಿಯ ವಂಚನೆಯಾಟ: ವಿಡಿಯೋ ವೈರಲ್ ಬಳಿಕ ಸಂಸ್ಥೆಯ ಸ್ಪಷ್ಟನೆ (ETV Bharat) ಡ್ರಾ ಮಾಡುವ ವೇಳೆ ಓರ್ವ ಸಿಬ್ಬಂದಿಯು ತನ್ನ ಕಿಸೆಯಿಂದ ತಮಗೆ ಬೇಕಾದವರ ಕಾಯಿನ್ ತೆಗೆದು ಮತ್ತೊಬ್ಬನ ಖಾಲಿ ಕೈಯಲ್ಲಿ ಕಾಣದಂತೆ ಅಡಗಿಸಿಟ್ಟು ಬಹುಮಾನದ ಕಾಯಿನ್ ಅನ್ನು ಆಯ್ಕೆ ಮಾಡುತ್ತಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಹಿನ್ನೆಲೆಯಲ್ಲಿ ಮಾಧ್ಯಮಗೋಷ್ಟಿ ಕರೆದು ಮಾತನಾಡಿದ ಡ್ರೀಮ್ ಡೀಲ್ ಸಂಸ್ಥೆಯ ಡೈರೆಕ್ಟರ್ ಮೊಹಮ್ಮದ್ ಸುಹೈಲ್ "ಡ್ರೀಮ್ ಡೀಲ್ ಗ್ರೂಪ್ ವತಿಯಿಂದ ಪ್ರತಿ ತಿಂಗಳು ಪ್ರಮೋಷನ್ಗಾಗಿ ಗಿಫ್ಟ್ ನೀಡುತ್ತೇವೆ. ನಿನ್ನೆ ಲಕ್ಕಿ ಡ್ರಾ ಸಂದರ್ಭದಲ್ಲಿ ಉಬೈದ್ ಮತ್ತು ಹರ್ಷಿತ್ ಅನ್ನುವ ನಮ್ಮ ಕೆಲಸದವರು ಸಂಸ್ಥೆಗೆ ಮೋಸ ಮಾಡಿದ್ದಾರೆ. ಇದು ಗಮನಕ್ಕೆ ಬಂದ ತಕ್ಷಣವೇ ಮರು ಡ್ರಾ ಮಾಡಿದ್ದೇವೆ. ಬಳಿಕ ಅವರ ವಿರುದ್ಧ ಕಂಕನಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಕಂಪನಿ ಮುಂದೆಯೂ ಜನರ ವಿಶ್ವಾಸಕ್ಕೆ ಬದ್ಧವಾಗಿದೆ. ಪೊಲೀಸ್ ಅಧಿಕಾರಿಗಳು ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ" ಎಂದು ಹೇಳಿದ್ದಾರೆ.
"ಡ್ರೀಮ್ ಡೀಲ್ ಸಂಸ್ಥೆಯು ಆರ್ಬಿಐ ನಿಯಮಗಳ ಅನ್ವಯ ಕಾರ್ಯ ನಿರ್ವಹಿಸುತ್ತಿದೆ. ರಾಜ್ಯದಲ್ಲಿ 15,000ಕ್ಕೂ ಅಧಿಕ ಮಂದಿ ಗ್ರಾಹಕರಿದ್ದಾರೆ. ಗ್ರಾಹಕರಿಗೆ ಪ್ರತೀ ತಿಂಗಳು 1000 ಪಾವತಿ ಮಾಡಿದರೆ ಅವರಿಗೆ ಕೂಪನ್ ನೀಡಲಾಗುತ್ತದೆ. ಅದರಲ್ಲಿ ಅವರು ನಮ್ಮ ಇಕಾಮರ್ಸ್ ವೆಬ್ ಸೈಟ್ನಿಂದ ಸಾಮಗ್ರಿ ಖರೀದಿಸಬಹುದು. ಇದೇ ವೇಳೆ ಈ ಗ್ರಾಹಕರಿಗೆ ಲಕ್ಕಿ ಡ್ರಾ ಮೂಲಕ ಬಹುಮಾನ ನೀಡಲಾಗುತ್ತದೆ. ಆಯ್ಕೆಯಾಗುವ ಗ್ರಾಹಕರಿಗೆ ಮಹಿಂದ್ರಾ ಥಾರ್ ಮತ್ತಿತರ ಉಡುಗೊರೆಗಳನ್ನು ಸಂಸ್ಥೆ ನೀಡುತ್ತಾ ಬಂದಿದೆ. ಈ ಬಾರಿ ಡ್ರಾ ಸಂದರ್ಭದಲ್ಲಿ ಯೂಟ್ಯೂಬ್ ಲೈವ್ ಇದ್ದರೂ ಸಂಸ್ಥೆಯ ಇಬ್ಬರು ಕೆಲಸಗಾರರು ಬೇರೊಂದು ಚೀಟಿಯನ್ನು ಉದ್ದೇಶಪೂರ್ವಕವಾಗಿ ಅದರಲ್ಲಿ ಹಾಕಿದ್ದಾರೆ. ಆದರೆ ಅವರು ಅದರಲ್ಲಿ ಯಶಸ್ಸು ಕಾಣಲಿಲ್ಲ. ಬಾಕ್ಸ್ಗೆ ಕೈ ಹಾಕಿದಾಗ ಅವರು ಕೈಯಲ್ಲಿಟ್ಟ ನಂಬರ್ ರಾಶಿಗೆ ಬಿದ್ದಿದೆ. ಈ ವಂಚನೆ ಬೆಳಕಿಗೆ ಬಂದ ತಕ್ಷಣ ಇನ್ನೊಂದು ಡ್ರಾ ಮಾಡಿದ್ದೇವೆ. ಸಂಸ್ಥೆಯು ಗ್ರಾಹಕರ ಹಿತದೃಷ್ಟಿಯಿಂದ ಇಬ್ಬರಿಗೂ ಬಹುಮಾನ ನೀಡಿದ್ದೇವೆ" ಎಂದರು.
"ಪ್ರಸ್ತುತ ಡ್ರೀಮ್ ಡೀಲ್ ಗ್ರೂಪ್ ಗೆ 15ಕ್ಕೂ ಹೆಚ್ಚು ಬ್ರಾಂಚ್ ಗಳು ರಾಜ್ಯಾದ್ಯಂತ ಕಾರ್ಯಾಚರಿಸುತ್ತಿವೆ. ಎಲ್ಲ ಕಡೆಗಳಲ್ಲಿ ಗ್ರಾಹಕ ಸ್ನೇಹಿಯಾಗಿ ಸಂಸ್ಥೆ ಮತ್ತು ನೌಕರರು ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿ ನಡೆದಿರುವ ಘಟನೆಯಲ್ಲಿ ಸಂಸ್ಥೆ ಯಾವುದೇ ರೀತಿಯಲ್ಲಿ ಭಾಗಿಯಾಗಿಲ್ಲ. ತಪ್ಪಿತಸ್ಥ ಕೆಲಸಗಾರರನ್ನು ಈಗಾಗಲೇ ಕೆಲಸದಿಂದ ತೆಗೆದುಹಾಕಲಾಗಿದೆ ಮತ್ತು ಕಾನೂನು ಕ್ರಮ ಜರುಗಿಸಲಾಗುತ್ತದೆ" ಎಂದರು.
"ಡ್ರೀಮ್ ಡೀಲ್ ಗ್ರೂಪ್ ಮುಂದಿನ ದಿನಗಳಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ವಿಸ್ತರಿಸುವ ಉದ್ದೇಶವಿದ್ದು ಅದಕ್ಕಾಗಿ ಯೋಜನೆ ರೂಪಿಸಲಾಗಿದೆ. ಎಲ್ಲ ಬ್ರಾಂಚ್ಗಳಲ್ಲೂ ಗ್ರಾಹಕರಿಗೆ ಯಾವುದೇ ರೀತಿಯಲ್ಲಿ ಮೋಸ ವಂಚನೆಯಾಗದಂತೆ ಕಾರ್ಯ ನಿರ್ವಹಿಸಲಿದ್ದೇವೆ. ಮುಂದಿನ ದಿನಗಳಲ್ಲಿ ಗ್ರಾಹಕರಿಂದಲೇ ಪಾರದರ್ಶಕವಾಗಿ ಲಕ್ಕಿ ಡ್ರಾ ನಡೆಸಲಾಗುವುದು" ಎಂದು ಹೇಳಿದರು.
ಇದನ್ನೂ ಓದಿ:ದೇಶದ ಸೆಮಿಕಂಡಕ್ಟರ್ ವಹಿವಾಟು ವಾರ್ಷಿಕ 100 ಶತಕೋಟಿ ಡಾಲರ್ ತಲುಪಲಿದೆ: ಮೂರ್ತಿ ದಸಾಕ