ಶಿವಮೊಗ್ಗ:ಏಷ್ಯಾದಲ್ಲಿಯೇ ಅತ್ಯಂತ ಕಡಿಮೆ ದರದಲ್ಲಿ ಜಲ ವಿದ್ಯುತ್ ಉತ್ಪಾದನೆ ಮಾಡುವ ಶರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ಕುಡಿಯುವ ನೀರು ಕೊಂಡೊಯ್ಯುವ ಯೋಜನೆಗೆ ಶಿವಮೊಗ್ಗ ಜಿಲ್ಲೆಯ ಸಾಹಿತಿಗಳು, ಹೋರಾಟಗಾರರು, ಸ್ವಾಮೀಜಿಗಳು ಹಾಗೂ ನಾಗರೀಕರು ಭಾರಿ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ಕಳೆದ 10 ವರ್ಷಗಳ ಹಿಂದೆ ಇದೇ ಯೋಜನೆ ಜಾರಿಗೆ ಮುಂದಾಗಿದ್ದ ಸಿದ್ದರಾಮಯ್ಯ ನೇತೃತ್ವ ಸರ್ಕಾರದ ನಡೆ ಖಂಡಿಸಿ, ಶಿವಮೊಗ್ಗ ಜಿಲ್ಲೆಯಲ್ಲಿ ಭಾರಿ ಪ್ರತಿಭಟನೆ ನಡೆಸಲಾಗಿತ್ತು. ಇದಕ್ಕೆ ಬೆದರಿದ ಅಂದಿನ ಸರ್ಕಾರ ಈ ಯೋಜನೆಯನ್ನು ಅಲ್ಲೇ ಕೈ ಬಿಟ್ಟಿತ್ತು. ನಂತರ ಬಂದ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಈ ಯೋಜನೆಯನ್ನು ರದ್ದು ಮಾಡದೆ ಹಾಗೆಯೇ ಉಳಿಸಿಕೊಂಡಿತ್ತು. ಈಗ ಮತ್ತೆ ಸಿದ್ದರಾಮಯ್ಯನವರ ಸರ್ಕಾರ ಅದೇ ಯೋಜನೆ ಜಾರಿಗೆ ಮುಂದಾಗುತ್ತಿದೆ. ಯೋಜನೆಯ ಕುರಿತು ಡಿಪಿಆರ್ನ್ನು ತಯಾರು ಮಾಡಿದೆ ಎನ್ನಲಾಗುತ್ತಿದೆ.
ನಾಡಿಗೆ ಬೆಳಕು ನೀಡಿದ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸುವ ಅವೈಜ್ಞಾನಿಕ ಹಾಗೂ ಪರಿಸರಕ್ಕೆ ಮಾರಕವಾದ ಯೋಜನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸಾಹಿತಿ ನಾ.ಡಿಸೋಜಾ, ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ನಾಗೇಶ್ ಹೆಗಡೆ, ಹೆಗ್ಗೋಡಿನ ಪ್ರಸಿದ್ಧ ರಂಗಕರ್ಮಿ ಚಿದಂಬರ ರಾವ್ ಜಂಬೆ ಸೇರಿದಂತೆ ನಾಡಿನ ಸಾಹಿತಿಗಳು, ಚಿಂತಕರು, ಪರಿಸರ ಹೋರಾಟಗಾರರು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಈ ಯೋಜನೆ ಕೈ ಬಿಡುವಂತೆ ಆಗ್ರಹಿಸಿ ಬಹಿರಂಗ ಪತ್ರವನ್ನು ಬರೆದಿದ್ದಾರೆ.
ಬಹಿರಂಗ ಪತ್ರದಲ್ಲಿನಿದೆ?: "ಯಾವುದೇ ಮಿತಿ ಇಲ್ಲದೆ, ವೈಜ್ಞಾನಿಕ ಯೋಜನೆ ಇಲ್ಲದೆ ಬೆಳೆಯುತ್ತಿರುವ ಬೆಂಗಳೂರು ಮಹಾನಗರದ ಕುಡಿಯುವ ನೀರಿನ ಬೇಡಿಕೆ ನೀಗಿಸಲು ರಾಜ್ಯ ಸರ್ಕಾರ ಈಗ ಮತ್ತೊಮ್ಮೆ ಶರಾವತಿ ನದಿಯ ಮೇಲೆ ಕಣ್ಣು ಹಾಕಿದೆ. ಬೆಂಗಳೂರಿನಿಂದ 380 ಕಿ.ಮೀ. ದೂರದಲ್ಲಿರುವ, ಜಗತ್ತಿನ ಅತ್ಯಪರೂಪದ ಅತಿ ಸೂಕ್ಷ್ಮ ಜೀವ ವೈವಿಧ್ಯದ ಕಣಿವೆಯಾದ ಶರಾವತಿ ಕೊಳ್ಳದಿಂದ ನೀರು ತರುವ ಯೋಜನೆ ಕೈಗೆತ್ತಿಕೊಳ್ಳಲು ಸರ್ಕಾರ ಮತ್ತೆ ಮುಂದಾಗಿದೆ. ಆದರೆ ಈ ಯೋಜನೆ ಕೇವಲ ಶರಾವತಿ ಕೊಳ್ಳವಷ್ಟೇ ಅಲ್ಲದೆ, ಪಶ್ಚಿಮಘಟ್ಟದ ಪರಿಸರ ಸಮತೋಲನದ ಮೇಲೆ ಅಪಾಯಕಾರಿ ಪರಿಣಾಮಗಳನ್ನು ಬೀರಲಿದೆ ಎಂದು ಈಗಾಗಲೇ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಸೇರಿದಂತೆ ಹಲವು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿಂದೆ, 2019ರಲ್ಲಿ ಕೂಡ ಅಂದಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವೂ ಶರಾವತಿ ನೀರನ್ನು ಬೆಂಗಳೂರಿಗೆ ತರುವ ಕುರಿತು ಕಾರ್ಯಸಾಧ್ಯತಾ ವರದಿ ತಯಾರಿಸಲು ಮುಂದಾಗಿತ್ತು. ಆಗ ಶರಾವತಿ ಕೊಳ್ಳದ ಶಿವಮೊಗ್ಗ ಉತ್ತರಕನ್ನಡ ಜಿಲ್ಲೆಗಳ ಜನ ದೊಡ್ಡ ಮಟ್ಟದ ಪ್ರತಿರೋಧ ವ್ಯಕ್ತಪಡಿಸಿದ್ದರು. ತಿಂಗಳುಗಟ್ಟಲೆ ನಡೆದ ನಿರಂತರ ಹೋರಾಟಕ್ಕೆ ಮಣಿದ ಸರ್ಕಾರ, ಯೋಜನೆ ಕಾರ್ಯಸಾಧುವಲ್ಲ, ಹಾಗಾಗಿ ಆ ಯೋಚನೆ ಕೈಬಿಡಲಾಗಿದೆ ಎಂದು ಘೋಷಿಸಿತ್ತು".
"ಐದು ವರ್ಷಗಳಲ್ಲೇ ಸರ್ಕಾರ ಮತ್ತೊಮ್ಮೆ ಶರಾವತಿ ನದಿ ನೀರಿನ ಮೇಲೆ ಕಣ್ಣು ನೆಟ್ಟಿದೆ. ಆದರೆ, ರಾಜ್ಯದ ಅತ್ಯಂತ ಅಪರೂಪದ ಸಿಂಗಳೀಕ ಸಂರಕ್ಷಿತ ಅಭ್ಯಯಾರಣ್ಯವನ್ನೂ ಒಳಗೊಂಡಂತೆ ಮಹತ್ವದ ಜೀವ ಸಂಕುಲ, ಸಾವಿರಾರು ಎಕರೆ ಕಾಡು ಮತ್ತು ರೈತಾಪಿ ಜನರ ಜಮೀನು ನಾಶ ಮಾಡಿ, 12 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಜನರ ತೆರಿಗೆ ಹಣ ಪೋಲು ಮಾಡುವ ಈ ಯೋಜನೆ ಬಗ್ಗೆ ನಮ್ಮ ಸ್ಪಷ್ಟ ವಿರೋಧವಿದೆ. ಯಾಕೆಂದರೆ, ಜೀವ ನದಿಯನ್ನು ಬತ್ತಿಸಿ ಬೆಂಗಳೂರಿಗೆ ನೀರು ತರುವುದು ವೈಜ್ಞಾನಿಕವಾಗಿ ಮಾತ್ರವಲ್ಲದ, ವಿವೇಚನೆಯ ದೃಷ್ಟಿಯಿಂದಲೂ ಒಪ್ಪುವಂತಹ ಚಿಂತನೆಯಲ್ಲ".