ಕರ್ನಾಟಕ

karnataka

ETV Bharat / state

ಮುಖ್ಯಮಂತ್ರಿಗಳ ರಾಜೀನಾಮೆ, ರಾಜ್ಯಸಭೆ ಸದಸ್ಯರ ವಿರುದ್ಧ ಕ್ರಮಕ್ಕೆ ಪ್ರತಿಪಕ್ಷಗಳ ಪಟ್ಟು - ಪಾಕಿಸ್ತಾನ ಪರ ಘೋಷಣೆ ಆರೋಪ

ಪಾಕ್ ಪರ ಘೋಷಣೆ ಆರೋಪ ಪ್ರಕರಣ ವಿಧಾನಸಭೆಯಲ್ಲಿ ಇಂದು ಪ್ರತಿಧ್ವನಿಸಿದ್ದು, ಸಿಎಂ ರಾಜೀನಾಮೆ ಹಾಗೂ ರಾಜ್ಯಸಭೆ ಸದಸ್ಯರ ವಿರುದ್ಧ ಕ್ರಮಕ್ಕೆ ಪ್ರತಿಪಕ್ಷ ಸದಸ್ಯರು ಪಟ್ಟು ಹಿಡಿದು ಧರಣಿ ನಡೆಸಿದರು.

Assembly
ವಿಧಾನಸಭೆ

By ETV Bharat Karnataka Team

Published : Feb 28, 2024, 10:41 PM IST

ಬೆಂಗಳೂರು: ಪಾಕಿಸ್ತಾನ ಪರ ಘೋಷಣೆ ವಿವಾದ ವಿಧಾನಸಭೆಯಲ್ಲಿ ಇಂದು ಪ್ರತಿಧ್ವನಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ರಾಜೀನಾಮೆ ಹಾಗೂ ರಾಜ್ಯಸಭೆ ಸದಸ್ಯರ ವಿರುದ್ಧ ಕ್ರಮಕ್ಕೆ ಪ್ರತಿಪಕ್ಷಗಳು ಪಟ್ಟು ಹಿಡಿದು ಧರಣಿ ನಡೆಸಿದ್ದು, ಕಲಾಪವನ್ನು ನಾಳೆಗೆ ಮುಂದೂಡುವಂತಾಯಿತು.

ಇಂದು ಸದನ ಸೇರುತ್ತಿದ್ದಂತೆ ಬಿಜೆಪಿ ಸದಸ್ಯರು ಭಾರತ್ ಮಾತಾಕೀ ಜಿಂದಾಬಾದ್ ಎಂಬ ಘೋಷಣೆ ಕೂಗಿದರು. ಪ್ರತಿಪಕ್ಷ ನಾಯಕ ಆರ್.ಅಶೋಕ್, ವಿಷಯ ಪ್ರಸ್ತಾಪಿಸುತ್ತಿದ್ದಂತೆ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿ ಸಭಾಧ್ಯಕ್ಷರು ಸದನವನ್ನು ಹತ್ತು ನಿಮಿಷ ಕಾಲ ಮುಂದೂಡಿ, ತಮ್ಮ ಕೊಠಡಿಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರ ಸಂಧಾನ ಸಭೆ ನಡೆಸಿ, ಈ ಕುರಿತ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದರು.

ಇದಕ್ಕೆ ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರು ಒಪ್ಪಿಕೊಂಡರು. ಮತ್ತೆ ಸದನ ಸಮಾವೇಶಗೊಂಡಾಗ ಈ ಪ್ರಕರಣದ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ನೀಡಿದರು. ಸಭಾಧ್ಯಕ್ಷರು ಚರ್ಚೆಗೆ ಅವಕಾಶ ಕೊಡುತ್ತಿದ್ದಂತೆಯೇ ಆಡಳಿತ ಮತ್ತು ವಿಪಕ್ಷ ನಾಯಕರು ಚರ್ಚೆಯಲ್ಲಿ ಪಾಲ್ಗೊಂಡು, ಘೋಷಣೆ ಕೂಗಿರುವುದನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಈ ಚರ್ಚೆಯ ಸಂದರ್ಭದಲ್ಲಿ ಹಲವು ಬಾರಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪ, ಮಾತಿನ ಚಕಮಕಿ ನಡೆಯಿತು.

ಗೃಹ ಸಚಿವರ ಉತ್ತರದ ನಂತರ ಮಾತನಾಡಿದ ಪ್ರತಿಪಕ್ಷದ ನಾಯಕ ಆರ್. ಅಶೋಕ್, ಈ ಘಟನೆ ನಡೆದ ಸಂದರ್ಭದಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿರುವ ಸೈಯದ್ ನಾಸೀರ್ ಹುಸೇನ್ ಅವರು ಒಂದು ಮಾತನಾಡಲಿಲ್ಲ. ಅವರು ಆಗಲೇ ಈ ಘಟನೆಯನ್ನು ಖಂಡಿಸಿದ್ದರೆ ಇಷ್ಟೆಲ್ಲಾ ಚರ್ಚೆ ಮಾಡುವ ಅಗತ್ಯವೇ ಇರಲಿಲ್ಲ. 'ಮೌನಂ ಸಮ್ಮತಿ ಲಕ್ಷಣಂ' ಎಂಬಂತೆ ನಾಸೀರ್ ಹುಸೇನ್ ಘೋಷಣೆ ಕೂಗಿದರೂ ಮೌನವಾಗಿದ್ದರು. ಇಂಥಹವರನ್ನು ಟಿಕೆಟ್ ಕೊಟ್ಟು ರಾಜ್ಯಸಭೆಗೆ ಕಳುಹಿಸಿದ್ದೀರಿ ಎಂದು ಹೇಳಿ, ಪತ್ರಕರ್ತರ ಮೇಲೂ ದೌರ್ಜನ್ಯ ಎಸಗಿ ಗೆಟ್‌ಔಟ್ ಎಂದಿದ್ದಾರೆ ಎಂದು ದೂರಿದರು.

ಈ ಘಟನೆಗೆ ಸಂಬಂಧಿಸಿದಂತೆ ವಿಡಿಯೋ ತುಣುಕುಗಳು ಇದ್ದರೂ ನೀವು ಇನ್ನೂ ಎಫ್‌ಎಸ್‌ಎಲ್ ವರದಿ ಬರಲಿ ಎಂದು ಹೇಳುತ್ತಿರುವುದು ಸರಿಯಲ್ಲ. ಕೂಡಲೇ ಕ್ರಮ ಕೈಗೊಳ್ಳಬೇಕು. ವಿಡಿಯೋ ಸಾಕ್ಷಿಗಳಿದ್ದರೂ ಘೋಷಣೆ ಕೂಗಿದವರನ್ನು ಬಂಧಿಸದೆ ಇರಲು ಕಾರಣವೇನು? ಎಂದು ಪ್ರಶ್ನಿಸಿ, ಸರ್ಕಾರದ ಉತ್ತರ ತಮಗೆ ತೃಪ್ತಿ ತಂದಿಲ್ಲ. ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಪಕ್ಷ ನಾಯಕ ಆರ್. ಅಶೋಕ್ ತಮ್ಮ ಸದಸ್ಯರ ಜೊತೆ ಸದನದ ಬಾವಿಗೆ ಆಗಮಿಸಿ, ಧರಣಿ ಆರಂಭಿಸಿ ಘೋಷಣೆಗಳನ್ನು ಕೂಗಲು ಮುಂದಾದರು.

ಕಲಾಪವನ್ನು ನಾಳೆಗೆ ಮುಂದೂಡಿದ ಸ್ಪೀಕರ್:ಆಗ ಸಭಾಧ್ಯಕ್ಷರು ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು. ಬಳಿಕ ಸದನ ಮತ್ತೆ ಸಮಾವೇಶಗೊಂಡಾಗ ಬಿಜೆಪಿ ಸದಸ್ಯರು ಧರಣಿ ಮುಂದುವರೆಸಿ, ಸರ್ಕಾರವನ್ನು ರಾಜೀನಾಮೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದ್ದರಿಂದ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣಗೊಂಡಿತು. ಹೀಗಾಗಿ ಸ್ಪೀಕರ್ ಕಲಾಪವನ್ನು ನಾಳೆಗೆ ಮುಂದೂಡಿದರು.

ಇದನ್ನೂ ಓದಿ:ಪಾಕ್​ ಪರ ಘೋಷಣೆ ಕೂಗಿ ಅವಮಾನಿಸಿದ್ದರೆ ಕಠಿಣ ಕ್ರಮ: ಗೃಹ ಸಚಿವ ಪರಮೇಶ್ವರ್

ABOUT THE AUTHOR

...view details