ಬೆಂಗಳೂರು :ಈ ಬಾರಿಯ ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ಅನ್ಯಾಯಗಳ ವಿರುದ್ಧ ತೀವ್ರ ಹೋರಾಟ ಮಾಡಲಾಗುವುದು. ಎಲ್ಲ ಸಮಸ್ಯೆಗಳ ಬಗ್ಗೆ ಸದನದಲ್ಲಿ ಪ್ರಶ್ನಿಸಲಾಗುವುದು ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದಿಂದ ಈ ಬಾರಿ ಎರಡು ವಾರ ಮಾತ್ರ ಅಧಿವೇಶನ ನಡೆಸಲಾಗುತ್ತಿದೆ. ಇನ್ನೂ ಹೆಚ್ಚು ದಿನ ಅಧಿವೇಶನ ನಡೆಸಲು ಕೇಳಲಾಗುವುದು. ವಕ್ಫ್ ಮಂಡಳಿಯಿಂದ ಆಗುತ್ತಿರುವ ಭೂ ಕಬಳಿಕೆ ಜ್ವಲಂತ ಸಮಸ್ಯೆಯಾಗಿದೆ. ಬಡವರ ರೇಷನ್ ಕಾರ್ಡ್ ರದ್ದು ಮಾಡಿ ಗ್ಯಾರಂಟಿಗಾಗಿ ಹಣ ಉಳಿಸಲಾಗುತ್ತಿದೆ. ಈ ಸಮಸ್ಯೆಯ ವಿರುದ್ಧ ಅಧಿವೇಶನದಲ್ಲಿ ಹೋರಾಟ ಮಾಡಲಾಗುವುದು. ಅಬಕಾರಿ ಇಲಾಖೆಯ ಹಗರಣ, ಬೆಳೆನಾಶಕ್ಕೆ ಪರಿಹಾರ ಮೊದಲಾದ ಸಮಸ್ಯೆಯ ವಿರುದ್ಧವೂ ಹೋರಾಟ ಮಾಡಲಾಗುವುದು ಎಂದರು.
ಅನೇಕ ಶಾಸಕರಿಗೆ ಅನುದಾನ ಕಡಿತ : ಇದೊಂದು ರೀತಿ ಗುರುವಾರದ ಸರ್ಕಾರ. ಕೇವಲ ಒಂದು ದಿನ ಮಾತ್ರ ಇಲ್ಲಿ ಸಚಿವರು, ಅಧಿಕಾರಿಗಳು ಸಭೆ ಮಾಡುತ್ತಾರೆ. ಉತ್ತರ ಕರ್ನಾಟಕದ ಜಿಲ್ಲೆಗಳ ಸಮಸ್ಯೆ ಬಗ್ಗೆ ಚರ್ಚಿಸಲು ನಾನು ಸಭೆ ನಡೆಸಲಿದ್ದೇನೆ. ಈ ಹಿಂದೆ ಕಲ್ಯಾಣ ಕರ್ನಾಟಕ ಕುರಿತು ಸರ್ಕಾರದಿಂದ ಸಭೆ ನಡೆದಿದೆ. ಆ ಬಳಿಕ ಯಾವುದೇ ಸುದ್ದಿ ಇಲ್ಲ. ಬ್ರ್ಯಾಂಡ್ ಬೆಂಗಳೂರು ಎಂದು ಹೇಳಿ, ಮಳೆ ಬಂದು ಮುಳುಗುವ ಬೆಂಗಳೂರು ಸೃಷ್ಟಿಯಾಗಿದೆ. ಮಳೆಯಿಂದಾಗಿ ರಸ್ತೆ ಗುಂಡಿ ಉಂಟಾಗಿ ವಾಹನ ಚಾಲಕರಿಗೆ ಬೆನ್ನು ನೋವು ಉಂಟಾಗಿದೆ. ಜಯನಗರ ಶಾಸಕರು ಸೇರಿದಂತೆ ಅನೇಕ ಶಾಸಕರಿಗೆ ಅನುದಾನ ಕಡಿತವಾಗಿದೆ. ಹೀಗೆ ಮೊದಲಾದ ವಿಷಯಗಳ ಬಗ್ಗೆ ಪ್ರಶ್ನಿಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಅಧಿಕಾರಿಗಳಿಗೆ ನೇಣಿನ ಭಾಗ್ಯ ನೀಡಲಾಗಿದೆ. ಅಧಿಕಾರಿಗಳು ಒಂದೋ ವರ್ಗಾವಣೆಯಾಗಬೇಕು ಅಥವಾ ನೇಣು ಹಾಕಿಕೊಳ್ಳಬೇಕು ಎಂಬ ಸ್ಥಿತಿ ಇದೆ. ರೌಡಿಗಳನ್ನು ಜೈಲಿಗೆ ಹಾಕುವ ಬದಲು ಪ್ರಕರಣ ಹಿಂಪಡೆಯಲಾಗಿದೆ. ಇದರ ವಿರುದ್ಧವೂ ಮಾತನಾಡಲಾಗುವುದು ಎಂದರು.