ಪ್ರತಿಪಕ್ಷ ನಾಯಕ ಆರ್. ಅಶೋಕ್ (ETV Bharat) ಬೆಂಗಳೂರು : ಲೋಕಸಭೆ ಚುನಾವಣೆ ನಂತರ ಏನು ಬೇಕಾದರೂ ನಡೆಯಬಹುದು. ಮತ್ತೊಮ್ಮೆ ಮೋದಿ ಪ್ರಧಾನಿ ಆದ ಮೇಲೆ ಕಾಂಗ್ರೆಸ್ನವರು ಗಂಟು ಮೂಟೆ ಕಟ್ಟೋದು ಒಂದೇ ಬಾಕಿ ಉಳಿಯಲಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಪರೋಕ್ಷವಾಗಿ ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಜಾಲಹಳ್ಳಿ ನಿವಾಸದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಆಪರೇಷನ್ ಕಮಲದಲ್ಲಿ ನಮ್ಮ ಇಬ್ಬರು ಶಾಸಕರನ್ನ ಮುಟ್ಟಿ ನೋಡಲಿ. ಆಗ ನಾವು ಮುಟ್ಟಿ ನೋಡಿಕೊಳ್ಳುವಂತೆ ತಿರುಗಿ ಕೊಡುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಹಿಂದೆ ಮೈತ್ರಿ ಸರ್ಕಾರ ಇದ್ದಾಗ 17 ಜನ ಕಾಂಗ್ರೆಸ್ ಜೆಡಿಎಸ್ ಬಿಟ್ಟು ರಾಜೀನಾಮೆ ಕೊಟ್ಟಿದ್ದರಿಂದ ಸರ್ಕಾರವೇ ಪತನವಾಯಿತು. ಇವರು ಆಗ ಏಕೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗಿ ಕೊಡಲಿಲ್ಲ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಶಾಸಕರೇ ಯಾಕಾದರೂ ಕಾಂಗ್ರೆಸ್ ಅನ್ನು ಗೆಲ್ಲಿಸಿದೆವು ಅಂತಾ ಬೇಸರದಲ್ಲಿದ್ದಾರೆ. ಸರ್ಕಾರ ಬೀಳಿಸಲು ಕಾಂಗ್ರೆಸ್ ನವರೇ ಸಾಕು. ಬೇರೆ ಪಕ್ಷದವರು ಬೇಕಿಲ್ಲ. ಐದು ವರ್ಷ ಆಡಳಿತ ನೀಡಬೇಕು ಎಂದು ಸಿದ್ದರಾಮಯ್ಯ ಹಗಲುಗನಸು ಕಾಣುತ್ತಿದ್ದಾರೆ. ಮತ್ತೊಮ್ಮೆ ಮೋದಿ ಪ್ರಧಾನಿ ಆದ ಮೇಲೆ ಕಾಂಗ್ರೆಸ್ನವರು ಗಂಟು ಮೂಟೆ ಕಟ್ಟೋದು ಒಂದೇ ಬಾಕಿ ಉಳಿದಿದೆ ಎಂದರು.
ಪೆನ್ಡ್ರೈವ್ ಪ್ರಕರಣದಲ್ಲಿ ಡ್ರೈವರ್ ಕಾರ್ತಿಕಗೌಡ ಜಾಮೀನು ನಿರಾಕರಣೆಯಾಗಿದ್ದರೂ ಏಕೆ ಇನ್ನೂ ಅರೆಸ್ಟ್ ಮಾಡಿಲ್ಲ?. ಅವರಿಗೆ ಯಾರ್ಯಾರು ಬೇಕು. ಯಾರ್ಯಾರ ಮೇಲೆ ಆರೋಪ ಹೊರಿಸಬೇಕು. ಟ್ರಾನ್ಸ್ಫರ್ ಮಾಡಬೇಕೋ ಅದಕ್ಕೆ ಎಸ್ಐಟಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಎಸ್ಐಟಿಯನ್ನು ಈ ಸರ್ಕಾರದಿಂದ ದುರ್ಬಳಕೆ ಮಾಡಲಾಗುತ್ತಿದೆ. ಈಗಾಗಲೇ ತಿಮಿಂಗಿಲ ಇದೆ ಅಂತಾ ಕುಮಾರಸ್ವಾಮಿ ಹೇಳಿದ್ದಾರೆ. ತಿಮಿಂಗಿಲ ಬಡಿದು ತಿಂದುಕೊಳ್ಳಲಿ ಅಂತಾ ಡಿ. ಕೆ ಶಿವಕುಮಾರ್ ಹೇಳಿದ್ದಾರೆ. ಬಡಿದು ತಿನ್ನುವುದನ್ನು ದೇವೇಗೌಡರ ಕುಟುಂಬ ತೀರ್ಮಾನ ಮಾಡಬೇಕು. ದೇವೇಗೌಡರಿಗೆ ಈ ವಯಸ್ಸಿನಲ್ಲಿ ನೋವು ಕೊಡಬೇಕಿತ್ತಾ ಅಂತಾ ಒಕ್ಕಲಿಗ ಸಮುದಾಯದವರು ಮಾತಾಡುತ್ತಿದ್ದಾರೆ. ಎಸ್ಐಟಿ ತನ್ನ ಪಾವಿತ್ರ್ಯತೆಯನ್ನು ಕಳೆದುಕೊಂಡಿದೆ ಎಂದರು.
ಮಾಜಿ ಶಾಸಕ ಪ್ರೀತಂಗೌಡ ಆಪ್ತರ ಮೊಬೈಲ್ನಲ್ಲಿ ವಿಡಿಯೋ ಇತ್ತು ಎಂದು ಬಂಧಿಸಿದ್ದೀರಲ್ಲ. ಹಾಗಾದರೆ ಕಾಂಗ್ರೆಸ್ ಕಾರ್ಯಕರ್ತರ ಮೊಬೈಲ್ಗಳಲ್ಲಿ ವಿಡಿಯೋ ಇಲ್ವಾ?. ಅವರಲ್ಲಿ ಎಷ್ಟು ಜನರನ್ನು ಬಂಧಿಸಿದ್ದೀರಾ?. ಇದು ಕಾಂಗ್ರೆಸ್ನವರ ಮಾಸ್ಟರ್ ಪ್ಲಾನ್. ಕಾಂಗ್ರೆಸ್ ಪಕ್ಷದ ಉಸ್ತುವಾರಿ ಸುರ್ಜೇವಾಲಾ ಮಟ್ಟದಲ್ಲಿ ಪ್ರಕರಣದ ಮಾನಿಟರ್ ಆಗುತ್ತಿದೆ ಎಂದು ಆರ್. ಅಶೋಕ್ ಆರೋಪಿಸಿದರು.
ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ ಹೀಗಾಗಬಾರದಿತ್ತು. ಈ ಬಗ್ಗೆ ಅನುಕಂಪ ಇದೆ ಎಂಬ ಡಿಸಿಎಂ ಡಿ. ಕೆ ಶಿವಕುಮಾರ್ ಅವರ ಹೇಳಿಕೆ ನೋಡಿದ್ದೇನೆ. ಆದರೆ, ಅದು ಪ್ರಾಮಾಣಿಕತೆಯಿಂದ ಹೇಳಿದ ಮಾತಲ್ಲ. ಕಿಂಡಲ್ ಮಾಡಲು ಹೇಳಿದ್ದಾರೆ. ರೇವಣ್ಣ ಜೈಲಿಗೆ ಹೋದಾಗ ಹೆಚ್ಚು ಖುಷಿ ಪಟ್ಟವರು ಕಾಂಗ್ರೆಸ್ನವರೇ. ತಿಮಿಂಗಿಲ ಸಮುದ್ರದಲ್ಲಿ ಇದ್ದರೂ ಆಮ್ಲಜನಕಕ್ಕಾಗಿ ಒಂದು ಸಲ ಮೇಲೆ ಬರಲೇಬೇಕಲ್ವಾ? ಆಗ ತಿಮಿಂಗಿಲ ಕಾಂಗ್ರೆಸ್ ಅಥವಾ ಜೆಡಿಎಸ್ ಅಂತಾ ಗೊತ್ತಾಗುತ್ತದೆ. ಪ್ರಜ್ವಲ್ ರೇವಣ್ಣ ಇನ್ನೂ ಬಂಧನ ಆಗಿಲ್ಲ. ಹಾಗಾಗಿ ಈ ಪ್ರಕರಣವನ್ನು ಸಿಬಿಐಗೆ ಕೊಡಲಿ ಎಂದು ಅಶೋಕ್ ಒತ್ತಾಯಿಸಿದರು.
ಇದನ್ನೂ ಓದಿ :ರೇವಣ್ಣ ಜೈಲಿಗೆ ಕಳುಹಿಸಲೇಬೇಕು ಎಂದು ಕಾಂಗ್ರೆಸ್ ಕುತಂತ್ರ ಮಾಡಿದೆ; ಪಿತೂರಿ, ಸಂಚು ಸ್ಪಷ್ಟವಾಗಿದೆ- ಆರ್ ಅಶೋಕ್ - R Ashok