ಮೈಸೂರು :ಮುಡಾ ಹಗರಣದ ತನಿಖೆಯನ್ನ ಸಿಬಿಐಗೆ ವಹಿಸಬೇಕು ಹಾಗೂ ಹಗರಣದಲ್ಲಿ ಭಾಗಿಯಾಗಿರುವ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕೆಂದು ಬಿಜೆಪಿ ಮೈಸೂರಿನಲ್ಲಿ ನಡೆಸುತ್ತಿದ್ದ ಪ್ರತಿಭಟನೆಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ಅಶ್ವತ್ಥ್ ನಾರಾಯಣ್ ಪೊಲೀಸರ ಕಣ್ಣ್ ತಪ್ಪಿಸಲು ಬೆಂಗಳೂರಿನಿಂದ ಗೂಡ್ಸ್ ಆಟೋದಲ್ಲಿ ಬಂದು ಪ್ರತಿಭಟನೆಯಲ್ಲಿ ಭಾಗವಹಿಸಲು ಮುಂದಾದಾಗ ಪೊಲೀಸರು ವಶಕ್ಕೆ ಪಡೆದರು.
ಇಂದು ಮೈಸೂರಿನಲ್ಲಿ ಮುಡಾ ಬಹುಕೋಟಿ ಹಗರಣವನ್ನ ಸಿಬಿಐ ತನಿಖೆಗೆ ವಹಿಸಬೇಕು ಹಾಗೂ ಸಿಎಂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಮುಡಾ ಕಡೆ ಹೊರಟು ಮುಡಾಗೆ ಮುತ್ತಿಗೆ ಹಾಕಲು ಯತ್ನಿಸಿದ ಸಂದರ್ಭದಲ್ಲಿ ಮೈಸೂರು ಕೊಡಗು ಸಂಸದ ಯದುವೀರ್ ಒಡೆಯರ್, ಹಾಗೂ ಬಿಜೆಪಿ ಶಾಸಕ ಶ್ರೀವತ್ಸ ಅವರನ್ನು ಸೇರಿದಂತೆ ಸ್ಥಳೀಯ ನಾಯಕರು ಹಾಗೂ ಪ್ರಮುಖ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದುಕೊಂಡರು.
ಬೆಂಗಳೂರಿನಿಂದ ಗೂಡ್ಸ್ ಆಟೋದಲ್ಲಿ ಬಂದ ಆರ್. ಅಶೋಕ್ : ಮುಡಾ ಹಗರಣವನ್ನ ಖಂಡಿಸಿ ಮೈಸೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಹಲವು ನಾಯಕರನ್ನ ಬೆಂಗಳೂರಿನಲ್ಲೇ ಬೆಳಗ್ಗೆ ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ್ದಾರೆ.
ಅನಂತರ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ಮಾಜಿಮಂತ್ರಿ ಹಾಗೂ ಶಾಸಕ ಅಶ್ವತ್ಥ್ ನಾರಾಯಣ್ ಪೊಲೀಸರು ಬಂಧಿಸಬಹುದು ಎಂಬ ಹಿನ್ನೆಲೆ ಬೆಂಗಳೂರಿನಿಂದ ಗೂಡ್ಸ್ ಆಟೋದಲ್ಲಿ ಮೈಸೂರಿಗೆ ಆಗಮಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಅವರನ್ನು ವಶಕ್ಕೆ ಪಡೆದರು.