ಪ್ರತಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿದರು. ಬೆಂಗಳೂರು:ಡಿಸಿಎಂ ಡಿ ಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ನಾಯಕರೇ ಅಲ್ಲ, ಕನಕಪುರಕ್ಕಷ್ಟೇ ಅವರು ಲೀಡರ್, ಕನಕಪುರದ ಹೊರಗೆ ಅವರು ನಾಯಕರೇ ಅಲ್ಲ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದರು.
ಮಲ್ಲೇಶ್ವರದ ರಾಜ್ಯ ಬಿಜೆಪಿ ಚುನಾವಣೆ ಮಾಧ್ಯಮ ಕೇಂದ್ರದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಡಿಸಿಎಂ ಡಿ.ಕೆ ಶಿವಕುಮಾರ್ ಯಾವಾಗ ಒಕ್ಕಲಿಗ ಲೀಡರ್ ಆದ್ರು? ಡಿ ಕೆ ಶಿವಕುಮಾರ್ ಒಕ್ಕಲಿಗರಿಗೆ ಏನು ಮಾಡಿದ್ದಾರೆ.? ಜಾತಿ ಜನಗಣತಿ ವರದಿಯನ್ನು ಸಿದ್ದರಾಮಯ್ಯ ಸರ್ಕಾರ ತೆಗೆದುಕೊಂಡಿದೆ, ಆವಾಗ್ಗೆ ಡಿ ಕೆ ಶಿವಕುಮಾರ್ ಸುಮ್ಮನಾಗಿದ್ದರು. ಇಡೀ ಸಮುದಾಯವೇ ಜಾತಿ ಗಣತಿ ವಿರೋಧಿಸಿ ನಿಂತರೂ ಸರ್ಕಾರದ ಭಾಗವಾಗಿದ್ದ ಡಿ ಕೆ ಶಿವಕುಮಾರ್ ರಿಸೈನ್ ಮಾಡಿದರಾ? ಒಕ್ಕಲಿಗ ಸಮುದಾಯಕ್ಕಾಗಿ ರಾಜೀನಾಮೆ ನೀಡಿ ಸಂಪುಟದಿಂದ ಹೊರಬಂದು ಪ್ರತಿಭಟಿಸಬೇಕಿತ್ತು ಎಂದುರು.
ಒಕ್ಕಲಿಗ ಲೀಡರ್ಗಳು ಹೆಚ್ಚಾಗಿ ಇರೋದು ಜೆಡಿಎಸ್- ಬಿಜೆಪಿಯಲ್ಲಿ ಮಾತ್ರ. ನಮ್ಮಲ್ಲಿ ಒಕ್ಕಲಿಗ ಲೀಡರ್ಗಳಿಗೆ ಸಾಕಷ್ಟು ಸ್ಥಾನಮಾನಗಳು ಸಿಕ್ಕಿವೆ. ಇವರು ನಿನ್ನೆ ಮೊನ್ನೆ ಡಿಸಿಎಂ ಆದವರು. ಡಿ ಕೆ ಶಿವಕುಮಾರ್ ಅವರೇ ನಾನು 10 ವರ್ಷದ ಹಿಂದೆನೇ ಡಿಸಿಎಂ ಆಗಿದ್ದೆ ಎಂದು ಅಶೋಕ್ ಅವರು ಕಾಲೆಳೆದರು.
ಬಿಜೆಪಿಯಲ್ಲಿ ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದರು. ನಾನು, ಅಶ್ವತ್ಥನಾರಾಯಣ ಡಿಸಿಎಂ ಆಗಿದ್ದೆವು. ಜೆಡಿಎಸ್ನಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದರು. ದೇವೇಗೌಡರು ಪ್ರಧಾನಿಯಾಗಿದ್ದರು. ನಿಮ್ಮಲ್ಲಿ ನೀವು ಈಗಷ್ಟೇ ಡಿಸಿಎಂ ಆಗಿದ್ದೀರಷ್ಟೆ, ಒಕ್ಕಲಿಗ ಸಮುದಾಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ಸಿಕ್ಕಿರುವುದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಲ್ಲೇ ಹೊರತು ಕಾಂಗ್ರೆಸ್ ನಲ್ಲಿ ಅಲ್ಲ ಎಂದು ತಿರುಗೇಟು ನೀಡಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವೆ ವೈಯಕ್ತಿಕ ಆರೋಪ ಪ್ರತಿ ಆರೋಪಗಳು ನಡೀತಿವೆ. ಇದರ ಬಗ್ಗೆ ನಾನು ಮಾತಾಡಲ್ಲ. ಆದರೆ ಕುಮಾರಸ್ವಾಮಿ ಈಗ ನಮ್ಮ ಪಾರ್ಟ್ನರ್, ಎನ್ಡಿಎ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಹಾಗಾಗಿ ನಾವು ಕುಮಾರಸ್ವಾಮಿ ಪರ ನಿಲ್ಲುತ್ತೇವೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳಿಂದಾಗಿ ಮಹಿಳೆಯರು ದಾರಿ ತಪ್ಪಿದ್ದಾರೆಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅಶೋಕ್, ಕುಮಾರಸ್ವಾಮಿ ಹೇಳಿಕೆ ಕುರಿತು ಅಪಪ್ರಚಾರ ಮಾಡಲಾಗುತ್ತಿದೆ, ಕುಮಾರಸ್ವಾಮಿಗೆ ಮಹಿಳೆಯರ ಬಗ್ಗೆ ಅಪಾರ ಗೌರವವಿದೆ, ಚುನಾವಣೆ ಇದೆ ಅಂತ ಅಪಪ್ರಚಾರ ಮಾಡುತ್ತಿದ್ದಾರೆ. ಏನೇ ಮಾಡಿದರೂ ಮಂಡ್ಯದಲ್ಲಿ ದೊಡ್ಡ ಅಂತರದಲ್ಲಿ ಕುಮಾರಸ್ವಾಮಿ ಗೆಲ್ತಾರೆ. ದೇಶಕ್ಕೆ ಮೋದಿ, ಮಂಡ್ಯಕ್ಕೆ ಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರದಲ್ಲಿ ಹೃದಯವಂತ ಡಾಕ್ಟರ್ ಗೆಲ್ತಾರೆ, ಹೃದಯ ಇಲ್ಲದ ಬಂಡೆ ಸೋಲುತ್ತೆ. ಹೃದಯವಂತ ಡಾಕ್ಟರ್ ಬೇಕಾ? ಬಂಡೆ ಬೇಕಾ? ಎಂದು ಪ್ರಶ್ನಿಸಿದರು.
ಇದನ್ನೂಓದಿ:ಕುಮಾರಸ್ವಾಮಿ ಎಂಪಿ ಆಗೋದು ಅನುಮಾನ: ಡಿಸಿಎಂ ಡಿ.ಕೆ.ಶಿವಕುಮಾರ್ - D K Shivakumar