ಬೆಂಗಳೂರು: ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಇಂದು ಸಂಜೆ 6 ಗಂಟೆಯಿಂದ ಏ.26ರ ಸಂಜೆ 6 ಗಂಟೆಯವರೆಗಿನ 48 ತಾಸುಗಳ ಶೂನ್ಯ ಅವಧಿ ಆರಂಭವಾಗಿದೆ. ಬಹಿರಂಗ ಪ್ರಚಾರಗಳೆಲ್ಲವೂ ಮುಗಿದಿದ್ದು, ಅಭ್ಯರ್ಥಿಗಳ ಮನೆ ಮನೆ ಪ್ರಚಾರ ಶುರುವಾಗಿದೆ.
ಏ.26ರಂದು ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ (ಎಸ್‌ಸಿ), ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ (ಎಸ್‌ಸಿ), ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರ (ಎಸ್‌ಸಿ) ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಶೂನ್ಯ ಅವಧಿ-ನಿರ್ಬಂಧಗಳೇನು?:ಸೆಕ್ಷನ್ 144ರಂತೆ ಕಾನೂನುಬಾಹಿರ ಸಭೆಗಳನ್ನು ನಿಷೇಧಿಸಲಾಗಿದೆ. ಮತದಾನ ಮುಕ್ತಾಯಕ್ಕೆ ನಿಗದಿಪಡಿಸಿದ ಗಂಟೆಯೊಂದಿಗೆ ಕೊನೆಗೊಳ್ಳುವ ಮುಂಚಿನ 48 ಗಂಟೆಗಳ ಅವಧಿಯಲ್ಲಿ ಸಾರ್ವಜನಿಕ ಸಭೆಗಳನ್ನು ನಿಷೇಧಿಸಲಾಗಿದೆ. ಇದು ಸಂಪೂರ್ಣ ಕ್ಷೇತ್ರಕ್ಕೆ ಅನ್ವಯಿಸುತ್ತದೆ. ಮದ್ಯಪಾನ ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ರಾಜಕೀಯ ಪ್ರಚಾರಕ್ಕಾಗಿ ಮತದಾನದ ಮುಕ್ತಾಯದ ಸಮಯದೊಂದಿಗೆ ಕೊನೆಗೊಳ್ಳುವ ಮುಂಚಿನ 48 ಗಂಟೆಗಳ ಅವಧಿಯಲ್ಲಿ ಯಾವುದೇ ರೀತಿಯ ಧ್ವನಿವರ್ಧಕ ಬಳಸುವುದನ್ನು ನಿರ್ಬಂಧಿಸಲಾಗಿದೆ.