ಕರ್ನಾಟಕ

karnataka

ETV Bharat / state

'ದರ್ಶನ್ ಎ1 ಮಾಡುವುದು ತನಿಖಾಧಿಕಾರಿಗಳಿಗೆ ಬಿಟ್ಟಿದ್ದು; ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಒದಗಿಸುತ್ತೇವೆ' - Renukaswamy Murder Case - RENUKASWAMY MURDER CASE

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ರನ್ನು ಎ1 ಮಾಡ್ತಾರೋ ಎ2 ಮಾಡ್ತಾರೋ ತನಿಖಾಧಿಕಾರಿಗಳಿಗೆ ಬಿಟ್ಟಿದ್ದು. ಆದರೆ, ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಒದಗಿಸುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಭರವಸೆ ನೀಡಿದರು.

RENUKASWAMY MURDER CASE
ಗೃಹ ಸಚಿವ ಜಿ.ಪರಮೇಶ್ವರ್ (ETV Bharat)

By ETV Bharat Karnataka Team

Published : Sep 3, 2024, 1:11 PM IST

ಗೃಹ ಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯೆ (ETV Bharat)

ಬೆಂಗಳೂರು: ದರ್ಶನ್​​​​​ರನ್ನು ಎ1 ಮಾಡ್ತಾರೋ ಎ2 ಮಾಡ್ತಾರೋ ತನಿಖಾಧಿಕಾರಿಗಳಿಗೆ ಬಿಟ್ಟಿದ್ದು. ಆದರೆ, ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.

ಸದಾಶಿವನಗರ ನಿವಾಸದ ಬಳಿ ಇಂದು ಮಾತನಾಡಿದ ಅವರು, ದರ್ಶನ್ ಮತ್ತು ಆರೋಪಿಗಳ ಚಾರ್ಜ್‌ಶೀಟ್ ಸಲ್ಲಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸ್ತಾರೆ. 90 ದಿನಗಳ ಒಳಗೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಬೇಕು, ಮಾಡ್ತಾರೆ. ಈ ಪ್ರಕರಣದಲ್ಲಿ ರೇಣುಕಾಸ್ವಾಮಿ ಕುಟುಂಬದವರು ನ್ಯಾಯದ ನಿರೀಕ್ಷೆ ಮಾಡಬಹುದು. ಅವರಿಗೆ ನ್ಯಾಯ ಕೊಡಿಸುವ ವಿಚಾರದಲ್ಲಿ ಕೋರ್ಟ್​ನಲ್ಲಿ ಹೋರಾಟ ನಡೆಯುತ್ತದೆ ಎಂದರು.

ರಾಜ್ಯಪಾಲರಿಂದ ಕೆಐಎಡಿಬಿ ಸಿ.ಎ ಸೈಟು ಪ್ರಕರಣ ಸಂಬಂಧ ವಿವರಣೆ ಕೋರಿ ಪತ್ರ ವಿಚಾರವಾಗಿ ಮಾತನಾಡಿ, ಸಚಿವ ಎಂ.ಬಿ.ಪಾಟೀಲರು ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ. ಕಾನೂನುಬಾಹಿರ ಕೆಲಸ ಮಾಡಿಲ್ಲ, ನ್ಯಾಯಯುತವಾಗಿ ಅವರು ಅರ್ಹರಿದ್ರು, ಅದಕ್ಕೆ ಸೈಟ್ ಕೊಟ್ಟಿರೋದಾಗಿ ಹೇಳಿದ್ದಾರೆ. ಅಲ್ಲಿಗೆ ಅದು ಮುಗೀತು, ಮತ್ತೆ ಅದನ್ನು ಪದೇ ಪದೇ ಹೇಳೋದು ಬೇಡ. ಇದನ್ನು ರಾಜ್ಯಪಾಲರು ಪರಿಶೀಲನೆ ಮಾಡಲಿ. ಎಂ‌.ಬಿ‌.ಪಾಟೀಲರು ಕಾನೂನು ಪ್ರಕಾರ ಮಾಡಿದ್ದಾರೋ‌ ಇಲ್ಲವೋ ಅಂತ ಪರಿಶೀಲನೆ ಮಾಡಲಿ. ಅದರ ಬದಲು ಅನಾವಶ್ಯಕವಾಗಿ ಆಪಾದನೆ ಮಾಡೋದು ಸರಿಯಲ್ಲ. ರಾಜ್ಯಪಾಲರು ವಿವರಣೆ ಕೇಳಿದ್ದಾರೆ, ಅವರೇ ಪರಿಶೀಲನೆ ಮಾಡಲಿ. ಸಾವಿರಾರು ಜನ ದೂರು ಕೊಡ್ತಾರೆ, ಎಲ್ಲವೂ ಪರಿಶೀಲನೆ ಮಾಡಿದಾಗಲೇ ಸತ್ಯ ಗೊತ್ತಾಗೋದು.‌ ಇದರಲ್ಲಿ ರಾಜಕೀಯ ಮಾಡ್ತಿದ್ದಾರೆ ಅಂತ ನಾವು ಮೊದಲಿಂದಲೂ ಹೇಳ್ತಿದ್ದೀವಿ. ಬಿಜೆಪಿಯವರು ರಾಜಕೀಯ ಉದ್ದೇಶದಿಂದ ಇದನ್ನೆಲ್ಲ ಮಾಡ್ತಿದ್ದಾರೆ ಎಂದು ಹೇಳಿದರು.

ಕೋವಿಡ್ ಹಗರಣದ ಮಧ್ಯಂತರ ವರದಿ ಸಲ್ಲಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ನ್ಯಾ.ಕುನ್ಹಾ ಅವರ ಆಯೋಗಕ್ಕೆ ಇನ್ನೊಂದು ಆರು ತಿಂಗಳು ಕಾಲಾವಕಾಶ ಕೊಡಲಾಗಿದೆ. ಬಿಟ್‌ಕಾಯಿನ್ ಪ್ರಕರಣ, ಕೋವಿಡ್ ಪ್ರಕರಣ, ವಾಲ್ಮೀಕಿ ಪ್ರಕರಣ ಸೇರಿ ಎಲ್ಲ ಪ್ರಕರಣಗಳನ್ನೂ ರಿವೀವ್ ಮಾಡುತ್ತಿದ್ದೇವೆ. ಯಾವೆಲ್ಲ ತನಿಖೆ ಹಂತದಲ್ಲಿ ಇವೆಯೋ ಎಲ್ಲ ಪ್ರಕರಣಗಳ ರಿವ್ಯೂ ಮಾಡ್ತೇವೆ. ಇದಕ್ಕೆ ಮುಂದಿನ ದಿನಗಳಲ್ಲಿ ಒಂದು ಸಮಿತಿ ರಚನೆ ಮಾಡ್ತೇವೆ ಎಂದರು.

ಸತೀಶ್ ಜಾರಕಿಹೊಳಿ-ಪರಮೇಶ್ವರ್ ದೆಹಲಿ ವರಿಷ್ಠರ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸಿಎಂ ರೇಸ್ ಏನೂ ಇಲ್ಲ. ನಾನೇ‌ನಕ್ಕೋ ಭೇಟಿ ಮಾಡ್ತೇ‌ನೆ, ಅವರೇನಕ್ಕೋ ಭೇಟಿ ಮಾಡ್ತಾರೆ. ದೆಹಲಿಗೆ ಹೋದ್ರೆ ಹೈಕಮಾಂಡ್ ಭೇಟಿ ಮಾಡೋದು ಸಂಪ್ರದಾಯ. ಹಾಗಾಗಿ ಅವರು ಹೋಗಿ ಭೇಟಿ ಮಾಡಿರ್ತಾರೆ.‌ ಎಲ್ಲದಕ್ಕೂ ರಾಜಕೀಯ ಬಣ್ಣ ಹಾಕೋದು ಬೇಡ. ಕೆಲವೊಂದು ವಿಚಾರಗಳನ್ನು ಹೈಕಮಾಂಡ್ ಹೇಳಿರ್ತಾರೆ ನಮಗೆ ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಎಐಸಿಸಿ ಮೇಲೆ, ರಾಷ್ಟ್ರೀಯ ನಾಯಕರ ಮೇಲೆ ಏನೇನೋ ನೆಗೆಟಿವ್ ಪೋಸ್ಟಿಂಗ್ ಹಾಕ್ತಾರೆ. ಅದನ್ನೆಲ್ಲ ನಿಯಂತ್ರಣ ಮಾಡಿ ಅಂತ ನನಗೆ ಹೇಳಿದ್ದಾರೆ. ಇದನ್ನೇ ಬೇರೆ ಥರ ಹೇಳೋದು ಬೇಡ ಎಂದು ಇದೇ ವೇಳೆ ಹೇಳಿದರು.

ಎತ್ತಿನ ಹೊಳೆ ಯೋಜನೆಯ ಮೊದಲ ಹಂತಕ್ಕೆ ಚಾಲನೆ ವಿಚಾರವಾಗಿ ಮಾತನಾಡಿ, ಇದು ನಮ್ಮ‌ ಮಹತ್ವಾಕಾಂಕ್ಷೆಯ ಯೋಜನೆ. ಗೌರಿ-ಹಬ್ಬದ ಒಳ್ಳೆಯದ ದಿನ ಅಂತ ಚಾಲನೆ ಕೊಡಲಾಗ್ತಿದೆ. 1500 ಕ್ಯೂಸೆಕ್​​ ನೀರು ವಾಣಿ ವಿಲಾಸ ಸಾಗರಕ್ಕೆ ಹರಿಯಲಿದೆ. ಮುಂದಿನ‌ ಮಳೆ ಬರುವ ಹೊತ್ತಿಗೆ ತುಮಕೂರಿಗೂ ನೀರು ತರುತ್ತೇವೆ. ನಂತರ ಚಿಕ್ಕಬಳ್ಳಾಪುರ, ಕೋಲಾರಕ್ಕೆ ನೀರು ತರುತ್ತೇವೆ. ನಮಗೆ 69 ಕೆರೆ ತುಂಬಿಸಲು ಹಣ ಮಂಜೂರು ಮಾಡಲಾಗಿದೆ. ಇದರ ಕೆಲಸಗಳು ನಡೀತಿವೆ ಎಂದು ತಿಳಿಸಿದರು.

ಗೃಹ ಸಚಿವ ನಿವಾಸದ ಮುಂದೆ ಪೊಲೀಸರ ದಬ್ಬಾಳಿಕೆ:ಗೃಹ ಸಚಿವರಿಗೆ ಮನವಿ ಕೊಡಲು ಬಂದಿದ್ದ ಪಿಎಸ್ಐ ಅಭ್ಯರ್ಥಿ ಮತ್ತು ಪೊಲೀಸ್ ಕಾನ್ಸ್‌ಟೇಬಲ್ ಆಕಾಂಕ್ಷಿಗಳ ಮೇಲೆ ಪೊಲೀಸ್ ದೌರ್ಜನ್ಯ ನಡೆಸಿದ ಘಟನೆ ನಡೆದಿದೆ. ನೇಮಕಾತಿಯಲ್ಲಿ ವಯೋಮಿತಿ ಹೆಚ್ಚಳ ಕೋರಿ ಬಂದಿದ್ದ ಹತ್ತಾರು ಆಕಾಂಕ್ಷಿಗಳನ್ನು ಪೊಲೀಸರು ವಶಕ್ಕೆ ಪಡೆದರು.

ಶಾಂತಿಯುತವಾಗಿ ಗೃಹ ಸಚಿವರ ಮನೆ ಮುಂದೆ ಮನವಿ ಸಲ್ಲಿಸಲು ಪೊಲೀಸ್ ಕಾನ್ಸ್‌ಟೇಬಲ್ ಆಕಾಂಕ್ಷಿಗಳು ನಿಂತಿದ್ದರು. ಈ ವೇಳೆ ಏಕಾಏಕಿ ಪೊಲೀಸರು ಆಕಾಂಕ್ಷಿಗಳನ್ನು ಗೃಹ ಸಚಿವರ ನಿವಾಸದಿಂದ ಬಲವಂತವಾಗಿ ಕರೆದೊಯ್ದು ಪೊಲೀಸ್ ವಾಹನಕ್ಕೆ ತುಂಬಿಸಲಾಯಿತು. ಇದೇ ವೇಳೆ ಪಿಎಸ್‌ಐ ಪರೀಕ್ಷೆ ಮುಂದಕ್ಕೆ ಹಾಕುವಂತೆ ಮನವಿ ಮಾಡಲು ಬಂದ ಅಭ್ಯರ್ಥಿಯೊಬ್ಬರನ್ನು ಬಲವಂತವಾಗಿ ವಶಕ್ಕೆ ಪಡೆದರು. ಅಭ್ಯರ್ಥಿ ಕಾಂತಕುಮಾರ್ ಗೃಹ ಸಚಿವರಿಗೆ ಮನವಿ ಕೊಡಲು ಬಂದಾಗ, ಇನ್ಸ್​ಪೆಕ್ಟರ್​ ಒಬ್ಬರು ಪಿಎಸ್ಐ ಅಭ್ಯರ್ಥಿಯ ಕೊರಳಪಟ್ಟಿ ಹಿಡಿದು ಜೀಪಿನೊಳಗೆ ತಳ್ಳಿ ಕರೆದೊಯ್ದರು.

ಈ ಬಗ್ಗೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸುತ್ತಾ, ಯಾರೇ ಅರ್ಜಿ ಕೊಟ್ಟರೂ ನಾನೇ ಖುದ್ದಾಗಿ ತಗೋತೀನಿ. ಅದಕ್ಕೆ ಸಂಬಂಧಪಟ್ಟವರಿಗೆ ಅರ್ಜಿಗಳನ್ನು ಕಳಿಸ್ತೇವೆ. ಸಮಯ ಇದ್ರೆ ಇಲ್ಲೇ ಬರೆದು ಕಳಿಸ್ತೇನೆ. ದೌರ್ಜನ್ಯ ಸರಿ ಅಲ್ಲ. ಆ ರೀತಿ ದೌರ್ಜನ್ಯ ಮಾಡಬಾರದು ಅಂತ ಸೂಚನೆ ಕೊಡ್ತೇನೆ. ಮನವಿ ಕೊಡೋಕ್ಕೆ ಬಂದವರ ಜತೆ ಹಾಗೆ ನಡೆದುಕೊಳ್ಳಬಾರದು. ಅಹವಾಲು ಕೊಡಲು ಜನ ನಮ್ಮ ಬಳಿ ಬರ್ತಾರೆ, ಅದಕ್ಕೆ ಅವಕಾಶ ಕೊಡ್ತೇವೆ. ವಶಕ್ಕೆ ಪಡೆದವರನ್ನ ಬಿಡಲು ಹೇಳ್ತೇನೆ ಎಂದರು.

ಬಳಿಕ ಅಹವಾಲು ಕೊಡಲು ಬಂದ ಆಕಾಂಕ್ಷಿಗಳ ಮೇಲೆ ದಬ್ಬಾಳಿಕೆ ಮೆರೆದ ಇನ್ಸ್​ಪೆಕ್ಟರ್ ಅವರನ್ನು​ ಕರೆದು ಬುದ್ಧಿ ಹೇಳಿದ ಪರಮೇಶ್ವರ್, ಹಾಗೆಲ್ಲ ಮಾಡಬೇಡಿ. ಅರ್ಜಿ ಕೊಡಲು ಬಂದವರಿಗೆ ತಡೆಯಬೇಡಿ, ಸುಮ್ನಿರಿ, ಬಿಟ್ಬಿಡಿ ಅವರನ್ನು ಎಂದು ಸೂಚಿಸಿದರು.

ಇದನ್ನೂ ಓದಿ:ವಿಶೇಷ ಸೌಲಭ್ಯ ಕಲ್ಪಿಸಿದ ಆರೋಪ: ಸಮಗ್ರ ತನಿಖೆ ನಡೆಸಿ ವರದಿ ನೀಡಲು ಸಿಸಿಬಿ ಜಂಟಿ ಪೊಲೀಸ್ ಆಯುಕ್ತರನ್ನ ನೇಮಿಸಿದ ರಾಜ್ಯ ಸರ್ಕಾರ - special hospitality to Darshan

ABOUT THE AUTHOR

...view details