ಬಳ್ಳಾರಿ: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕಡಿಮೆ ಇದೆ ಎಂದು ಕೆಲ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಆದರೆ, ಇಲ್ಲೊಂದು ಸರ್ಕಾರಿ ಪ್ರೌಢಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಇದ್ದು, ಕೊಠಡಿಗಳ ಕೊರತೆ ಇದೆ. ಇದರಿಂದ ಒಂದೇ ಬೆಂಚ್‌ನಲ್ಲಿ ಐದಾರು ವಿದ್ಯಾರ್ಥಿಗಳು ಕುಳಿತು ಪಾಠ ಕೇಳುವ ಪರಿಸ್ಥಿತಿ ಇದೆ. ವಿದ್ಯಾರ್ಥಿಗಳು ಇಕ್ಕಟ್ಟಾಗಿ ಕೂತು ಪಾಠ ಕೇಳಲಾಗದೇ ಶಾಲೆಯ ಆವರಣದಲ್ಲಿ ಪಾಠ ಕೇಳುತ್ತಿದ್ದಾರೆ.
ಹೌದು, ಸಿರಗುಪ್ಪ ತಾಲೂಕಿನ ಬಲಕುಂದಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಕೊಠಡಿಗಳ ಕೊರತೆ ಎದುರಾಗಿದ್ದು, ಸೂಕ್ತ ಕೊಠಡಿಗಳ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಒಂದೇ ಬೆಂಚ್ ಮೇಲೆ ಐದಾರು ವಿದ್ಯಾರ್ಥಿಗಳನ್ನ ಕುಳ್ಳರಿಸಿ ಪಾಠ ಮಾಡುವ ದುಃಸ್ಥಿತಿ ಶಿಕ್ಷಕರಿಗೆ ಎದುರಾಗಿದೆ. ಇನ್ನೂ ಕೆಲವೊಮ್ಮೆ ಶಾಲಾ ಆವರಣದಲ್ಲಿ ಮಕ್ಕಳನ್ನು ಕೂರಿಸಿ ಪಾಠ ಮಾಡಿದ ಉದಾಹರಣೆ ಸಹ ಇದೆ. ಹೀಗಾಗಿ ಹೊಸ ಕೊಠಡಿಗಳನ್ನು ನಿರ್ಮಾಣ ಮಾಡಿ ಕೊಡಿ ಎಂದು ಸಾಕಷ್ಟು ಬಾರಿ ಜನಪ್ರತಿನಿಧಿಗಳಿಗೆ, ಮೇಲಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಇನ್ನು ಈ ಬಲಕುಂದಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 8 ರಿಂದ 10ನೇ ತರಗತಿ ವರಗೆ ಸುಮಾರು 316 ವಿದ್ಯಾರ್ಥಿಗಳ ದಾಖಲಾತಿ ಇದೆ. ಇಷ್ಟೊಂದು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೂ ಕನಿಷ್ಠ ಮೂಲ ಸೌಕರ್ಯಗಳನ್ನ ಸರ್ಕಾರ ಕಲ್ಪಿಸಿಲ್ಲ. ಇದೇ ಕಾರಣಕ್ಕೆ ಕೊಠಡಿಗಳ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು ಬಿಸಿಲನ್ನೂ ಲೆಕ್ಕಿಸದೇ ಹೊರಗಡೆ ಕುಳಿತು ಪಾಠ ಕೇಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಇಒ ಹೇಳಿದ್ದೇನು?:ಬಲಕುಂದಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಆಗಮಿಸಿ ಪರಿಶೀಲನೆ ಬಳಿಕ ಮಾತನಾಡಿದ ಬಿಇಒ ಗುರಪ್ಪ, ಶಾಲೆಯಲ್ಲಿ ಕೊಠಡಿಗಳ ಸಮಸ್ಯೆ ಇದೆ. ಕೊಠಡಿ ಮಂಜೂರು ಮಾಡುವ ಬಗ್ಗೆ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ. ಅಕ್ಷರ ಆವಿಷ್ಕಾರ ಯೋಜನೆಯಡಿ ಪ್ರೌಢಶಾಲೆಗಳಿಗೆ ಅನುದಾನ ಸಿಕ್ಕಿಲ್ಲ. ಹೀಗಾಗಿ ಶಾಸಕರ ಅನುದಾನದಡಿ ಕಟ್ಟಡ ನಿರ್ಮಿಸುವಂತೆ ಅವರಿಗೆ ಮನವಿ ಮಾಡಿ ಕೂಡಲೇ ಸಮಸ್ಯೆ ಬಗೆಹರಿಸಲಾಗುತ್ತೆ ಎಂದರು.