ಬೆಂಗಳೂರು :ಮಾದಕ ವಸ್ತುಗಳ ಸರಬರಾಜಿನಲ್ಲಿ ತೊಡಗಿದ್ದ ವಿದೇಶಿ ಮೂಲದವರ ಸಹಿತ 7 ಜನ ಆರೋಪಿಗಳನ್ನ ಸಿಸಿಬಿಯ ಮಾದಕ ವಸ್ತು ನಿಗ್ರಹದಳದ ಪೊಲೀಸರು ಬಂಧಿಸಿದ್ದಾರೆ. ನಗರದ ಜ್ಞಾನಭಾರತಿ, ಬಾಣಸವಾಡಿ, ಹುಳಿಮಾವು, ಪುಲಿಕೇಶಿನಗರ ವ್ಯಾಪ್ತಿಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಶೇಕ್ ಮೊಹಮ್ಮದ್ ಅರ್ಬಾಜ್, ಗೌತಮ್, ಕೆ. ಅಭಿಷೇಕ್, ಎನ್ ಜಾಧವ್, ರಿತಿಕ್ ರಾಜ್ ಎಂಬಾತನ ಸಹಿತ 7 ಜನ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳಿಂದ 219 ಎಕ್ಸ್ಟಸಿ ಪಿಲ್ಸ್, 505 ಗ್ರಾಂ ಎಂಡಿಎಂಎ ಕ್ರಿಸ್ಟಲ್ಸ್, 130 ಗ್ರಾಂ ಚರಸ್, 100.88 ಗ್ರಾಂ ಕೊಕೇನ್ ಸಹಿತ 1.52 ಕೋಟಿ ಮೌಲ್ಯದ ಮಾದಕ ಪದಾರ್ಥಗಳು, 1 ದ್ವಿಚಕ್ರ ವಾಹನ, 6 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರು ತಿಳಿಸಿದ್ದಾರೆ.
ಪ್ರತ್ಯೇಕ ಪ್ರಕರಣ- ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳ ಬಂಧನ : ಅಂಗಡಿಗೆ ನುಗ್ಗಿ ಕಳ್ಳತನ ಮಾಡಿದವರನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ ಸಿಂಗ್ ಮಾಲೀಕತ್ವದ ಅಂಗಡಿಯನ್ನು ಆರೋಪಿಗಳು ದೋಚಿದ್ದರು. ಅಂಗಡಿ ಮಾಲೀಕ ದಾವಣಗೆರೆ ನಗರದ ಆರ್ಎಂಸಿ ಫ್ಲೈ ಓವರ್ ಕೆಳಗಿನ ಸರ್ವಿಸ್ ರಸ್ತೆಯಲ್ಲಿ ಭರತ್ ಆಟೋಮೊಬೈಲ್ಸ್ ಮತ್ತು ಲುಬ್ರಿಕೆಂಟ್ಸ್ ಅಂಗಡಿಯನ್ನು ನಡೆಸುತ್ತಿದ್ದಾರೆ. ಜ. 26ರ ರಾತ್ರಿ ಈ ಘಟನೆ ನಡೆದಿತ್ತು.