ಕರ್ನಾಟಕ

karnataka

ETV Bharat / state

'ತಮಿಳುನಾಡಿನ ಬಿಳಿಗುಂಡ್ಲುವಿಗೆ ಪ್ರತಿದಿನ ಒಂದೂವರೆ ಟಿಎಂಸಿ ನೀರು' : ಡಿ.ಕೆ.ಶಿವಕುಮಾರ್ - water to Tamil Nadu - WATER TO TAMIL NADU

ತಮಿಳುನಾಡಿನ ಬಿಳಿಗುಂಡ್ಲುವಿಗೆ ಪ್ರತಿದಿನ ಒಂದೂವರೆ ಟಿಎಂಸಿಯಷ್ಟು ನೀರು ತಲುಪುತ್ತಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರು ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್ (ETV Bharat)

By ETV Bharat Karnataka Team

Published : Jul 16, 2024, 1:59 PM IST

ಬೆಂಗಳೂರು: 'ತಮಿಳುನಾಡಿನ ಬಿಳಿಗುಂಡ್ಲುವಿಗೆ ಪ್ರತಿದಿನ ಒಂದೂವರೆ ಟಿಎಂಸಿಯಷ್ಟು ನೀರು ತಲುಪುತ್ತಿದೆ' ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಸದನದಲ್ಲಿ ಇಂದು ಸ್ವಯಂಪ್ರೇರಿತವಾಗಿ ಹೇಳಿಕೆ ನೀಡಿದ ಡಿಸಿಎಂ, "ಕಾವೇರಿ ನದಿಪಾತ್ರದ ನಾಲ್ಕು ಜಲಾಶಯಗಳಲ್ಲಿ 56,620 ಕ್ಯೂಸೆಕ್ ಒಳಹರಿವಿದೆ. ಹಾರಂಗಿಗೆ 12,820, ಹೇಮಾವತಿಗೆ 14,023, ಕೆಆರ್​​ಎಸ್‍ಗೆ 25,933, ಕಬಿನಿಗೆ 22,840 ಕ್ಯೂಸೆಕ್​ ನೀರಿನ ಹರಿವಿದೆ' ಎಂದು ಮಾಹಿತಿ ನೀಡಿದರು. ಸುಪ್ರೀಂಕೋರ್ಟ್‍ನ ತೀರ್ಪಿನ ಪ್ರಕಾರ, "ಬಿಳಿಗುಂಡ್ಲುವಿಗೆ ಈ ವೇಳೆಗೆ 40 ಟಿಎಂಸಿ ನೀರು ಹೋಗಬೇಕಿತ್ತು. ಈವರೆಗೂ 6 ಟಿಎಂಸಿ ನೀರು ಹರಿದಿದೆ. ಪ್ರಸ್ತುತ ಉತ್ತಮ ಮಳೆಯಾಗುತ್ತಿರುವುದರಿಂದ ಪ್ರತಿದಿನ ಒಂದೂವರೆ ಟಿಎಂಸಿಯಷ್ಟು ಹರಿಸಲಾಗುತ್ತಿದೆ. ಇದೇ ವಾತಾವರಣ ಮುಂದುವರೆದರೆ ಸಮಸ್ಯೆ ಬಗೆಹರಿಯಲಿದೆ" ಎಂದು ತಿಳಿಸಿದರು.

"ಕಾವೇರಿ ನದಿನೀರಿನ ವಿವಾದ ಕುರಿತಂತೆ ಚರ್ಚಿಸಲು ಸರ್ವಪಕ್ಷ ಸಭೆ ಕರೆದಿದ್ದಕ್ಕಾಗಿ ನಾನಾ ರೀತಿಯ ವ್ಯಾಖ್ಯಾನಗಳು ಕೇಳಿ ಬಂದಿವೆ. ಕಡಲೆಕಾಯಿ ತಿನ್ನಲಿಕ್ಕೆ, ಗೋಡಂಬಿ ತಿನ್ನಲಿಕ್ಕೆ ಸಭೆಗೆ ಹೋಗಬೇಕಾ? ಎಂಬ ಆಕ್ಷೇಪಣೆಗಳನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ಸರ್ಕಾರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸುತ್ತಿದೆ" ಎಂದರು.

ಈ ವೇಳೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, "ಸರ್ವ ಪಕ್ಷ ಸಭೆಯಲ್ಲಿ ನಮ್ಮ ಪಕ್ಷದಿಂದ ಸಲಹೆ ನೀಡಿ ತಮಿಳುನಾಡಿಗೆ ನೀರು ಹರಿಸಬಾರದು ಎಂದು ಒತ್ತಾಯಿಸಿದ್ದೆವು. ಆದರೆ ಕಾನೂನು ತಜ್ಞರು ಕನಿಷ್ಠ 8 ಟಿಎಂಸಿಯಾದರೂ ನೀರು ಬಿಟ್ಟರೆ ನಾವು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು ಸಾಧ್ಯವಾಗಲಿದೆ. ಮಳೆ ಹೆಚ್ಚು ಬಂದರೆ ನೀರು ಬಿಡಿ. ಇಲ್ಲವಾದರೆ ಬಿಡಬೇಡಿ" ಎಂದು ಸಲಹೆ ನೀಡಿದರು.

ಇನ್ನೊಂದು ವಾರದಲ್ಲಿ ವಿಧೇಯಕ ಸದನದಲ್ಲಿ ಮಂಡನೆ: 'ಜಲಾಶಯಗಳಿಂದ ರೈತರ ಜಮೀನಿಗೆ ನೀರು ಪೂರೈಸುವ ನಾಲೆಗಳಲ್ಲಿ ಕೊನೆ ಹಂತದವರೆಗೂ ನೀರು ತಲುಪಬೇಕು, ನಾಲೆಯ ಮಧ್ಯದಲ್ಲಿ ರೈತರು ಪಂಪ್ ಅಳವಡಿಸಿ ನೀರೆತ್ತುವುದನ್ನು ತಪ್ಪಿಸಲು ಇನ್ನೊಂದು ವಾರದಲ್ಲಿ ವಿಧೇಯಕವನ್ನು ಸದನದಲ್ಲಿ ಮಂಡಿಸಲಾಗುವುದು' ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಜಗದೀಶ್ ಶಿವಯ್ಯ ಗುಡಗುಂಟಿ ಅವರ ಪ್ರಶ್ನೆಗೆ ಉತ್ತರಿಸಿದರು.

'ಮಂಡ್ಯ, ಹಾಸನ, ಬಿಜಾಪುರ, ಬಾಗಲಕೋಟೆ ಸೇರಿದಂತೆ ನೀರಾವರಿ ಪ್ರದೇಶಗಳಲ್ಲಿ ನಾಲೆಯ ಕೊನೆಯವರೆಗೂ ನೀರು ತಲುಪವುದಿಲ್ಲ. ಮಧ್ಯದಲ್ಲೆ ಪಂಪ್‍ಗಳ ಮೂಲಕ ನೀರೆತ್ತಲಾಗುತ್ತಿದೆ. ಇದನ್ನು ತಪ್ಪಿಸಬೇಕಿದೆ. ರೈತರು ಸೈಪನ್ ಮೂಲಕ ನೀರು ಎತ್ತುತ್ತಾರೆ. ಇದನ್ನು ತಪ್ಪಿಸಲು ವಿಧೇಯಕವನ್ನು ತರಲಾಗುವುದು. ಇದರ ಬಗ್ಗೆ ವ್ಯಾಪಕ ಚರ್ಚೆ ಮಾಡಲು ಅನುಮತಿ ಕೊಡಿ' ಎಂದರು.

ಎತ್ತಿನಹೊಳೆ ಯೋಜನೆಗೆ 25 ಸಾವಿರ ಕೋಟಿ ರೂ. ವೆಚ್ಚವಾಗಿದೆ. ಆ ನೀರು ತುಮಕೂರಿಗೂ ತಲುಪಲಾಗದ ಸ್ಥಿತಿ ಇದೆ ಎಂದು ಕಳವಳ ವ್ಯಕ್ತಪಡಿಸಿದ ಡಿಕೆಶಿ ತುಂಗಳ-ಸಾವಳಗಿ ಏತನೀರಾವರಿ ಯೋಜನೆಯಗೆ ಹಲ್ಯಾಳ ಏತ ನೀರಾವರಿ ಯೋಜನೆಯ 150 ಕ್ಯೂಸೆಕ್ ನೀರನ್ನು ಪಂಪ್‍ಗಳ ಮೂಲಕ 9,045 ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಬಿಜೆಪಿಯ ಸಿ.ಸಿ.ಪಾಟೀಲ್, 'ನಾಲೆಯ ಕೊನೆಯ ಹಂತದವರೆಗೂ ನೀರು ಹರಿದುಹೋಗಲು ವಿಧೇಯಕ ತಂದರೆ ಸಂಪೂರ್ಣ ಬೆಂಬಲವಿದೆ' ಎಂದರು.

ವಾಗ್ವಾದ:ಈ ಹಂತದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಮಾತನಾಡಿ, 'ನಾಲಾ ಮಧ್ಯದಲ್ಲಿ ನೀರೆತ್ತುವುದನ್ನು ತಡೆಯಲು ವಿಧೇಯಕ ತರುವುದಾಗಿ ಹೇಳುತ್ತೀರಿ. ಆದರೆ ಗುಬ್ಬಿಯಿಂದ ಕುಣಿಗಲ್‍ಗೆ ನಾಲಾ ಮಧ್ಯದಿಂದಲೇ ನೀರು ತೆಗೆದುಕೊಂಡು ಹೋಗಿದ್ದೀರಿ' ಎಂದು ಉಪಮುಖ್ಯಮಂತ್ರಿ ಅವರನ್ನು ಪ್ರಶ್ನಿಸಿದರು.

ಈ ಹಂತದಲ್ಲಿ ಸುರೇಶ್ ಬಾಬು ಹಾಗೂ ಕಾಂಗ್ರೆಸ್ ಶಾಸಕ ಎಚ್.ಸಿ.ಬಾಲಕೃಷ್ಣ ಅವರ ನಡುವೆ ವಾಗ್ವಾದ ನಡೆಯಿತು. ಶಾಸಕ ಎಚ್.ಡಿ.ತಮ್ಮಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, 'ಭದ್ರ ಉಪಜಲಾನಯನ ಪ್ರದೇಶದಿಂದ ಏತ ವ್ಯವಸ್ಥೆ ಮೂಲಕ 197 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ 2020 ರಲ್ಲೇ 1281.80 ಕೋಟಿ ರೂ. ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ದ್ವಾರಸಮುದ್ರ ಮತ್ತು ಇತರ ಆರು ಕೆರೆಗಳನ್ನು ಹಾಗೂ ಚಿಕ್ಕಮಗಳೂರು ತಾಲೂಕಿನ ಬೆಳವಾಡಿ ಕೆರೆಯನ್ನು ರಣಘಟ್ಟ ತಿರುವಿನಿಂದ ಕೆರೆ ತುಂಬಿಸುವ ಕಾಮಗಾರಿಯನ್ನು 1125.46 ಕೋಟಿ ರೂ. ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ದೊರೆತಿದೆ' ಎಂದರು.

2ನೇ ಹಂತದ ಕಾಮಗಾರಿಯನ್ನು ಹೊಸ ಅಂದಾಜು ವೆಚ್ಚದಲ್ಲಿ ಕೈಗೊಳ್ಳುವುದಾಗಿ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದರು.

ಇದನ್ನೂ ಓದಿ:ವಿಧಾನಸಭೆಯಲ್ಲಿ ವಾಲ್ಮೀಕಿ ನಿಗಮ ಹಗರಣದ ಸದ್ದು: ಆಡಳಿತ - ಪ್ರತಿ ಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ - Valmiki Corporation scam

ABOUT THE AUTHOR

...view details