ಕರ್ನಾಟಕ

karnataka

ಆ.23ರಂದು ದೇಶದ ಮೊದಲ ಕೆಹೆಚ್ಐಆರ್ ಸಿಟಿ ಯೋಜನೆಗೆ ಚಾಲನೆ: ಸಚಿವ ಎಂ.ಬಿ.ಪಾಟೀಲ್ - KHIR city project

By ETV Bharat Karnataka Team

Published : Aug 3, 2024, 8:34 PM IST

ನಾಲೆಡ್ಜ್, ಹೆಲ್ತ್ ಇನ್ನೋವೇಶನ್ ಮತ್ತು ರೀಸರ್ಚ್ ಸಿಟಿ’ ಯೋಜನೆಯ ಮೊದಲನೇ ಹಂತಕ್ಕೆ ಆಗಸ್ಟ್‌ 23ರ ಶುಕ್ರವಾರ ಚಾಲನೆ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಸಚಿವ ಎಂ.ಬಿ.ಪಾಟೀಲ್
ಸಚಿವ ಎಂ.ಬಿ.ಪಾಟೀಲ್ (ETV Bharat)

ಬೆಂಗಳೂರು: ದೇಶದ ಪ್ರಪ್ರಥಮ ಎನ್ನಲಾದ, ಬಹು ಮಹತ್ವಾಕಾಂಕ್ಷೆಯ `ನಾಲೆಡ್ಜ್, ಹೆಲ್ತ್ ಇನ್ನೋವೇಶನ್ ಮತ್ತು ರೀಸರ್ಚ್ ಸಿಟಿ’ ಯೋಜನೆಯ ಮೊದಲನೇ ಹಂತಕ್ಕೆ ಆಗಸ್ಟ್‌ 23ರ ಶುಕ್ರವಾರ ಚಾಲನೆ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಶನಿವಾರ ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ನಗರದಿಂದ 60 ಕಿ.ಮೀ. ದೂರದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಒಟ್ಟು 2,000 ಎಕರೆಯಲ್ಲಿ ಕೆಹೆಚ್ಐಆರ್ ಸಿಟಿ ಅಭಿವೃದ್ಧಿಪಡಿಸಲಾಗುವುದು. ಮೊದಲ ಹಂತದಲ್ಲಿ ಒಂದು ಸಾವಿರ ಎಕರೆ ಜಾಗದಲ್ಲಿ ಯೋಜನೆ ತಲೆ ಎತ್ತಲಿದೆ. ಒಟ್ಟು ಎರಡೂ ಹಂತಗಳಲ್ಲಿ 40 ಸಾವಿರ ಕೋಟಿ ರೂ.ಗಳಿಗಿಂತಲೂ ಹೆಚ್ಚು ಹೂಡಿಕೆ ಆಗಲಿದ್ದು, 50 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ. 23ರ ಬೆಳಿಗ್ಗೆ 11 ಗಂಟೆಗೆ ನಗರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕೆಎಚ್ಐಆರ್ ಸಿಟಿಗೆ ಚಾಲನೆ ಸಿಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಉದ್ಯಮ ವಲಯದ ಪ್ರಮುಖರು ಕೂಡ ಭಾಗವಹಿಸಲಿದ್ದು, ಹೆಸರುಗಳು ಅಂತಿಮವಾಗುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿಯೂ ವಿಶೇಷ ನಗರಗಳ ಪರಿಕಲ್ಪನೆ ಇದೆ. ಕೇಂದ್ರ ಸರ್ಕಾರ ಕೂಡ ಇದೇ ಮಾದರಿಯನ್ನು ಅನುಸರಿಸುತ್ತದೆ. ಆದರೆ, ಕೆಎಚ್ಐಆರ್ ಸಿಟಿಯಲ್ಲಿ ನಾಲ್ಕೂ ವಲಯಗಳಲ್ಲಿನ ಜಾಗತಿಕ ಮಟ್ಟದ ಅತ್ಯುನ್ನತ ಕಂಪನಿಗಳು ನೆಲೆಯೂರಲಿವೆ. ಇದಕ್ಕೆ ಬೇಕಾದ ಜಮೀನು, ವಿದ್ಯುತ್, ನೀರು, ರಸ್ತೆ ಮತ್ತಿತರ ಸೌಲಭ್ಯಗಳನ್ನು ರಾಜ್ಯ ಸರ್ಕಾರ ಒದಗಿಸಲಿದೆ. ಇದರಿಂದ ಆರ್ಥಿಕ ವರಮಾನ ಹೆಚ್ಚಳದ ಜೊತೆಗೆ ರಫ್ತು ವಹಿವಾಟು ಕೂಡ ವೃದ್ಧಿಸಲಿದೆ. ಇದರಿಂದಾಗಿ ಬೆಂಗಳೂರು ನಗರವು ಇನ್ನೊಂದು ಸ್ತರ ಮೇಲೇರಲಿದೆ ಎಂದು ಹೇಳಿದ್ದಾರೆ.

ಜಾಗತಿಕವಾಗಿ ಉತ್ಕೃಷ್ಟ ಮಟ್ಟದ ಉದ್ದಿಮೆಗಳು, ವಿಶ್ವವಿದ್ಯಾಲಯಗಳು, ಮೆಡಿಕಲ್ ಟೂರಿಸಂ, ಸಂಶೋಧನೆ, ಚಿಕಿತ್ಸೆ, ನಾವೀನ್ಯತೆ ಇವುಗಳಿಗೆ ಉದ್ದೇಶಿತ ಸಿಟಿಯಲ್ಲಿ ಆದ್ಯತೆ ನೀಡಲಾಗುವುದು. ಜೊತೆಗೆ ಭವಿಷ್ಯದ ಸಂಚಾರ ವ್ಯವಸ್ಥೆ, ಸೆಮಿಕಂಡಕ್ಟರ್, ಅಡ್ವಾನ್ಸ್ಡ್ ಮೆಟೀರಿಯಲ್ಸ್, ನವೋದ್ಯಮಗಳು, ವೈಮಾಂತರಿಕ್ಷ, ರಕ್ಷಣೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನ, ಜೀವವಿಜ್ಞಾನಗಳು ಮತ್ತು ಆಧುನಿಕ ತಂತ್ರಜ್ಞಾನ ವಲಯಗಳ ಕಂಪನಿಗಳು ಕೂಡ ಇಲ್ಲಿ ಬರಲಿವೆ ಎಂದಿದ್ದಾರೆ.

ಮುಖ್ಯವಾಗಿ ಒಟ್ಟಾರೆ ಯೋಜನೆಯಿಂದ ಅಪಾರ ಸಂಖ್ಯೆಯ ಪರೋಕ್ಷ ಉದ್ಯೋಗಗಳು ಕೂಡ ಸೃಷ್ಟಿಯಾಗಲಿವೆ. ಇದರಿಂದ ಸ್ಥಳೀಯವಾಗಿ ಆರ್ಥಿಕ ಚಟುವಟಿಕೆಗಳು ಗರಿಗೆದರಲಿವೆ. ಇದಕ್ಕಾಗಿ ಸರ್ಕಾರವು ಸ್ಪಷ್ಟ ರೂಪುರೇಷೆಯನ್ನು ಈಗಾಗಲೇ ಅಖೈರುಗೊಳಿಸಿದೆ ಎಂದು ವಿವರಿಸಿದ್ದಾರೆ.

ಕೆಹೆಚ್ಐಆರ್ ಸಿಟಿಯಲ್ಲಿ ಆರಂಭವಾಗಲಿರುವ ಉದ್ದಿಮೆಗಳಿಗೆ ಸಕಲ ರೀತಿಯ ಸೌಲಭ್ಯಗಳನ್ನೂ ಒದಗಿಸಲಾಗುವುದು. ರಾಜ್ಯದಲ್ಲಿರುವ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಉದ್ದಿಮೆಗಳು ಮತ್ತು ಸಂಶೋಧನಾ ಸಂಸ್ಥೆಗಳಿಗೂ ಇಲ್ಲಿ ಅವಕಾಶವಿರಲಿದೆ. ಈ ಮೂಲಕ ನಮ್ಮಲ್ಲಿನ ಸಂಸ್ಥೆಗಳು ಕೂಡ ಜಾಗತಿಕ ಗುಣಮಟ್ಟದಲ್ಲಿ ಎತ್ತರಕ್ಕೆ ಬೆಳೆಯಲು ಅವಕಾಶ ಒದಗಿಸಲಾಗುವುದು. ಒಟ್ಟಿನಲ್ಲಿ ನಾವು ಜಾಗತಿಕ ಮಟ್ಟದಲ್ಲಿ ಪ್ರಮುಖ ಹೂಡಿಕೆ ತಾಣವಾಗಿ ಹೊರಹೊಮ್ಮಬೇಕು ಎನ್ನುವುದು ಇದರ ಹಿಂದಿನ ಆಶಯಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿ ಆಹ್ವಾನ - Veerashaiva Lingayat Schemes

ABOUT THE AUTHOR

...view details