ಬೆಂಗಳೂರು:ಒಂಟಿಯಾಗಿ ನೆಲೆಸಿದ್ದ ವೃದ್ಧೆಯ ಕೈ, ಕಾಲು ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿದ ದುಷ್ಕರ್ಮಿಗಳು ಶವವನ್ನು ಡ್ರಮ್ನಲ್ಲಿ ತುಂಬಿ ಬೀದಿಗೆ ಬಿಸಾಡಿ ಪರಾರಿಯಾಗಿದ್ದಾರೆ. ಹಣಕಾಸಿನ ವಿಚಾರಕ್ಕೆ ಪರಿಚಯಸ್ಥರೇ ಕೃತ್ಯ ಎಸಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಕೆ.ಆರ್. ಪುರದ ನಿಸರ್ಗ ಲೇಔಟ್ ನಿವಾಸಿ ಸುಶೀಲಮ್ಮ (65) ಮೃತ ವೃದ್ಧೆ. ಈ ಸಂಬಂಧ ವೃದ್ಧೆಯ ಪರಿಚಿತ ದಿನೇಶ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿಸರ್ಗ ಲೇಔಟ್ನ ಮನೆಗಳ ಓಣಿಯಲ್ಲಿ ಅನಾಥವಾಗಿ 10 ಲೀಟರ್ ಸಾಮರ್ಥ್ಯದ ಡ್ರಮ್ ಇಟ್ಟಿರುವುದನ್ನು ಗಮನಿಸಿದ ಸ್ಥಳೀಯರು, ಅದರ ಬಳಿ ಹೋಗಿ ನೋಡಿದಾಗ ಶವ ಪತ್ತೆಯಾಗಿದೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ, ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಸುಶೀಲಮ್ಮ, 10 ವರ್ಷಗಳಿಂದ ನಿಸರ್ಗ ಲೇಔಟ್ನಲ್ಲಿ ನೆಲೆಸಿದ್ದರು. ವೃದ್ಧೆಗೆ ಓರ್ವ ಪುತ್ರ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆಸ್ತಿ ಮಾರಾಟದಲ್ಲಿ ಬಂದ ಹಣದಲ್ಲಿ 8 ಲಕ್ಷ ರೂ.ಗೆ ಮನೆ ಬೋಗ್ಯಕ್ಕೆ ಪಡೆದು, ಮಕ್ಕಳಿಂದ ಪ್ರತ್ಯೇಕವಾಗಿ ಅಜ್ಜಿ ವಾಸವಾಗಿದ್ದರು.