ಬೆಂಗಳೂರು: ಇಸ್ರೇಲ್-ಇರಾನ್ ಸಂಘರ್ಷ ಜಾಗತಿಕವಾಗಿ ತೀವ್ರ ಕಳವಳಕ್ಕೆ ಕಾರಣವಾಗಿದೆ. ಪೆಟ್ರೋಲಿಯಂ ತೈಲ ಕೊರತೆ ಸೇರಿದಂತೆ ಹಲವು ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆಯೂ ಇದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಂಕರ್ ತಿಳಿಸಿದರು.
ರಾಜಾಜಿನಗರದ 'ದಿ ಇನ್ಟ್ಯಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರೀಸ್ ಆಫ್ ಇಂಡಿಯಾ -ಐಸಿಎಸ್ಐ ಬೆಂಗಳೂರು ಚಾಪ್ಟರ್'ನಲ್ಲಿ ಆಯೋಜಿಸಿದ್ದ 'ವಿಶ್ವಬಂಧು ಭಾರತ್' ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ''ವಿಶ್ವದ ಯಾವುದೇ ಸಂಘರ್ಷ, ಬಿಕ್ಕಟ್ಟು ಜಾಗತಿಕವಾಗಿ ಪರಿಣಾಮ ಬೀರುತ್ತದೆ. ಜಾಗತಿಕವಾಗಿ ತೈಲ ಬೆಲೆ, ಆಹಾರದರಗಳ ಏರಿಕೆ, ಹಣದುಬ್ಬರ ಹೆಚ್ಚಳ ಒಳಗೊಂಡಂತೆ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಜಗತ್ತಿನ ಎಲ್ಲ ಸಂಘರ್ಷ, ಸಮಸ್ಯೆಗಳಿಗೆ 'ವಿಶ್ವಬಂಧು' ಪರಿಕಲ್ಪನೆಯೇ ಪರಿಹಾರ'' ಎಂದು ಅವರು ಪ್ರತಿಪಾದಿಸಿದರು.
''ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತಡೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಪ್ರಧಾನಿ ಮೋದಿ ಸೂಚಿಸಿದ್ದಾರೆ. ಇರಾನ್ನಲ್ಲಿ ಭಾರತದ ಹಡಗು ಸಿಲುಕಿಕೊಂಡಿದೆ. ಇದರಲ್ಲಿ 17 ಭಾರತೀಯ ನಾಗರಿಕರು ಸಹ ಇದ್ದು, ಸುರಕ್ಷಿತವಾಗಿ ಕರೆ ತರಲು ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ. ಈ ಭಾಗದಲ್ಲಿ ಸುಮಾರು 18 ದಶಲಕ್ಷ ಭಾರತೀಯರು ನೆಲೆಸಿದ್ದು, ಇವರ ಸುರಕ್ಷತೆಯೂ ಸಹ ನಮ್ಮ ಜವಾಬ್ದಾರಿ'' ಎಂದರು.
''ರಷ್ಯಾ-ಉಕ್ರೇನ್ ಭಾಗದಲ್ಲಿ ಯುದ್ಧದ ಗಂಭೀರತೆ ಇದ್ದು, ಗಾಜಾದಲ್ಲಿ ಸಂಘರ್ಷ ಮುಂದುವರೆದಿದೆ. ಭಾರತ-ಫೆಸಿಫಿಕ್ ವಲಯದಲ್ಲಿ ಪರಿಸ್ಥಿತಿ ತ್ರಾಸದಾಯವಾಗಿದೆ. ಜಗತ್ತಿನ ಸುಮಾರು 20 ದೇಶಗಳು ಪರಸ್ಪರ ಮಾತುಕತೆ ನಡೆಸದ ಸ್ಥಿತಿಯಲ್ಲಿವೆ. ಇಂತಹ ಸವಾಲುಗಳನ್ನು ಎದುರಿಸಲು ಪ್ರಬುದ್ಧ ನಾಯಕತ್ವದ ಅಗತ್ಯವಿದ್ದು, ಪರಸ್ಪರ ಅರ್ಥಮಾಡಿಕೊಳ್ಳುವ, ಮಾತುಕತೆ ನಡೆಸುವ ಮಾರ್ಗಗಳನ್ನು ಅನುಸರಿಸಬೇಕಾಗಿದೆ. ಏಕಮುಖವಾದ ಇತ್ಯರ್ಥದಿಂದ ಸಮಗ್ರ ಪರಿಹಾರ ದೊರೆಯುವುದಿಲ್ಲ. ವಿಶ್ವಸಂಸ್ಥೆಯೂ ಸಹ ಇಂತಹ ವಿಷಯಗಳಲ್ಲಿ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುವುದಿಲ್ಲ. ಆದರೆ, ಭಾರತ ಅಭಿವೃದ್ಧಿಶೀಲ ದೇಶಗಳಿಗೆ ಗ್ಲೋಬಲ್ ಸೌತ್ ಪರಿಕಲ್ಪನೆಗೆ ಒತ್ತು ನೀಡಿದ್ದು, ನಾವು ಈ ರಾಷ್ಟ್ರಗಳಿಗೆ ಧ್ವನಿಯಾಗಿದ್ದೇವೆ. ಜಿ-20 ಅಧ್ಯಕ್ಷತೆಯ ಮೂಲಕ ಜಗತ್ತಿನ ಗಮನ ಸೆಳೆದಿದ್ದೇವೆ'' ಎಂದು ಜೈಶಂಕರ್ ವಿವರಿಸಿದರು.