ಕರ್ನಾಟಕ

karnataka

ETV Bharat / state

ಮೈಕ್ರೋ ಫೈನಾನ್ಸ್ ಕಿರುಕುಳ ನಿಯಂತ್ರಿಸುವ ಸುಗ್ರೀವಾಜ್ಞೆ ಅಂಶ ಪರಿಶೀಲನೆಗೆ ಅಧಿಕಾರಿಗಳ ತಂಡ ರಚನೆ - MICROFINANCE HARASSMENT

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಸಾಲಗಾರರಿಗೆ ಕಿರುಕುಳ ನಿಯಂತ್ರಿಸುವ ಬಗ್ಗೆ ಜಾರಿಯಾಗಲಿರುವ ಗ್ರೀವಾಜ್ಞೆಯಲ್ಲಿನ ಅಂಶಗಳನ್ನು ಪರಿಶೀಲಿಸಲು ಅಧಿಕಾರಿಗಳ ತಂಡವನ್ನು ರಚಿಸಲಾಗುತ್ತಿದೆ.

MICROFINANCE HARASSMENT
ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆ (ETV Bharat)

By ETV Bharat Karnataka Team

Published : Jan 30, 2025, 8:08 PM IST

ಬೆಂಗಳೂರು:ಮೈಕ್ರೋ ಫೈನಾನ್ಸ್ ಕಿರುಕುಳ ನಿಯಂತ್ರಣ ಹೇರುವ ಸುಗ್ರೀವಾಜ್ಞೆ ಸದ್ಯಕ್ಕಿಲ್ಲ.‌‌ ಕರಡು ಮಸೂದೆಯಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳು ಇರುವುದರಿಂದ ಈ ಬಗ್ಗೆ ಪರಿಶೀಲನೆ ನಡೆಸಲು ಹಿರಿಯ ಅಧಿಕಾರಿಗಳ ತಂಡ ರಚನೆಗೆ ಸರ್ಕಾರ ತೀರ್ಮಾನಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕೃಷ್ಣಾದಲ್ಲಿ ಮೈಕ್ರೋ ಫೈನಾನ್ಸ್‌ ಸಂಸ್ಥೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಕುರಿತಾಗಿ ಉನ್ನತಮಟ್ಟದ ಸಭೆ ನಡೆಸಲಾಯಿತು.‌ ಸಭೆಯಲ್ಲಿ ಗೃಹ ಸಚಿವ ಜಿ.ಪರಮೇಶ್ಬರ್, ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಮತ್ತು ಸಚಿವರಾದ ಹೆಚ್.ಸಿ ಮಹದೇವಪ್ಪ, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಸೇರಿ ಐದು ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.‌

ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮೈಕ್ರೋ ‌ಫೈನಾನ್ಸ್ ಸಂಸ್ಥೆಗಳ ಮೇಲೆ ನಿಯಂತ್ರಣ ಹೇರುವ ಕರಡು ಮಸೂದೆ ಬಗ್ಗೆ ಚರ್ಚೆ ನಡೆಸಲಾಯಿತು.‌ ಕರಡು ಮಸೂದೆಯಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳು ಎದುರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಿಎಂ ನೇತೃತ್ವದಲ್ಲಿ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಸಚಿವ ಸಂಪುಟ ಸಿಎಂ ಸಿದ್ದರಾಮಯ್ಯಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿ ಮೈಕ್ರೋ ಫೈನಾನ್ಸ್ ನಿಯಂತ್ರಣ ಕರಡು ಮಸೂದೆ ಸಾಧಕ ಬಾಧಕ ಬಗ್ಗೆ ಚರ್ಚೆ ನಡೆಸಲಾಯಿತು.‌

ಸಭೆಯಲ್ಲಿ ಮೈಕ್ರೋ ಫೈನಾನ್ಸ್‌ ಸಂಸ್ಥೆಗಳ ಕಿರುಕುಳ ತಪ್ಪಿಸುವ ಉದ್ದೇಶದಿಂದ ರಚಿಸಲಾಗಿರುವ ಸುಗ್ರೀವಾಜ್ಞೆಯಲ್ಲಿನ ಅಂಶಗಳನ್ನು ಮತ್ತೊಮ್ಮೆ ಪರಿಶೀಲಿಸಿ, ಕಠಿಣ ಕಾಯ್ದೆಯನ್ನು ಆದಷ್ಟು ಬೇಗನೆ ಜಾರಿ ಮಾಡಲು ನಿರ್ಧರಿಸಲಾಗಿದೆ. ಈ ಕುರಿತು ಕಾನೂನು ಇಲಾಖೆ, ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ.‌ ಕಾಯ್ದೆ ಸಂಪೂರ್ಣ ಸಂವಿಧಾನಬದ್ಧವಾಗಿದ್ದು, ಯಾವುದೇ ಲೋಪದೋಷಗಳನ್ನು ಹೊಂದಿರಬಾರದು ಎಂದು ಸೂಚನೆ ನೀಡಲಾಗಿದೆ.

ಜಾಮೀನುರಹಿತ ಪ್ರಕರಣ ದಾಖಲು:ಸಾಲಗಾರರು ಎದುರಿಸುತ್ತಿರುವ ಕಿರುಕುಳವನ್ನು ತಪ್ಪಿಸಲು ಹಾಗೂ ಸಾಲ ನೀಡಿದವರು ಬಲವಂತದ ವಸೂಲಿ ಮಾಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ಕಠಿಣ ಕಾಯ್ದೆ ರಚಿಸಲಾಗುತ್ತಿದೆ. ಕಾಯ್ದೆಯಲ್ಲಿ ಪೊಲೀಸರಿಗೆ ಹೆಚ್ಚಿನ ಅಧಿಕಾರ ದೊರೆಯಲಿದೆ. ಒಂಬುಡ್ಸ್‌ಮೆನ್​​ಗಳ ನೇಮಕ ಮಾಡಲಾಗುವುದು. ಅಮಾನವೀಯವಾಗಿ ಬಲವಂತದ ಸಾಲ ವಸೂಲಾತಿ ಮಾಡುವವರಿಗೆ ಜಾಮೀನುರಹಿತ ಪ್ರಕರಣ ದಾಖಲು ಸೇರಿದಂತೆ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸುವ ಅವಕಾಶ ಸಿಗಲಿದೆ ಎಂದು ತಿಳಿಸಿದ್ದಾರೆ.

ನೋಂದಣಿಯಾಗದ ಲೇವಾದೇವಿಗಾರರ ಕಿರುಕುಳವನ್ನು ತಪ್ಪಿಸಲು ಕಠಿಣ ಕಾನೂನು ಜಾರಿ ಮಾಡಲಾಗುತ್ತಿದೆ. ಪ್ರಸ್ತುತವಿರುವ ಕಾನೂನಿನಲ್ಲಿ ಮೈಕ್ರೋ ಫೈನಾನ್ಸ್‌ಗಳ ಕಿರುಕುಳ ನಿಯಂತ್ರಿಸಲು ಹಲವು ಅವಕಾಶಗಳಿದ್ದು, ಅದನ್ನು ಯಾಕೆ ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿಲ್ಲ. ದೂರು ದಾಖಲು ಮಾಡುವ ತನಕ ಕಾಯದೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು ಎಂದು ಹೇಳಿದ್ದಾರೆ.

ಮೈಕ್ರೋ ಫೈನಾನ್ಸ್ ನಿಯಂತ್ರಿಸುವ ಕರಡು ಮಸೂದೆಯಲ್ಲಿನ ಅಂಶಗಳು ಹಾಗೂ ಆರ್​ಬಿಐ ಮಾನದಂಡ, ಕಾನೂನುಗಳ ಮಧ್ಯೆ ಸಂಘರ್ಷ ಉಂಟಾಗದಂತೆ ಅಧಿಕಾರಿಗಳ ತಂಡ ಪರಾಮರ್ಶೆ ನಡೆಸಲಿದೆ‌. ಜೊತೆಗೆ, ಒಟಿಎಸ್ ನೀಡುವ ಸಂಬಂಧ ಎದುರಾಗಬಹುದಾದ ತಾಂತ್ರಿಕ ಸಮಸ್ಯೆಗಳ ಬಗ್ಗೆ, ಕಾರ್ಯವ್ಯಾಪ್ತಿ ಬಗ್ಗೆ ಹಿರಿಯ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿ ವರದಿ ನೀಡಲಿದೆ. ‌ಅದರಂತೆ ಕರಡು ಮಸೂದೆಯಲ್ಲಿನ ಅಂಶಗಳಿಗೆ ಕೆಲ ತಿದ್ದುಪಡಿ ತಂದು ಜಾರಿಗೊಳಿಸಲು ಮುಂದಾಗಿದೆ.

ಇದನ್ನೂ ಓದಿ:ನಾಮಫಲಕದಲ್ಲಿ‌ ಶೇ.60ರಷ್ಟು ಕನ್ನಡ ಬಳಕೆ; ಕಠಿಣ ನಿಯಮ ರೂಪಿಸಲು ಸಚಿವ ತಂಗಡಗಿ ಸೂಚನೆ

ABOUT THE AUTHOR

...view details