ಬೆಂಗಳೂರು:ಸಕ್ಕರೆ ನಾಡುಮಂಡ್ಯ ಜಿಲ್ಲೆಯ ವಿ.ಸಿ ಫಾರಂನಲ್ಲಿ ನೂತನ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ (ಸಮಗ್ರ) ಸ್ಥಾಪನೆಗೆ ರಾಜ್ಯ ಸರ್ಕಾರ ತಾತ್ವಿಕ ಅನುಮೋದನೆ ನೀಡಿ ಆದೇಶ ಹೊರಡಿಸಿದ್ದು, ಮಂಡ್ಯ ಜಿಲ್ಲೆ ಸೇರಿದಂತೆ ಮೈಸೂರು ವಿಭಾಗದ ಜನರ ಬಹುದಿನಗಳ ಕನಸು ಈಡೇರಿದಂತಾಗಿದೆ.
2024-25ನೇ ಸಾಲಿನ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮಂಡ್ಯ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಯ ಸಾಧ್ಯತೆ ಕುರಿತು ಪರಿಶೀಲನೆಗೆ ಸಮಿತಿ ರಚಿಸುವುದಾಗಿ ಘೋಷಣೆ ಮಾಡಿದ ಒಂದು ವರ್ಷದೊಳಗೆ ವಿವಿ ಪ್ರಾರಂಭಕ್ಕೆ ಆದೇಶ ಹೊರಬಿದ್ದಿದೆ.
ಇದಕ್ಕಾಗಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಸಂಪುಟದ ಸಹೊದ್ಯೋಗಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.
ಬಜೆಟ್ ಘೋಷಣೆಯಂತೆ ಬೆಂಗಳೂರು ಕೃಷಿ ವಿ.ವಿಯ ವಿಶ್ರಾಂತಿ ಕುಲಪತಿ ಡಾ. ರಾಜೇಂದ್ರಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚಿಸಲಾಗಿತ್ತು. ಈ ತಂಡವು ಹಲವು ಬಾರಿ ಸ್ಥಳ ಪರಿಶೀಲಿಸಿ, ಸಭೆಗಳನ್ನು ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಸಮಿತಿಯ ಅಭಿಪ್ರಾಯವನ್ನು ಕಳೆದ ವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಂದಿಟ್ಟು ಅನುಮೋದನೆ ಪಡೆದ ನಂತರ ಸರ್ಕಾರ ಮಂಡ್ಯ ಜಿಲ್ಲೆಯ ವಿಶ್ವೇಶ್ವರಯ್ಯ ಕಾಲುವೆ ಫಾರಂನಲ್ಲಿ ನೂತನ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ (ಸಮಗ್ರ) ಸ್ಥಾಪಿಸಲು ತಾತ್ವಿಕ ಅನುಮೋದನೆ ನೀಡಿದೆ.