ಬೆಂಗಳೂರು: ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಮೇಯರ್- ಉಪ ಮೇಯರ್ ಚುನಾವಣಾ ಪ್ರಕ್ರಿಯೆ ಮುಂದೂಡಿರುವುದು ಸರಿಯಲ್ಲ ಎಂದು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಆಕ್ಷೇಪಿಸಿದ್ದಾರೆ.
ಇದರ ವಿರುದ್ಧ ಇವತ್ತು ರಾಜ್ಯ ಚುನಾವಣಾಧಿಕಾರಿಗೆ ಇಂದು ದೂರು ಸಲ್ಲಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೇಯರ್, ಉಪ ಮೇಯರ್ ಚುನಾವಣೆಗೆ ನಾವು 24 ಜನ ಮತದಾನ ಮಾಡಿದ್ದೇವೆ. ಅವರು 22 ಜನ ಮತದಾನ ಮಾಡಿದ್ದಾರೆ. ಮೇಯರ್ ಚುನಾವಣೆಯ ಪ್ರಕ್ರಿಯೆ ಪೂರ್ಣಗೊಂಡಿತ್ತು. ಉಪ ಮೇಯರ್ಗೆ ಚುನಾವಣೆ ವೇಳೆ ನಾವು 24 ಜನ ಕೈ ಎತ್ತಿದ್ದೆವು. ಸೋಲು ಖಚಿತವಾದುದನ್ನು ಮನಗಂಡು ಚುನಾವಣೆ ಮುಂದೂಡಲು ಪ್ರಯತ್ನ ಮಾಡಿದ್ದಾರೆ ಎಂದು ಟೀಕಿಸಿದರು.
ಇದರ ವಿರುದ್ಧ ಇವತ್ತು ರಾಜ್ಯ ಚುನಾವಣಾಧಿಕಾರಿಯನ್ನು ಭೇಟಿ ಮಾಡಿ ನ್ಯಾಯ ಕೊಡಲು ಮನವಿ ಸಲ್ಲಿಸಿದ್ದೇವೆ. ನಗರಾಭಿವೃದ್ಧಿ ಇಲಾಖೆ ಜೊತೆ ಮಾತನಾಡಿ ನಿರ್ಣಯ ತೆಗೆದುಕೊಳ್ಳಲಿದ್ದೇವೆ ಎಂದು ಹೇಳಿದರು. ವಿಜಯಪುರ ಪಾಲಿಕೆ ಉಪ ಮೇಯರ್ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಸೋಲು ಗ್ಯಾರಂಟಿ ಎಂದು ಖಚಿತವಾದ ತಕ್ಷಣ ಚುನಾವಣೆ ಮುಂದೂಡಲು ನೆಪ ತೆಗೆದರು. ಚುನಾವಣೆ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ ಎಂದು ಚುನಾವಣಾಧಿಕಾರಿ ಮೇಲೆ ಒತ್ತಡ ಹೇರಿ ಸಚಿವ ಎಂ.ಬಿ.ಪಾಟೀಲರು ಚುನಾವಣೆ ಮುಂದೂಡಿಸಿದ್ದಾರೆ. ಕಾಂಗ್ರೆಸ್ಸಿನ ಎಲ್ಲ ಸದಸ್ಯರು ಗಲಾಟೆ ಮಾಡಿದ್ದಾರೆ ಎಂದು ದೂರಿದರು.
ಮಲ್ಲಿಕಾರ್ಜುನ ಖರ್ಗೆಯವರು, ಅಮಿತ್ ಶಾ ಅವರ ವಿರುದ್ಧ ವ್ಯಂಗ್ಯವಾಗಿ ಟೀಕಿಸಿದ್ದನ್ನು ಖಂಡಿಸಿದ ಅವರು, ಹಿಂದೂ ಧರ್ಮ ಎಂದೊಡನೆ ಇಷ್ಟೊಂದು ಕನಿಷ್ಠವಾಗಿ ಮಾತನಾಡುವುದು ಸರಿಯಲ್ಲ. ಅಮಿತ್ ಶಾ ಅವರು ಮಹಾಕುಂಭ ಮೇಳಕ್ಕೆ ಹೋಗಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ಮೆಕ್ಕಾ, ಮದೀನಾಕ್ಕೆ ಹೋದರೆ ಸ್ವರ್ಗ ಸಿಗುತ್ತದೆಯೇ? ಬಡತನ ಹೋಗುತ್ತದೆಯೇ ಎಂದು ಹೇಳುವ ಧೈರ್ಯ ಮಲ್ಲಿಕಾರ್ಜುನ ಖರ್ಗೆಯವರಿಗೆ ಇದೆಯೇ ಎಂದು ಪ್ರಶ್ನಿಸಿದರು.
ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಮಾತನಾಡುವುದು ಕಾಂಗ್ರೆಸ್ಸಿಗೆ ಅಭ್ಯಾಸ, ಹವ್ಯಾಸವಾಗಿದೆ. ಮಲ್ಲಿಕಾರ್ಜುನ ಖರ್ಗೆಯವರು ಕೂಡಲೇ ಕ್ಷಮೆ ಯಾಚಿಸಬೇಕು. ಕಾಂಗ್ರೆಸ್ಸಿನ ಅಖಿಲ ಭಾರತ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.