ಹುಬ್ಬಳ್ಳಿ:ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಗುಡ್ಡದ ರೇಣುಕಾದೇವಿ ಜಾತ್ರೆಗೆ ಹೋಗುವ ಭಕ್ತರು ಹಾಗೂ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಫೆಬ್ರವರಿ 9 ರಿಂದ 28 ರವರೆಗೆ ಹುಬ್ಬಳ್ಳಿ ಹಾಗೂ ನವಲಗುಂದದಿಂದ ಯಲ್ಲಮ್ಮನಗುಡ್ಡಕ್ಕೆ ನೇರವಾಗಿ ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ ತಿಳಿಸಿದ್ದಾರೆ.
ಭಾರತ ಹುಣ್ಣಿಮೆ ಪ್ರಯುಕ್ತ ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿರುವ ರೇಣುಕಾ ದೇವಿ ಜಾತ್ರೆಯು ವೈಭವದಿಂದ ಜರುಗಲಿದೆ. ಫೆ. 12ರಂದು (ಬುಧವಾರ) ಹುಣ್ಣಿಮೆ ದಿನ ರಥೋತ್ಸವ ನಡೆಯಲಿದೆ. ಈ ಜಾತ್ರೆಗೆ ಹುಬ್ಬಳ್ಳಿ- ಧಾರವಾಡ ಅವಳಿನಗರ, ನವಲಗುಂದ ಹಾಗೂ ಸುತ್ತಮುತ್ತಲಿನ ಊರುಗಳು, ಅಕ್ಕ ಪಕ್ಕದ ಜಿಲ್ಲೆಗಳು ಸೇರಿದಂತೆ ರಾಜ್ಯಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ. ರಥೋತ್ಸವದ ಮುನ್ನಾ ದಿನಗಳಿಂದ ಆರಂಭವಾಗಿ ನಂತರದಲ್ಲಿ ದೇವಿಯ ವಾರದ ದಿನಗಳಾದ ಮಂಗಳವಾರ ಮತ್ತು ಶುಕ್ರವಾರಗದಂದು ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರದ ದರ್ಶನಕ್ಕೆ ಆಗಮಿಸುವ ನಿರೀಕ್ಷೆ ಇದೆ.
ಭಕ್ತರಿಗೆ ಜಾತ್ರೆಗೆ ಹೋಗಿ ಬರಲು ಅನುಕೂಲವಾಗುವಂತೆ ಫೆ.9 ರಿಂದ 14 ರವರೆಗೆ ಹಾಗೂ ನಂತರದಲ್ಲಿ ಪ್ರತಿ ಮಂಗಳವಾರ ಮತ್ತು ಶುಕ್ರವಾರಗಳಂದು ಫೆ.18, 21, 25 ಹಾಗೂ 28 ರಂದು ಹುಬ್ಬಳ್ಳಿ ಮತ್ತು ನವಲಗುಂದದಿಂದ ಯಲ್ಲಮ್ಮನ ಗುಡ್ಡಕ್ಕೆ ನೇರವಾಗಿ ಜಾತ್ರೆ ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ 60 ಬಸ್ಗಳು, 150 ಚಾಲಕರು - ನಿರ್ವಾಹಕರು, ಮೇಲ್ವಿಚಾರಣೆಗಾಗಿ 8 ಅಧಿಕಾರಿಗಳು ಹಾಗೂ 22 ಸಿಬ್ಬಂದಿಯನ್ನು ನಿಯೋಜಿಲಾಗಿದೆ. ಪ್ರಯಾಣಿಕರ ದಟ್ಟಣೆಗೆ ತಕ್ಕಂತೆ ಬಸ್ಸುಗಳನ್ನು ಹೆಚ್ಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಬಸ್ ಹೊರಡುವ ಸ್ಥಳ ಹಾಗೂ ಸಂಚಾರ ಮಾರ್ಗ:ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣ ಮತ್ತು ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಜಾತ್ರೆ ವಿಶೇಷ ಬಸ್ಸುಗಳು ಹೊರಡುತ್ತವೆ. ಹೊಸೂರು ಬಸ್ ನಿಲ್ದಾಣದಿಂದ ಹೊರಡುವ ಬಸ್ಗಳು ನವನಗರ, ಧಾರವಾಡ, ಸವದತ್ತಿ ಮಾರ್ಗವಾಗಿ ಸಂಚರಿಸುತ್ತವೆ.