ಹುಬ್ಬಳ್ಳಿ:ವಾಯವ್ಯ ಸಾರಿಗೆ ಸಂಸ್ಥೆಯ ಚಾಲಕ ಕಮ್ ನಿರ್ವಾಹಕರೊಬ್ಬರು ಬಸ್ಸಿನಲ್ಲಿ ಬಿಟ್ಟು ಹೋದ ಒಡವೆ, ಹಣ ಹಾಗೂ ಪ್ರಮುಖ ದಾಖಲೆಗಳಿದ್ದ ಬ್ಯಾಗನ್ನು ಪ್ರಯಾಣಿಕರಿಗೆ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಗೋಂದಿ ಚಟ್ನಹಳ್ಳಿ ನಿವಾಸಿ ಸಾವಿತ್ರಮ್ಮ ಎಂಬುವರು ಶುಕ್ರವಾರ ಮಧ್ಯಾಹ್ನ ತಮ್ಮ ಮಗಳು ಹಾಗೂ ಮೊಮ್ಮಗಳೊಂದಿಗೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಗ್ರಾಮಾಂತರ 3ನೇ ಘಟಕದ ಕೆ ಎ 25 ಎಫ್ 3127 ಬಸ್ಸಿನಲ್ಲಿ ಬೆಳಗಾವಿಯಿಂದ ಹುಬ್ಬಳ್ಳಿಗೆ ಪ್ರಯಾಣ ಮಾಡಿದ್ದರು. ಗೋಕುಲ ರಸ್ತೆ ಬಸ್ ನಿಲ್ದಾಣದಲ್ಲಿ ಇಳಿಯುವಾಗ ಕೈಯಲ್ಲಿದ್ದ ಬ್ಯಾಗನ್ನು ಬಸ್ಸಿನಲ್ಲಿ ಮರೆತು, ನಂತರ ಮತ್ತೊಂದು ಬಸ್ಸಿನಲ್ಲಿ ಹುಬ್ಬಳ್ಳಿಯಿಂದ ಲಕ್ಷ್ಮೇಶ್ವರಕ್ಕೆ ಪ್ರಯಾಣ ಬೆಳೆಸಿದ್ದರು.
ಈ ಬಸ್ಸಿನಲ್ಲಿ ಬಿಟ್ಟಿದ್ದ ಬ್ಯಾಕ್ಅನ್ನು ಪ್ರಯಾಣಿಕರೊಬ್ಬರು ತೆಗೆದುಕೊಂಡು ಹೋಗುತ್ತಿರುವುದನ್ನು ಚಾಲಕ ಕಂ ನಿರ್ವಾಹಕ ಸಿರಿಯಮ್ಮನವರ ಗಮನಿಸಿ, ಬಳಿಕ ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ನಂತರ ಬಸ್ ಘಟಕಕ್ಕೆ ತೆರಳಿ ಮೇಲಾಧಿಕಾರಿಗಳ ಸಮಕ್ಷಮದಲ್ಲಿ ಬ್ಯಾಗು ತೆಗೆದು ನೋಡಿದಾಗ ಅದರಲ್ಲಿ 25,000 ನಗದು ಹಣ, ಎರಡು ಜೊತೆ ಬೆಳ್ಳಿಯ ಕಾಲು ಚೈನು, ಎಟಿಎಂ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಇರುವುದು ಕಂಡುಬಂದಿದೆ. ಆಧಾರ್ ಕಾರ್ಡ್ನಲ್ಲಿರುವ ದೂರವಾಣಿ ಸಂಖ್ಯೆಯ ಮೂಲಕ ವಾರಸುದಾರರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ನಂತರ ವಿಭಾಗಿಯ ನಿಯಂತ್ರಣಾಧಿಕಾರಿ, ವಿಭಾಗಿಯ ಸಂಚಾರ ಅಧಿಕಾರಿ ಹಾಗೂ ಘಟಕ ವ್ಯವಸ್ಥಾಪಕರ ಸಮಕ್ಷಮದಲ್ಲಿ ನಿರ್ವಾಹಕರ ಮೂಲಕ ಬ್ಯಾಗನ್ನು ವಾರಸುದಾರರಿಗೆ ಹಿಂದಿರುಗಿಸಲಾಯಿತು.