ಬೆಂಗಳೂರು:ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಡಿಯಲ್ಲಿ (ಬಿಎಂಸಿಆರ್‌ಐ) ಕಾರ್ಯನಿರ್ವಹಿಸುತ್ತಿರುವ ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿ.ಎಂ.ಎಸ್.ಎಸ್.ವೈ) ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೇಂದ್ರೀಕೃತ ಎಸಿ ಹಾಳಾಗಿರುವುದು ವಿದ್ಯುತ್ ವೋಲ್ಟೇಜ್ ಏರಿಳಿತ ಸಮಸ್ಯೆಯಿಂದಲ್ಲ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಸ್ಪಷ್ಟಪಡಿಸಿದೆ.
''ಬಿಎಂಸಿಆರ್‌ಐಯಲ್ಲಿ ವಿದ್ಯುತ್ ವೋಲ್ಟೇಜ್ ಏರಿಳಿತದಿಂದ ಕೇಂದ್ರೀಕೃತ ಎಸಿ ಹಾನಿಗೊಳಗಾಗಿ ಶಸ್ತ್ರ ಚಿಕಿತ್ಸೆಗೆ ಸಮಸ್ಯೆಯಾಗಿದೆ ಎಂದು ಮಾಧ್ಯಮಗಳಲ್ಲಿ ಬುಧವಾರ ವರದಿಯಾಗಿದ್ದು, ಆಸ್ಪತ್ರೆಯ ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ ಹಾನಿಗೊಂಡಿರುವುದು ವಿದ್ಯುತ್ ವೋಲ್ಟೇಜ್ ಅಥವಾ ವಿದ್ಯುತ್ ಸಮಸ್ಯೆಯಿಂದಲ್ಲ'' ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಬಿ.ಎಂ.ಅರ್.ಸಿ.ಐ ಹೆಚ್.ಟಿ ಸ್ಥಾವರವಾಗಿದ್ದು, ಈ ಸ್ಥಾವರಕ್ಕೆ ಎಫ್ - 4 ವಿ.ಎಚ್.ಯು.ಎಸ್.ಎಸ್. ಫೀಡರ್ನಿಂದ ವಿದ್ಯುತ್ ಪೂರೈಸಲಾಗುತ್ತಿದೆ. ಈ ಸ್ಥಾವರದ ವಿದ್ಯುತ್ ನಿರ್ವಹಣೆಗೆ ಆಸ್ಪತ್ರೆ ಆಡಳಿತ ಮಂಡಳಿಯು ಹೊರ ಗುತ್ತಿಗೆ ನೀಡಿದ್ದು, ಇದಕ್ಕೆ ಸಂಬಂಧಪಟ್ಟ ಸಿಬ್ಬಂದಿಯಿಂದ ಮಾಹಿತಿ ಪಡೆಯಲಾಗಿದೆ. ನಾಲ್ಕು ದಿನಗಳ ಹಿಂದೆ ಆಸ್ಪತ್ರೆ ಕಟ್ಟಡದ ಹವಾನಿಯಂತ್ರಣ ಚಿಲ್ಲರ್ ವೈಂಡಿಂಗ್ ಸುಟ್ಟು ಹೋಗಿದ್ದು, ಅದನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಹಾಗೆಯೇ, ಇದು ನಮ್ಮ ಆಂತರಿಕ ಸಮಸ್ಯೆಯೆಂದು ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಬೆಸ್ಕಾಂ ಹೇಳಿದೆ.
ಈ ಫೀಡರ್ ಮೂಲಕ ಆಸ್ಪತ್ರೆಗೆ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಅಥವಾ ವೋಲ್ಟೇಜ್ ಏರಿಳಿತವಾಗಲಿ ಕಂಡು ಬಂದಿರುವುದಿಲ್ಲ. ಹಾಗೆಯೇ, ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ಆಸ್ಪತ್ರೆಯಿಂದ ಯಾವುದೇ ದೂರು ಬಂದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.
ಇದನ್ನೂ ಓದಿ:ಬಳ್ಳಾರಿ ಜಿಲ್ಲಾಸ್ಪತ್ರೆ ವೈದ್ಯರಿಂದ ಕರ್ತವ್ಯಲೋಪ ಆಗಿಲ್ಲ: ಸಚಿವ ದಿನೇಶ್ ಗುಂಡೂರಾವ್