ಬೆಂಗಳೂರು:ಮುಡಾ ಅಕ್ರಮ ಆರೋಪ ಸಂಬಂಧನಾಳೆಯಿಂದ ಬಿಜೆಪಿ ಜೆಡಿಎಸ್ ಹಮ್ಮಿಕೊಂಡಿರುವ ಪಾದಯಾತ್ರೆಯ ರೂಪುರೇಷೆಗಳ ಕುರಿತು ಇದುವರೆಗೂ ಯಾವುದೇ ಮಾಹಿತಿಯಿಲ್ಲ. ಜೊತೆಗೆ ಪಾದಯಾತ್ರೆಗೆ ನನ್ನ ಮಟ್ಟದಲ್ಲಿ ಯಾರು ಬಂದು ಇದುವರೆಗೂ ಅನುಮತಿ ಕೇಳಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಬಿಜೆಪಿ ಜೆಡಿಎಸ್ ಪಾದಯಾತ್ರೆಯ ಕುರಿತು ಪ್ರತಿಕ್ರಿಯೆ ನೀಡಿದ ಬೆಂಗಳೂರು ಪೊಲೀಸ್ ಆಯುಕ್ತರು, ರಾಜ್ಯ ಹೈಕೋರ್ಟಿನ ಆದೇಶದನ್ವಯ ನಗರದಲ್ಲಿ ಪ್ರತಿಭಟನೆ, ರ್‍ಯಾಲಿ, ಪಾದಯಾತ್ರೆಗೆ ಅನುಮತಿ ಇಲ್ಲ. ಆದರೂ ಸಹ ಪೂರಕವಾಗಿ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.
ಪಾದಯಾತ್ರೆಗೆ ನನ್ನ ಮಟ್ಟದಲ್ಲಿ ಯಾರು ಬಂದು ಇದುವರೆಗೂ ಅನುಮತಿ ಕೇಳಿಲ್ಲ. ಪ್ರತಿಭಟನೆಗೆ ಬೆಂಗಳೂರಿನಲ್ಲಿ ಯಾವುದೇ ಅವಕಾಶವಿಲ್ಲ. ಎಲ್ಲಿಂದ, ಯಾವ ರೀತಿ ಪಾದಯಾತ್ರೆ ಮಾಡುತ್ತಾರೆ ಎಂಬುದು ಇನ್ನೂ ಸಹ ಗೊತ್ತಿಲ್ಲ. ನಾವು ಪೂರಕವಾದ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ದಲ್ಲಿನ ಅಕ್ರಮ ಆರೋಪ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ಆಗಸ್ಟ್ 3 ರಿಂದ ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಪಾದಯಾತ್ರೆಗೆ ಸರ್ಕಾರದಿಂದ ಅನುಮತಿ ನೀಡುವುದಿಲ್ಲ, ಆದರೆ ಪಾದಯಾತ್ರೆಗೆ ಯಾವುದೇ ಅಡ್ಡಿ ಮಾಡುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಈ ಮೊದಲು ಸ್ಪಷ್ಟಪಡಿಸಿದ್ದರು.