ಬೆಂಗಳೂರು:''ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ನಿಂದ ಯಾರೇ ಸ್ಪರ್ಧೆ ಮಾಡಿದರೂ ಗೆಲುವು ಮಾತ್ರ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಯದ್ದೇ ಆಗಿರಲಿದೆ. ಮೂರು ಕ್ಷೇತ್ರದ ಉಪ ಚುನಾವಣೆಯಲ್ಲೂ ಮೈತ್ರಿಗೆ ಗೆಲುವಾಗಲಿದೆ. ಶೀಘ್ರದಲ್ಲಿಯೇ ಕೋರ್ ಕಮಿಟಿ ಸಭೆ ಕರೆದು ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.
ಶಿವಾನಂದ ವೃತ್ತದಲ್ಲಿರುವ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಚನ್ನಪಟ್ಟಣದಿಂದ ಕಾಂಗ್ರೆಸ್ ಅಭ್ಯರ್ಥಿ ಯಾರು ಆಗ್ತಾರೆ ಎಂಬುದು ಮುಖ್ಯ ಅಲ್ಲ ಯಾರೇ ಅಭ್ಯರ್ಥಿ ಆದರೂ, ನಾವು ಮತ್ತು ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸಿ ಗೆಲ್ಲುತ್ತೇವೆ. ಬೆಂಗಳೂರು ಗ್ರಾಮಾಂತರದಲ್ಲಿ ಏನು ಫಲಿತಾಂಶ ಬಂದಿದೆ ಎಂದು ಗೊತ್ತಿದೆ. ಚನ್ನಪಟ್ಟಣ, ಶಿಗ್ಗಾಂವ್, ಸಂಡೂರು ಎಲ್ಲವನ್ನೂ ಗೆಲ್ಲುತ್ತೇವೆ. ನಾವು ಶೀಘ್ರದಲ್ಲೇ ಕೋರ್ ಕಮಿಟಿ ಸಭೆಯನ್ನು ಕರೆಯುತ್ತಿದ್ದೇನೆ. ಅಲ್ಲಿ ಅಭ್ಯರ್ಥಿಗಳ ಆಯ್ಕೆ ಮತ್ತು ಸರ್ಕಾರದ ವಿರುದ್ಧ ಹೋರಾಟದ ಬಗ್ಗೆ ಚರ್ಚೆ ಮಾಡುತ್ತೇವೆ'' ಎಂದರು.
''ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ವಿರುದ್ಧ ನಾವು ಹೋರಾಟ ಕೈ ಗೆತ್ತಿಕೊಂಡಿದ್ದೇವೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿಯನ್ನು ಹೊರ ರಾಜ್ಯಗಳಿಗೆ ತಗೊಂಡು ಹೋಗಿದ್ದಾರೆ. ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ. ಆದರೆ, ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರಲ್ಲ. ಎಸ್ಐಟಿ ಮಾಜಿ ಮಂತ್ರಿಯನ್ನು ನೋಟಿಸ್ ಕೊಟ್ಟು ಕರದು ತನಿಖೆ ಮಾಡುತ್ತಿಲ್ಲ ತ್ಯಾಪೆ ಹಚ್ಚಿ ಸರ್ಕಾರವನ್ನು ಬಚಾವ್ ಮಾಡುವ ಕೆಲಸ ಅಧಿಕಾರಿಗಳು ಮಾಡಿದ್ದಾರೆ. ಇವತ್ತು ಅದಕ್ಕಾಗಿ ನಮ್ಮ ಕಾರ್ಯಕರ್ತರು ಎಲ್ಲ ಕಡೆ ಪ್ರತಿಭಟನೆ ಮಾಡುತ್ತಿದ್ದಾರೆ'' ಎಂದು ಹೇಳಿದರು.
''ದಿನೇ ದಿನೆ ಬೆಲೆ ಏರಿಕೆ ಮಾಡುತ್ತಿದ್ದಾರೆ, ಹಾಲಿನ ದರ ಜೊತೆಗೆ ತೈಲ ಬೆಲೆ ಇದರ ಜೊತೆಗೆ ಹಾಸ್ಯಾಸ್ಪದ ಅಂದರೆ ಮೂರು ಡಿಸಿಎಂ ಚರ್ಚೆ ಡಿಕೆ ಶಿವಕುಮಾರ್ ಅವರನ್ನು ಬಲಿಯಾಗಿಸಬೇಕು ಎಂದು ಸಿಎಂ ಡಿಸಿಎಂ ಹುದ್ದೆಗಳ ಕುರಿತು ಸಚಿವರ ಮೂಲಕ ಎತ್ತಿಸಿದ್ದಾರೆ ಇವಾಗ ಸಿದ್ದರಾಮಯ್ಯ ಅವರ ಬುಡಕ್ಕೆ ಬಂದಿದ್ದೀಯಲ್ಲ? ಸಿದ್ದರಾಮಯ್ಯ ಎಷ್ಟು ದಿನ ಸಿಎಂ ಆಗಿರ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ರಾಜ್ಯದ ಜನರ ಅಭಿವೃದ್ಧಿ ಸಮಸ್ಯೆ ಕೇಳಬೇಕಲ್ಲ. ನಾವು ಇದನ್ನೇ ಕೇಳಿದರೆ ಸಿಎಂ ಉಡಾಫೆ ಉತ್ತರ ಕೊಡುತ್ತಿದ್ದಾರೆ. ಈ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರು ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಹಾದಿ ಬೀದಿಯಲ್ಲಿ ಸಿಎಂ, ಡಿಸಿಎಂ ಸಚಿವರು ಹೊಡೆದಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ನಮ್ಮ ಮುಂದೆ ಇರೋದು ಹೋರಾಟದ ದಿನಗಳು ಮುಂದೆ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತೇವೆ'' ಎಂದರು.
''ಸತ್ಯನಾರಾಯಣ ಅವರು ಬಹಳ ಗಂಭೀರವಾದ ಆರೋಪ ಮಾಡಿದ್ದಾರೆ. ಆದರೆ, ಇವತ್ತಿನವರೆಗೂ ನಾಗೇಂದ್ರ ಅವರನ್ನು ಕರೆದು ಎಸ್ಐಟಿ ವಿಚಾರಣೆ ಮಾಡುವ ಧೈರ್ಯ ತೋರಿಸಿಲ್ಲ. ನಿನ್ನೆ ಕೋರ್ಟ್ ಕೂಡ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಒಂದೇ ವರ್ಷದಲ್ಲಿ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ನಿನ್ನೆ ಸ್ವಾಮೀಜಿ ಹೇಳಿಕೆ ಕೊಟ್ಟಿದ್ದಾರೆ. ಅದಕ್ಕೆ ಪ್ರತ್ಯುತ್ತರವಾಗಿ ಸಚಿವರು ಉತ್ತರ ಕೊಟ್ಟಿದ್ದಾರೆ. ಜನರ ಪಾಲಿಗೆ ಸರ್ಕಾರ ಬದುಕಿದೆಯಾ ಎಂಬ ಪ್ರಶ್ನೆಯನ್ನು ಜನರು ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಗೂ ಮೊದಲು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಒಟ್ಟಿಗೆ ಕಾಣೋದು ಏನು? ಇಬ್ಬರು ತಿಂಡಿ ತಿನ್ನಿಸೋದು ಏನು? ಹೆಗಲ ಮೇಲೆ ಕೈ ಹಾಕೋದು ಏನು? ಬರುವ ದಿನಗಳಲ್ಲಿ ಇನ್ನೂ ಏನೇನು ಆಗುತ್ತೋ ಕಾದು ನೋಡೋಣ'' ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ:'ನನ್ನ ಕುಟುಂಬದ ಯಾವುದೇ ಸದಸ್ಯರು ಚುನಾವಣಾ ರಾಜಕೀಯಕ್ಕೆ ಬರುವ ಪ್ರಶ್ನೆಯೇ ಇಲ್ಲ': ಡಿಕೆಶಿ - DK Shivakumar