ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 9 ಮಸೂದೆಗಳಿಗೆ ಅನುಮೋದನೆ ನೀಡಲಾಗಿದೆ. ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವ ತಿದ್ದುಪಡಿ ವಿಧೇಯಕಕ್ಕೂ ಸಂಪುಟದಲ್ಲಿ ಅಸ್ತು ನೀಡಲಾಗಿದೆ.
ಕರ್ನಾಟಕ ಕಾರ್ಮಿಕರ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ, 2024, ಕರ್ನಾಟಕ ಅಂತರ್ಜಲ (ನಿಯಮಾವಳಿ ಮತ್ತು ಅಭಿವೃದ್ಧಿ ಮತ್ತು ನಿರ್ವಹಣಾ ನಿಯಂತ್ರಣ) (ತಿದ್ದುಪಡಿ) ವಿಧೇಯಕ, ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ, ವಿಧೇಯಕ, 2024, ಚಾಣಕ್ಯ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ, 2024, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ, 2024, ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ, 2024, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (2ನೇ ತಿದ್ದುಪಡಿ) 2024, ಕರ್ನಾಟಕ ಪ್ರವಾಸೋದ್ಯಮ ರೋಪ್‌ವೇಸ್ ವಿಧೇಯಕ 2024, Karnataka State Allied and Healthcare Professions Council ನಿಯಮಗಳು 2024"ಗೆ ಅನುಮೋದನೆ ನೀಡಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಅಸುರಕ್ಷಿತ ಕೊಳವೆ ಬಾವಿ ನಿಯಂತ್ರಣ ಮಸೂದೆ:ಕರ್ನಾಟಕ ಅಂತರ್ಜಲ (ನಿಯಮಾವಳಿ ಮತ್ತು ಅಭಿವೃದ್ಧಿ ಮತ್ತು ನಿರ್ವಹಣಾ ನಿಯಂತ್ರಣ) (ತಿದ್ದುಪಡಿ) ವಿಧೇಯಕ ಮಂಡಿಸಲು ಸಂಪುಟ ಸಭೆ ಅನುಮೋದನೆ ನೀಡಿದೆ. ಕಾರ್ಯನಿರತವಲ್ಲದ ಅಥವಾ ಸ್ಥಗಿತಗೊಂಡಿರುವ ಕೊಳವೆ ಬಾವಿಗಳಲ್ಲಿ ಮಕ್ಕಳು ಬಿದ್ದು ಅಪಘಾತಕ್ಕೀಡಾಗುವುದನ್ನು ತಪ್ಪಿಸಲು ಈ ವಿಧೇಯಕ ತರಲಾಗುತ್ತಿದೆ. ಜಮೀನು ಮಾಲೀಕರು, ಏಜೆನ್ಸಿಗಳು ಕೊಳವೆ ಬಾವಿಗೆ ಅಗತ್ಯ ಸುರಕ್ಷತಾ ಕ್ರಮ ಉಲ್ಲಂಘಿಸಿದರೆ ಗರಿಷ್ಟ 1 ವರ್ಷ ಶಿಕ್ಷೆ ಹಾಗೂ 20,000 ರೂ. ದಂಡ ವಿಧಿಸುವ ಕಾನೂನು ಇದಾಗಿರಲಿದೆ.
ರಾಜ್ಯಪಾಲರ ಅಧಿಕಾರ ಮೊಟಕು:ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ, 2024 ಮಂಡನೆಗೆ ಸಂಪುಟ ಸಭೆ ಸಮ್ಮತಿ ಸೂಚಿಸಿದೆ. ಈ ವಿಧೇಯಕದಲ್ಲಿ ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ. ಪ್ರಸ್ತುತ ವಿವಿಯಲ್ಲಿ ರಾಜ್ಯಪಾಲರು ಕುಲಪತಿ ಆಗಿದ್ದರು. ಈ ವಿಧೇಯಕದಂತೆ ರಾಜ್ಯಪಾಲರ ಬದಲು ವಿವಿಗೆ ಸಿಎಂ ಕುಲಪತಿಗಳಾಗಲಿದ್ದಾರೆ. ಈ ವಿಶ್ವವಿದ್ಯಾಲಯದ ಎಲ್ಲಾ ನೇಮಕಾತಿ, ಆಡಳಿತಾತ್ಮಕ ಅಧಿಕಾರ ಸಿಎಂಗೆ ಇರಲಿದೆ. ಆ ಮೂಲಕ ರಾಜ್ಯಪಾಲರ ಅಧಿಕಾರ ಮೊಟಕು ಗೊಳಿಸಲಾಗಿದೆ. ಇದರಿಂದ ವಿಶ್ವವಿದ್ಯಾಲಯದ ಕಾರ್ಯವೈಖರಿ ಹೆಚ್ಚು ಸಕ್ರಿಯ ವಾಗಲಿದೆ ಹಾಗೂ ಬೇಗ ನಿರ್ಣಯ ಕೈಗೊಳ್ಳಲು ಸಹಕಾರಿಯಾಗಲಿದೆ ಎಂದು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.
ಇದರ ಜೊತೆಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿಗೆ ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿಗೊಳಿಸಿದೆ. ಇದರನ್ವಯ ಕುಲಪತಿಗಳ ಹುದ್ದೆಗೆ ಅಭ್ಯರ್ಥಿಗಳು ಪ್ರಾಧ್ಯಾಪಕ ಹುದ್ದೆಯಲ್ಲಿ ಕನಿಷ್ಠ 10 ಸೇವೆ ಸಲ್ಲಿಸಬೇಕಾಗಿರುತ್ತದೆ.
ಈ ನಿಯಮಗಳನ್ನು ಕಾಯ್ದೆಯಲ್ಲಿ ಅಳವಡಿಸಿಕೊಳ್ಳಲು ತಿದ್ದುಪಡಿಗೆ ಪ್ರಸ್ತಾಪಿಸಲಾಗಿದೆ. ಇದರಿಂದ ಕೆಲವೊಂದು ಪ್ರಕರಣಗಳಿಗೆ ತಿದ್ದುಪಡಿ ಪ್ರಸ್ತಾಪಿಸಲಾಗಿದೆ.
ಚಾಣಕ್ಯ ವಿವಿಗೆ ರಾಜ್ಯ ಸರ್ಕಾರದ ಪ್ರತಿನಿಧಿ:ಚಾಣಕ್ಯ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ ಮಂಡನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. 2021ರಲ್ಲಿ ಚಾಣಕ್ಯ ಖಾಸಗಿ ವಿಶ್ವವಿದ್ಯಾಲಯ ಕಾಯ್ದೆ ಜಾರಿಗೆ ಬಂದಿತ್ತು. 27 ಖಾಸಗಿ ವಿಶ್ವವಿದ್ಯಾಲಯಗಳ ಅಧಿನಿಯಮಗಳಲ್ಲಿ ಪ್ರಬಂಧಕ ಮಂಡಳಿಗಳಲ್ಲಿ ರಾಜ್ಯ ಸರ್ಕಾರದ ಪ್ರಾತಿನಿಧ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಚಾಣಕ್ಯ ಖಾಸಗಿ ವಿವಿ ಕಾಯ್ದೆಯಡಿ ಇದಕ್ಕೆ ಅವಕಾಶ ಇರಲಿಲ್ಲ. ಈ ತಿದ್ದುಪಡಿಯಿಂದ ಇದೇ ಅವಕಾಶವನ್ನು ಚಾಣಕ್ಯ ವಿಶ್ವವಿದ್ಯಾಲಯದ ಪ್ರಬಂಧಕ ಮಂಡಳಿಗೂ ಸಹ ಕಲ್ಪಿಸಲು ತಿದ್ದುಪಡಿಗೆ ಪ್ರಸ್ತಾಪಿಸಲಾಗಿದೆ.
ಕಾರ್ಮಿಕ ಕಲ್ಯಾಣ ನಿಧಿ ವಂತಿಕೆ ಪಾಲು ಹೆಚ್ಚಿಸುವ ಬಿಲ್:ಕರ್ನಾಟಕ ಕಾರ್ಮಿಕರ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ-2024 ಮಂಡನೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಕಲ್ಯಾಣ ನಿಧಿಗೆ ವಂತಿಕೆ ರೂಪದಲ್ಲಿ ಪ್ರಸ್ತುತ ಕಾರ್ಮಿಕರ, ಮಾಲೀಕರ, ಸರ್ಕಾರದಿಂದ ಕ್ರಮ ಪ್ರಕಾರ 20:40:20 ಅನುಪಾತ ಇತ್ತು. ಅದನ್ನು ಬದಲಾಯಿಸಿ ಕಾರ್ಮಿಕ, ಮಾಲೀಕ ಹಾಗೂ ಸರ್ಕಾರದ ವಂತಿಕೆ ಪಾಲನ್ನು 50:100:50ಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಪ್ರಸಕ್ತ 42 ಕೊಟಿ ರೂ. ವಂತಿಕೆ ಸಂಗ್ರಹವಾಗುತ್ತಿದೆ. ಈ ಏರಿಕೆಯಿಂದ ವಾರ್ಷಿಕ 100 ಕೋಟಿ ರೂ.ಗೂ ಹೆಚ್ಚು ವಂತಿಕೆ ಸಂಗ್ರಹವಾಗುವ ಸಾಧ್ಯತೆ ಇದೆ. ಪ್ರತಿ ವರ್ಷ ಈ ವಂತಿಕೆ ಸಂಗ್ರಹ ಮಾಡಲಾಗುತ್ತದೆ.
ಇತರ ಪ್ರಮುಖ ತೀರ್ಮಾನಗಳೇನು?:
- ನಗರ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರೋಗ ಪತ್ತೆ ಮೂಲಸೌಕರ್ಯಕ್ಕಾಗಿ 145.99 ಕೋಟಿ ರೂ. ಅಂದಾಜು ಮೊತ್ತದಲ್ಲಿ ಉಪಕರಣ ಖರೀದಿ, ನಮ್ಮ ಕ್ಲಿನಿಕ್ ಹಾಗೂ ನಗರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಯೋಗಾಲಯ ಹಾಗೂ ಆರೋಗ್ಯ ಸೇವೆ ಬಲಪಡಿಸಲು ಉಪಕರಣ ಖರೀದಿ ಹಾಗೂ 5 ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ 84.88ಕೋಟಿ ರೂ., 72.96 ಕೋಟಿ ರೂ. ವೆಚ್ಚದಲ್ಲಿ ನಮ್ಮ ಕ್ಲೀನಿಕ್‌ಗೆ ಅಗತ್ಯ ವಿರುವ ಔಷಧಿಯನ್ನ PM-abhim ಅನುದಾನದಲ್ಲಿ ಖರೀದಿಗೆ ಆಡಳಿತಾತ್ಮಕ ಅನುಮೋದನೆ.
- Pm abhim ಯೋಜನೆಯಲ್ಲಿ ಚಿಕ್ಕಬಳ್ಳಾಪುರ ನಂದಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಅನುಮೋದನೆ ಯಾಗಿದ್ದ 50 ಹಾಸಿಗೆಯ ತೀವ್ರ ನಿಗಾ ಘಟಕ ಚಿಂತಾಮಣಿ ತಾಲೂಕಿಗೆ ಸ್ಥಳಾಂತರಿಸಿ 16 ಕೋಟಿ ವೆಚ್ಚದ ನಿರ್ಮಾಣ ಆದೇಶಕ್ಕೆ ಘಟನೋತ್ತರ ಅನುಮೋದನೆ.
- ಪಿಎಂ ಅಭಿಮ್-ಯೋಜನೆ ಅಡಿಯಲ್ಲಿ ಒಟ್ಟು 108.36 ಕೋಟಿ ರೂ.ಗಳ ವೆಚ್ಚದಲ್ಲಿ (ಆವರ್ತಕ ವೆಚ್ಚ ರೂ. 98.59 ಕೋಟಿ ಮತು ಅನಾವರ್ತಕ ವೆಚ್ಚ 9.76 ಕೋಟಿ) ಒಟ್ಟು 254 ನಗರ ಆರೋಗ್ಯ ಕ್ಷೇಮಕೇಂದ್ರ - ನಮ್ಮ ಕ್ಲಿನಿಕ್ ಗಳನ್ನು ಉಪಕರಣಗಳೊಂದಿಗೆ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ.
- ಸಿವಿಲ್ ಪ್ರಕ್ರಿಯಾ ಸಂಹಿತೆ, ಅನುಸೂಚಿ-1ರ 19080 ಕೆಲವು ನಿಬಂಧನೆಗಳ ತಿದ್ದುಪಡಿ ಹಾಗೂ The Karnataka Courts Service of Summons/ Notices/ Process/ Documents (Civil Proceedings) by Electronic Mail Rules 2 by Courier Rules, 2023 ಗಳನ್ನು ಒಳಗೊಂಡ 3 ಅಧಿಸೂಚನೆಗಳನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ಈಗಾಗಲೇ 15.03.2024ರಂದು ಹೊರಡಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ.
- ಕಬ್ಬುಬೆಳೆಗಾರರ ಹಿತಕ್ಕಾಗಿ ಸಕ್ಕರೆ ಕಾರ್ಖಾನೆ ಬಳಿ Digital weigh bridgeಗಳನ್ನು ಮೊದಲ ಹಂತದಲ್ಲಿ 11.01ಕೋಟಿ ರೂ. ವೆಚ್ಚದಲ್ಲಿ 15 ಸ್ಥಳಗಳಲ್ಲಿ ನಿರ್ಮಾಣಕ್ಕೆ ಅಸ್ತು.
- ಉಪನಗರ ರೈಲು( Sub Urban Rail)ಯೋಜನೆಗೆ ರೈಲು ಬೋಗಿಗಳನ್ನ 4, 300 ಕೋಟಿ ವೆಚ್ಚದಲ್ಲಿ ಕೇಂದ್ರ ಹಾಗು ರಾಜ್ಯ 50-50 ಅನುಪಾತದಲ್ಲಿ ಖರೀದಿಗೆ ಅನುಮೋದನೆ ನೀಡಲಾಗಿದೆ. ಕರ್ನಾಟಕ ಸರ್ಕಾರ ಮತ್ತು ರೈಲ್ವೆ ಮಂತ್ರಾಲಯದ ನಡುವೆ 50:50 ಅನುಪಾತದಲ್ಲಿ ವೆಚ್ಚ ಹಂಚಿಕೆ ಈಕ್ವಿಟಿ ಆಧಾರದ ಮೇಲೆ ರೋಲಿಂಗ್ ಸ್ಟಾಕ್‍ನ ನೇರ ಸಂಗ್ರಹಣೆಯನ್ನು ಕೆ-ರೈಡ್ ಮೂಲಕ ಬೆಂಗಳೂರು ಉಪನಗರ ರೈಲ್ವೆ ಯೋಜನೆಗಾಗಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಹಾಗೂ ಈ ಸಂಗ್ರಹಣೆಗೆ ರಾಜ್ಯ ಸರ್ಕಾರದ ಪಾಲನ್ನು ಭರಿಸಲು ಅಂದರೆ 2135 ಕೋಟಿ ರೂ. (ಒಟ್ಟು 306 ಕೋಚ್‍ಗಳಿಗೆ) ಮುಂದಿನ 5 ವರ್ಷಗಳಲ್ಲಿ ಕೆಆರ್ ಐಡಿಇಗೆ 2135 ಕೋಟಿ ರೂ. ಒದಗಿಸಲು ಸಚಿವ ಸಂಪುಟ ಅನುಮೋದಿಸಿದೆ.
- ಏಷಿಯನ್ ಅಭಿವೃದ್ಧಿ ಬ್ಯಾಂಕ್ (ಎಡಿಬಿ) 2,500 ಕೋಟಿ ರೂ. ಗಳ (ರೂ. 2000 ಕೋಟಿಗಳು ಎಡಿಬಿಯಿಂದ ಮತ್ತು ರೂ. 500 ಕೋಟಿಗಳು ರಾಜ್ಯ ಸರ್ಕಾರದಿಂದ) ಬಾಹ್ಯ ನಿಧಿ ಸಹಯೋಗದೊಂದಿಗೆ ಜುಲೈ 2025ರಿಂದ ಜೂನ್ 2029ರವರೆಗೆ 4 ವರ್ಷಗಳ ಕಾಲಾವಧಿಯಲ್ಲಿ ಅಸ್ತಿತ್ವದಲ್ಲಿರುವ 500 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಪರಿವರ್ತಿಸಲು ಸಚಿವ ಸಂಪುಟ ನಿರ್ಣಯ.
ಮೈಸೂರು ಲಲಿತ್ ಮಹಲ್ ಪ್ಯಾಲೇಸ್ ನಿರ್ವಹಣೆ ಖಾಸಗಿಯವರ ಕೈಗೆ:ಮೈಸೂರು ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್ ಕಟ್ಟಡವು 100 ವರ್ಷ ಹಳೆಯದಾಗಿದ್ದು, ದುಸ್ಥಿತಿಯಲ್ಲಿದ್ದು, ಕಟ್ಟಡಕ್ಕೆ ನವೀಕರಣ ಮತ್ತು ದುರಸ್ಥಿ ಅಗತ್ಯವಿರುವುದರಿಂದ ಲಲಿತ್ ಮಹಲ್ ಪಾರಂಪರಿತ ಕಟ್ಟಡವನ್ನು ಸಂರಕ್ಷಿಸಿ, ಹೆರಿಟೇಜ್ ಮಾದರಿಯಲ್ಲಿ ಉಳಿಸಿಕೊಳ್ಳಲು ಐಷಾರಾಮಿ ಹೋಟೆಲ್‍ನ ಮಾನದಂಡಗಳ ಪ್ರಕಾರ ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್‍ನ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಪಾರದರ್ಶಕ ಟೆಂಡರ್ ಪ್ರಕ್ರಿಯೆ ಮೂಲಕ ಹೋಟೆಲ್ ಆಪರೇಟರನ್ನು ಆಯ್ಕೆ ಮಾಡಲು ಸಂಪುಟ ಸಭೆ ತೀರ್ಮಾನಿಸಿದೆ.
ಪರವಾನಿಗೆ ಆಧಾರದ ಮೇಲೆ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ಲಿಮಿಟೆಡ್, ಇವರನ್ನು ಅನುಮೋದಿತ ಷರತ್ತು ಮತ್ತು ನಿಬಂಧನೆಗಳನ್ವಯ ಅರ್ಹ ಮತ್ತು ಪ್ರತಿಷ್ಠಿತ ಹೋಟೆಲ್ ನಿರ್ವಾಹಕರ ಆಯ್ಕೆಗಾಗಿ ಟೆಂಡರ್ ಕರೆಯಲು ಅನುಮತಿಸಲಾಗುವುದು ಹಾಗೂ ಪರವಾನಿಗೆ ಆಯ್ಕೆಯನ್ನು ಸಾರ್ವಜನಿಕ ಸಂಗ್ರಹಣೆಯಲ್ಲಿ ಕರ್ನಾಟಕ ಪಾರದರ್ಶಕತೆ ಕಾಯಿದೆ 1999 ಮತ್ತು ನಿಯಮಗಳ ಅನ್ವಯ ಕೈಗೊಳ್ಳುವುದು. ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಆಯ್ಕೆಯಾದ ಯಶಸ್ವಿ ಅಪರೇಟರ್ನೊಂದಿಗೆ ಪರವಾನಿಗೆ ಒಪ್ಪಂದಕ್ಕೆ ಪ್ರವೇಶಿಸಲು ಅರಣ್ಯ, ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆಯನ್ನು ಅಧಿಕೃತಗೊಳಿಸಲು ಸಚಿವ ಸಂಪುಟ ನಿರ್ಣಯಿಸಿದೆ. ಸರ್ಕಾರದಿಂದ ಇದರ ನಿರ್ವಹಣೆ ಕಷ್ಟ ಸಾಧ್ಯವಾಗಿದೆ. ಹೀಗಾಗಿ, ಖಾಸಗಿಯವರಿಗೆ ಈ ಜವಾವ್ದಾರಿ ನೀಡಲಾಗುತ್ತಿದೆ.
ಇದನ್ನೂ ಓದಿ:ಬಿಜೆಪಿ ಗುಂಪುಗಾರಿಕೆ ನಮಗೆ ದೌರ್ಬಲ್ಯ, ಕಾಂಗ್ರೆಸ್ಗೆ ನಮ್ಮ ದೌರ್ಬಲ್ಯವೇ ಶಕ್ತಿ, ಅಸ್ತ್ರ: ಡಿ.ವಿ.ಸದಾನಂದ ಗೌಡ