ಮಂಡ್ಯ:ಪಕ್ಷದ ಸಣ್ಣ ಕಾರ್ಯಕರ್ತನಿಗೂ ಅವಕಾಶ ಕೊಟ್ಟು ಎನ್ಡಿಎಯಿಂದ ಅಭ್ಯರ್ಥಿ ಮಾಡಿದರೂ ಕೂಡ ನಮ್ಮ ಸಹಕಾರ ಸದಾಕಾಲ ಪಕ್ಷದ ಪರವಾಗಿ, ಕ್ಷೇತ್ರದ ಜನತೆಯ ಅಭಿವೃದ್ಧಿಯ ಪರವಾಗಿ ಇರುತ್ತದೆ" ಎಂದು ಚನ್ನಪಟ್ಟಣ ಉಪಚುನಾವಣೆಗೆ ಸಂಬಂಧಿಸಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಮಂಡ್ಯದಲ್ಲಿ ಶುಕ್ರವಾರ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ ಅವರು, "ಚನ್ನಪಟ್ಟಣ ಉಪಚುನಾವಣೆ ವಿಚಾರ ಹಲವಾರು ತಿಂಗಳಿನಿಂದ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ನಾಳೆ (ಶನಿವಾರ) ಶಿಗ್ಗಾವಿ ಮತ್ತು ಸಂಡೂರಿಗೆ ಕೂಡ ಜನತಾದಳ ಪಕ್ಷ ಹಾಗೂ ಬಿಜೆಪಿ ಸಮನ್ವಯತೆ ಕಾಪಾಡುವ ಹಿತದೃಷ್ಟಿಯಿಂದ ಭೇಟಿ ಕೊಡುತ್ತಿದ್ದೇನೆ. ಈಗಾಗಲೇ ಪಕ್ಷದ ನಮ್ಮ ನಾಯಕರು ನಮ್ಮ ಕಾರ್ಯಕರ್ತರಿಗೆ ಒಂದು ಸಂದೇಶವನ್ನು ಕೊಡಲು ನನ್ನ ಗಮನಕ್ಕೆ ತಂದಿದ್ದಾರೆ".
"ಚನ್ನಪಟ್ಟಣ ಉಪಚುನಾವಣೆ ವಿಚಾರಕ್ಕೆ ಸಂಬಂಧ ಪಟ್ಟಂತೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಇವೆಲ್ಲದಕ್ಕೂ ಸಂಬಂಧಿಸಿದಂತೆ ನಾನು ಅನೇಕ ಬಾರಿ ತಿಳಿಸಿದ್ದೇನೆ. ರಾಷ್ಟ್ರೀಯ ಮಟ್ಟದ ನಮ್ಮ ನಾಯಕರಾದಂತಹ ಸನ್ಮಾನ್ಯ ಹೆಚ್.ಡಿ. ಕುಮಾರಸ್ವಾಮಿ ಅವರ ಜೊತೆಯಲ್ಲಿ ಸ್ಥಳೀಯವಾಗಿ ರಾಜ್ಯಮಟ್ಟದ ಬಿಜೆಪಿ ನಾಯಕರು ಇರುತ್ತಾರೆ. ಬಹುಶಃ ಹೆಚ್.ಡಿ. ಕುಮಾರಸ್ವಾಮಿ ಅವರು ಬಿ.ಎಸ್. ಯಡಿಯೂರಪ್ಪ ಅವರ ಜೊತೆ, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಜೊತೆ ನಾಳೆ ಸಂಜೆ(ಶನಿವಾರ) ಚರ್ಚೆ ಮಾಡುವ ಸಾಧ್ಯತೆ ಇದೆ. ಎರಡೂ ಪಕ್ಷಗಳಲ್ಲಿ ಒಂದು ಸೂಕ್ತವಾದ ನಿರ್ಣಯವಾದ ಮೇಲೆ ಎನ್ಡಿಎ ಅಂತಿಮ ಅಭ್ಯರ್ಥಿ ಘೋಷಣೆಯಾಗುತ್ತದೆ" ಎಂದು ತಿಳಿಸಿದ್ದಾರೆ.