ಮೈಸೂರು: ''ರಾಜ್ಯ ಸರ್ಕಾರ ಯಾವ ರೀತಿ ನಡೆದುಕೊಳ್ಳುತ್ತಿದೆ ಎಂದು ಜನರಿಗೆ ಗೊತ್ತಾಗುತ್ತಿದೆ. ಸರ್ಕಾರ ಹಗರಣದಲ್ಲಿ ನಿರತವಾಗಿದ್ದು, ಅದನ್ನು ಮುಚ್ಚಿಕೊಳ್ಳಲು ಗಲಾಟೆ ಮಾಡಿಸುತ್ತಿದ್ದಾರೆ'' ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.
ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ನಿಖಿಲ್ ಕುಮಾರಸ್ವಾಮಿ, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ''ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದೆ. ಒಂದು ಸಮುದಾಯದ ಓಲೈಕೆಗಾಗಿ ಇನ್ನೊಂದು ಸಮುದಾಯವನ್ನು ಕೈ ಬಿಟ್ಟಿದ್ದಾರೆ. ಮಂಡ್ಯದ ಜನ ಪ್ರಬುದ್ಧರಿದ್ದಾರೆ. ಎಲ್ಲವನ್ನೂ ಗಮನಿಸುತ್ತಿದ್ದಾರೆ'' ಎಂದು ಹೇಳಿದರು.
''ರಾಜ್ಯದಲ್ಲಿ ಮೂರು ಉಪಚುನಾವಣೆಗಳು ನಡೆಯಲಿವೆ. ಸಂಡೂರು, ಶಿಗ್ಗಾವಿ ಹಾಗೂ ಚನ್ನಪಟ್ಟಣ ಕ್ಷೇತ್ರಗಳ ಜೊತೆಗೆ ಸ್ಥಳೀಯ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯತಿ ಚುನಾವಣೆಗಳು ಅತೀ ಶೀಘ್ರದಲ್ಲಿ ಬರುತ್ತಿದ್ದು, ನಾವು ಪೂರ್ವ ಸಿದ್ಧತೆಗಳನ್ನು ಮಾಡುತ್ತಿದ್ದೇವೆ'' ಎಂದು ತಿಳಿಸಿದರು.
ಚನ್ನಪಟ್ಟಣದಲ್ಲಿ ಎನ್ಡಿಎ ಅಭ್ಯರ್ಥಿ ಕಣಕ್ಕೆ: ಚನ್ನಪಟ್ಟಣ ಉಪ ಚುನಾವಣೆ ವಿಚಾರ ಮಾತನಾಡಿ, ''ಈಗಾಗಲೇ ಸಿ.ಪಿ.ಯೋಗೇಶ್ವರ್ ಕೂಡ ಸಭೆಗಳನ್ನು ಮಾಡುತ್ತಿದ್ದಾರೆ. ನಾವು ಕೂಡ ನಮ್ಮ ಕಾರ್ಯಕರ್ತರ ಜೊತೆ ಸಭೆ ನಡೆಸುತ್ತಿದ್ದೇವೆ. ಒಟ್ಟಾರೆ ಎನ್ಡಿಎ ಅಭ್ಯರ್ಥಿ ಕಣಕ್ಕಿಳಿಯುತ್ತಾರೆ. ನಾನು ನಿಲ್ಲುತ್ತೇನೋ, ಇನ್ಯಾರೋ ನಿಲ್ಲುತ್ತಾರೆ ಎಂಬುದು ಸದ್ಯಕ್ಕೆ ಪ್ರಶ್ನೆ ಇಲ್ಲ. ಇನ್ನೂ ಚುನಾವಣೆ ದಿನಾಂಕವೂ ಪ್ರಕಟವಾಗಿಲ್ಲ. ಕಾರ್ಯಕರ್ತರ ಭಾವನೆಗೆ ತಕ್ಕಂತೆ ಕೆಲಸ ಮಾಡುತ್ತಿದ್ದೇವೆ'' ಎಂದು ತಿಳಿಸಿದರು.