ಕರ್ನಾಟಕ

karnataka

ETV Bharat / state

ಅಂಬಿಗ ಸಮಾಜ ಎಸ್ಟಿಗೆ ಸೇರಿಸಲು ಕೇಂದ್ರಕ್ಕೆ ವರದಿ ಸಲ್ಲಿಕೆ; ಸಚಿವ ಸತೀಶ್​ ಜಾರಕಿಹೊಳಿ - ಸತೀಶ ಜಾರಕಿಹೊಳಿ

ಬೆಳಗಾವಿಯಲ್ಲಿ ನಡೆದ ಶ್ರಿ ನಿಜಶರಣ ಅಂಬಿಗರ ಚೌಡಯ್ಯನವರ 904ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಉದ್ಘಾಟಿಸಿದರು. ಅಂಬಿಗರ ಚೌಡಯ್ಯನವರ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಚಾಲನೆ ನೀಡಿದರು.

DC Nitesh Patila inaugurated
ಶ್ರೀ ಅಂಬಿಗರ ಚೌಡಯ್ಯನವರ ಭಾವಚಿತ್ರದ ಮೆರವಣಿಗೆಗೆ ಡಿಸಿ ನಿತೇಶ್ ಪಾಟೀಲ ಚಾಲನೆ ನೀಡಿದರು.

By ETV Bharat Karnataka Team

Published : Feb 4, 2024, 8:28 PM IST

ಬೆಳಗಾವಿ:ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಸಮಾಜ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಅಭಿವೃದ್ಧಿ ಸಾಧಿಸುವ ಮೂಲಕ ಮುಖ್ಯವಾಹಿನಿಗೆ ಬರಬೇಕು. ಕೋಳಿ ಬೆಸ್ತ ಸಮುದಾಯದ ಬೇಡಿಕೆಯಂತೆ ಪರಿಶಿಷ್ಟ ಪಂಗಡ ಮೀಸಲು ಪಟ್ಟಿಗೆ ಸೇರ್ಪಡೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್​ ಜಾರಕಿಹೊಳಿ ಭರವಸೆ ನೀಡಿದರು.

ಬೆಳಗಾವಿ ನಗರದ ಸರ್ದಾರ ಹೈಸ್ಕೂಲ್ ಮೈದಾನದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಂಬಿಗರ ಚೌಡಯ್ಯನವರ 904ನೇ ಜಯಂತಿ ಆಚರಣೆ ಕಾರ್ಯಕ್ರಮ ಇಷ್ಟು ದೊಡ್ಡ ಮಟ್ಟದಲ್ಲಿ ಆಯೋಜನೆ ಮಾಡಿರುವುದು ಸಂತಸ ತಂದಿದೆ. ಚೌಡಯ್ಯನವರು ನೇರ ಮಾತಿನ ಮೂಲಕ ಸಮಾಜದಲ್ಲಿ ಬದಲಾವಣೆ ತಂದಿದ್ದಾರೆ. ಜಾತಿ, ಮತ ಹೋಗಲಾಡಿಸಿ ಸಮಾನತೆಗೆ ನಿರಂತರ ಶ್ರಮಿಸಿದ್ದರು. ನಿಜಶರಣ ಅಂಬಿಗರ ಚೌಡಯ್ಯನವರ ವಚನ ಸಾಹಿತ್ಯ, ಚಿಂತನೆಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಎಸ್ಟಿ ಮೀಸಲು ಪಟ್ಟಿಗೆ ಸೇರ್ಪಡೆ :ಅಂಬಿಗರ ಚೌಡಯ್ಯನವರ ಸಮಾಜ ಕೋಳಿ, ಬೆಸ್ತ, ಕಬ್ಬಲಿಗ, ಅಂಬಿಗ ಸೇರಿದಂತೆ ವಿವಿಧ ಹೆಸರುಗಳಿಂದ ಗುರುತಿಸಿಕೊಂಡಿದೆ. ಬಹಳ ವರ್ಷಗಳಿಂದ ಸಮಾಜದ ಬೇಡಿಕೆ ಆಗಿರುವ ಪರಿಶಿಷ್ಟ ಪಂಗಡ ಮೀಸಲು ಪಟ್ಟಿಗೆ ಸೇರ್ಪಡೆ ಕುರಿತು ಈಗಾಗಲೇ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಈ ತೀರ್ಮಾನ ಈಗ ಕೇಂದ್ರ ಸರ್ಕಾರದ ಹಂತದಲ್ಲಿದೆ. ನೆಲ ಬೇಟೆಗಾರರು ಹಾಗೂ ಜಲ ಬೇಟೆಗಾರರು ಎರಡು ಒಂದೇ. ಆದರೆ ಕೋಳಿ ಬೆಸ್ತ ಸಮುದಾಯ ಹೆಸರುಗಳಿಂದ ಗುರುತಿಕೊಂಡಿರುವುದರಿಂದ ಎಸ್ಟಿ ಪಟ್ಟಿಗೆ ಸೇರ್ಪಡೆಗೊಂಡಿಲ್ಲ. ಬರುವ ದಿನಗಳಲ್ಲಿ ಎಸ್ಟಿ ಸೇರ್ಪಡೆಗೆ ಚಿಂತನೆ ನಡೆಸಲಾಗುವುದು ಎಂದು ಸತೀಶ್​ ಜಾರಕಿಹೊಳಿ ಹೇಳಿದರು.

ಏಕತೆಯ ಸಂದೇಶ ಸಾರಿದ ಚೌಡಯ್ಯನವರು :ಈ ಮೊದಲು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಳಿತಕ್ಕೊಳಗಾದ ಸಮಾಜದ ಒಳಿತಿಗಾಗಿ ನಿರಂತರ ಶ್ರಮಿಸುತ್ತಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣನವರು ಜಾತಿ, ಮತಭೇದ ಭಾವದ ತಾರತಮ್ಯ ಹೋಗಲಾಡಿಸಿ ಸಮಾನತೆ ದಾರಿ ತೋರಿಸಿಕೊಟ್ಟಿದ್ದಾರೆ. ಬಸವಣ್ಣನವರ ವಿಚಾರ ಧಾರೆಯಂತೆ ಅಂಬಿಗರ ಚೌಡಯ್ಯನವರು ಸಹ ತಮ್ಮ ವಚನ ಸಾಹಿತ್ಯ ಮೂಲಕ ಏಕತೆಯ ಸಂದೇಶ ಸಾರಿದ್ದಾರೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ರವಿಕುಮಾರ ಮಾತನಾಡಿದರು. ನಿಜ ಶರಣ ಅಂಬಿಗರ ಚೌಡಯ್ಯನವರ ನರಸೀಪುರ ಪೀಠದ ಸ್ವಾಮೀಜಿ, ಶಾಸಕ ಆಸೀಫ್ (ರಾಜು) ಸೇಠ್, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಬಾಬಾಸಾಹೇಬ ಪಾಟೀಲ್, ಬೆಳಗಾವಿ ಜಿಲ್ಲಾ ಕೋಳಿ ಬೆಸ್ತ ಸಮಾಜದ ಅಧ್ಯಕ್ಷ ದಿಲೀಪ ಕುರಂದವಾಡೆ ಮತ್ತಿತರರು ಉಪಸ್ಥಿತರಿದ್ದರು.

ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ನಿಜ ಶರಣ ಅಂಬಿಗರ ಚೌಡಯ್ಯನವರ ಜೀವನ ಚರಿತ್ರೆ, ಅವರ ವಿಚಾರಧಾರೆ ವಚನ ಸಾಹಿತ್ಯದ ಪುಸ್ತಕವನ್ನು ಬಿಡುಗಡೆಗೊಳಿಸಿದರು.

ಮೆರವಣಿಗೆಗೆ ಚಾಲನೆ:ಅಶೋಕ ವೃತ್ತದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಡೊಳ್ಳು ಬಾರಿಸುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ನಗರದ ಕೋಟೆ ಕೆರೆಯಿಂದ ಪ್ರಾರಂಭವಾಗಿ ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ಚನ್ನಮ್ಮ ವೃತ್ತದ ಮಾರ್ಗದ ಮೂಲಕ ಸಂಚರಿಸಿ ಸರ್ದಾರ್ ಮೈದಾನಕ್ಕೆ ತಲುಪಿತು. ಮೆರವಣಿಗೆಯಲ್ಲಿ ಕುಂಭ ಮೇಳ, ಡೊಳ್ಳು ಕುಣಿತ, ಚಂಡೆ ವಾದ್ಯ, ಗಾರಡಿ ಗೊಂಬೆ, ಕಹಳೆ, ನಗಾರಿ ತಂಡ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು. ಆನೆ ಅಂಬಾರಿ, ಒಂಟೆ, ಕುದುರೆ ಮೆರವಣಿಗೆಯ ಮೆರಗು ಹೆಚ್ಚಿಸಿದವು.

ಇದನ್ನೂಓದಿ:ಪುತ್ರನಿಗೆ ಲೋಕಸಭೆ ಟಿಕೆಟ್ ವಿಚಾರ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿದ್ದೇನು?

ABOUT THE AUTHOR

...view details