ಕರ್ನಾಟಕ

karnataka

ETV Bharat / state

'ಹುಬ್ಬಳ್ಳಿ-ಧಾರವಾಡದಲ್ಲಿ ನಿಡೆಕ್ ಕಂಪನಿಯಿಂದ ಹೆಚ್ಚುವರಿ ₹150 ಕೋಟಿ ಹೂಡಿಕೆ, 800 ಉದ್ಯೋಗ ಸೃಷ್ಟಿ' - Invest Karnataka

ನಿಡೆಕ್ ಕಾರ್ಪೊರೇಷನ್ ರಾಜ್ಯದಲ್ಲಿ ಹೆಚ್ಚುವರಿಯಾಗಿ 150 ಕೋಟಿ ರೂ ಹೂಡಿಕೆ ಮಾಡುವ ಮೂಲಕ ತನ್ನ ಘಟಕ ವಿಸ್ತರಿಸಿಕೊಳ್ಳುತ್ತಿದೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ನಿಡೆಕ್ ಸಂಸ್ಥೆಯ ಅಧ್ಯಕ್ಷರ ಜೊತೆ ಸಚಿವ ಎಂ ಬಿ ಪಾಟೀಲ್
ನಿಡೆಕ್ ಸಂಸ್ಥೆಯ ಅಧ್ಯಕ್ಷರ ಜೊತೆ ಸಚಿವ ಎಂ.ಬಿ.ಪಾಟೀಲ್ (ETV Bharat)

By ETV Bharat Karnataka Team

Published : Sep 13, 2024, 7:19 AM IST

ಬೆಂಗಳೂರು: ಹುಬ್ಬಳ್ಳಿ-ಧಾರವಾಡ ಕೈಗಾರಿಕಾ ಪ್ರದೇಶದಲ್ಲಿ ಜಪಾನ್‌ನ ನಿಡೆಕ್ ಕಾರ್ಪೊರೇಷನ್ ಕಂಪನಿ ಹೆಚ್ಚುವರಿಯಾಗಿ 150 ಕೋಟಿ ರೂ. ಹೂಡಿಕೆಯೊಂದಿಗೆ ತನ್ನ ತಯಾರಿಕಾ ಘಟಕ ವಿಸ್ತರಿಸುತ್ತಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ನಿಡೆಕ್ ಮೋಷನ್ ಆ್ಯಂಡ್ ಎನರ್ಜಿ ಅಧ್ಯಕ್ಷ ಮೈಕೆಲ್ ಬ್ರಿಗ್ಸ್ ಅವರು ಗುರುವಾರ ಇಲ್ಲಿ ಸಚಿವರ ಜೊತೆಗೆ ನಡೆಸಿದ ಸಭೆಯಲ್ಲಿ ಈ ವಿಸ್ತರಣಾ ಯೋಜನೆಯನ್ನು ಪ್ರಕಟಿಸಲಾಗಿದೆ.

ಹೊಸ ಹೂಡಿಕೆಯು ಕರ್ನಾಟಕದ ಕೈಗಾರಿಕಾ ಉತ್ತೇಜನಾ ಕ್ರಮಗಳ ಬಗ್ಗೆ ನಿಡೆಕ್ ಹೊಂದಿರುವ ವಿಶ್ವಾಸದ ದ್ಯೋತಕ. ಈ ಯೋಜನೆಯ ಕಾಮಗಾರಿಯು 2025ರ ಮಾರ್ಚ್ ಒಳಗೆ ಪೂರ್ಣಗೊಳ್ಳಲಿದ್ದು, ಅಕ್ಟೋಬರ್ ವೇಳೆಗೆ ಕಾರ್ಯಾರಂಭ ಮಾಡಲಿದೆ. ಯೋಜನೆಯ ವಿಸ್ತರಣೆಯಿಂದ 800 ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ಸಚಿವರು ಹೇಳಿದ್ದಾರೆ.

ನಿಡೆಕ್ ಸಂಸ್ಥೆಯ ಅಧ್ಯಕ್ಷರ ಜೊತೆ ಸಚಿವ ಎಂ.ಬಿ.ಪಾಟೀಲ್ (ETV Bharat)

ಇಂಧನ ಸಂಗ್ರಹ ಪರಿಣತಿ ಬಳಕೆ: ಇಂಧನ ಸಂಗ್ರಹ ಕ್ಷೇತ್ರದಲ್ಲಿಯೂ ಪರಿಣತಿ ಮತ್ತು ಅಪಾರ ಅನುಭವ ಹೊಂದಿರುವ ನಿಡೆಕ್ ಸಹಯೋಗದಲ್ಲಿ ರಾಜ್ಯದಲ್ಲಿ ಉತ್ಪಾದನೆಯಾಗುವ ಹೆಚ್ಚುವರಿ ವಿದ್ಯುತ್ ಸಂಗ್ರಹದ ತಾಂತ್ರಿಕ ಸಾಧ್ಯತೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ರಾಸಾಯನಿಕಗಳಲ್ಲಿ ವಿದ್ಯುತ್‌ ಶೇಖರಣೆ ಮಾಡುವ ತಂತ್ರಜ್ಞಾನವು ಈಗಾಗಲೇ ಯುರೋಪ್‌ನಲ್ಲಿ ಬಳಕೆಯಲ್ಲಿದೆ. ಅದನ್ನು ರಾಜ್ಯದಲ್ಲಿಯೂ ಕಾರ್ಯಗತಗೊಳಿಸುವ ಸಾಧ್ಯತೆಗಳನ್ನು ಪರಿಶೀಲಿಸಲಾಯಿತು. ಈ ನಿಟ್ಟಿನಲ್ಲಿ ಇಂಧನ ಇಲಾಖೆಯ ಅಧಿಕಾರಿಗಳ ಜೊತೆಗೆ ವಿವರವಾಗಿ ಚರ್ಚಿಸಲು ಕಂಪನಿಗೆ ಸೂಚಿಸಲಾಗಿದೆ. ಇಂಧನ ಸಚಿವರೊಂದಿಗೆ ಭೇಟಿ ನಿಗದಿಪಡಿಸಲು ಅಧಿಕಾರಿಗಳಿಗೆ ಸಲಹೆ ನೀಡಲಾಗಿದೆ. ವಿದೇಶಗಳಲ್ಲಿ ಬಳಕೆಯಲ್ಲಿ ಇರುವ ಈ ತಂತ್ರಜ್ಞಾನವನ್ನು ರಾಜ್ಯದಲ್ಲಿಯೂ ಕಾರ್ಯಗತಗೊಳಿಸುವ ಸಾಧ್ಯತೆಗಳನ್ನು ಪರಿಶೀಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಮಾಹಿತಿ ತಿಳಿಸಿದ್ದಾರೆ.

ನಿಡೆಕ್ ಈ ಹಿಂದೆ ರಾಜ್ಯದಲ್ಲಿ 450 ಕೋಟಿ ರೂ. ಹೂಡಿಕೆ ಮಾಡಿತ್ತು. ಸಚಿವ ಪಾಟೀಲ್ ಅವರ ಇತ್ತೀಚಿನ ಜಪಾನ್ ಭೇಟಿಯ ನಂತರ ಕಂಪನಿ ಹೆಚ್ಚುವರಿ ಬಂಡವಾಳ ಹೂಡಿಕೆಗೆ ಮುಂದೆ ಬಂದಿದೆ.

ನಿಡೆಕ್‌ ಇಂಡಿಯಾದ ಅಧ್ಯಕ್ಷ ಹಾಗೂ ಕಂಟ್ರಿ ಮ್ಯಾನೇಜರ್‌ ಗಿರೀಶ್ ಕುಲಕರ್ಣಿ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಯುಕ್ತರಾಗಿರುವ ಗುಂಜನ್‌ ಕೃಷ್ಣ ಸಭೆಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಪ್ರಿಪೇಯ್ಡ್​-ಪೋಸ್ಟ್​ಪೇಯ್ಡ್​ ಕನೆಕ್ಷನ್​ ಬಗ್ಗೆ ನಿಮಗೆಷ್ಟು ಗೊತ್ತು, ಇದರಲ್ಲಿ ಯಾವ ಯೋಜನೆ ಬೆಸ್ಟ್? - Prepaid vs Postpaid

ABOUT THE AUTHOR

...view details