ಬೆಂಗಳೂರು: 2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟದ ಆರೋಪಿ ಹಾಗೂ ನಿಷೇಧಿತ ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆ ಸದಸ್ಯ ಟಿ.ನಾಸೀರ್ ಪರಪ್ಪನ ಅಗ್ರಹಾರ ಜೈಲಿನಲ್ಲಿರುವಾಗ ಇತರ ಆರೋಪಿಗಳಿಗೆ ಉಗ್ರ ಸಂಚಿಗೆ ತರಬೇತಿ ನೀಡಿದ ಆರೋಪ ಪ್ರಕರಣದ ಸಂಬಂಧ ತನಿಖೆ ನಡೆಸುತ್ತಿರುವ ಎನ್ಐಎ ಅಧಿಕಾರಿಗಳು ಇಂದು ನ್ಯಾಯಾಲಯಕ್ಕೆ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಟಿ.ನಾಸೀರ್ ಹಾಗೂ ತಲೆಮರೆಸಿಕೊಂಡಿರುವ ಜುನೈದ್ ಅಹಮದ್ ಸೇರಿದಂತೆ 8 ಆರೋಪಿಗಳ ವಿರುದ್ಧ 2024ರ ಜನವರಿಯಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದ ಎನ್ಐಎ, ಪ್ರಕರಣದ 9ನೇ ಆರೋಪಿಯಾಗಿ ಬಿಹಾರ ಮೂಲದ ವಿಕ್ರಂ ಕುಮಾರ್ ಆಲಿಯಾಸ್ ಛೋಟಾ ಉಸ್ಮಾನ್ ಎಂಬಾತನ ವಿರುದ್ಧ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಶಂಕಿತ ಉಗ್ರನ ವಿರುದ್ಧ ಭಾರತೀಯ ದಂಡ ಸಂಹಿತೆ, ಕಾನೂನು ಬಾಹಿರ ಚಟುವಟಿಕೆ ತಡೆಗಟ್ಟುವಿಕೆ ಕಾಯ್ದೆ ಹಾಗೂ ಸ್ಫೋಟಕ ವಸ್ತುಗಳ ಕಾಯ್ದೆಯ ವಿವಿಧ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ಧಾರೆ.
ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಅಪರಾಧ ಪ್ರಕರಣವೊಂದರಲ್ಲಿ ಟಿ.ನಾಸೀರ್ ಜೀವಾವಧಿ ಶಿಕ್ಷೆ ಅನುಭವಿಸುವಾಗ 2017ರಲ್ಲಿ ಕೊಲೆ ಪ್ರಕರಣದಲ್ಲಿ ಜೈಲುವಾಸಿಯಾಗಿದ್ದ ವಿಕ್ರಂ ಕುಮಾರ್ಗೆ ಜಿಹಾದ್ ಬಗ್ಗೆ ಬೋಧಿಸಿ ಮತಾಂಧತೆ ಬಗ್ಗೆ ಪ್ರವಚನ ನೀಡಿದ್ದ. 2023ರಲ್ಲಿ ಆರ್.ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಜುನೈದ್ ಸೇರಿ ಇತರ ಆರೋಪಿಗಳಿಗೂ ಉಗ್ರ ಸಂಚಿನ ಬಗ್ಗೆ ತರಬೇತಿ ನೀಡಿದ್ದ. ವಿಕ್ರಂ ಕುಮಾರ್ ಹಾಗೂ ಜುನೈದ್ ಅಹಮದ್ ಜಾಮೀನಿನ ಮೇರೆಗೆ ಇಬ್ಬರು ಹೊರ ಬಂದು ಪರಸ್ಪರ ಸಂಪರ್ಕ ಸಾಧಿಸಿದ್ದರು. ನಾಸೀರ್ ಅಣತಿಯಂತೆ ಇಬ್ಬರು ಬಾಂಬ್ ಸ್ಫೋಟದ ಸಂಚಿನಲ್ಲಿ ಭಾಗಿಯಾಗಿದ್ದರು ಎಂದು ಎನ್ಐಎ ತಿಳಿಸಿದೆ.